
ತಿರುಪತಿ: ದೇಶದ ಶ್ರೀಮಂತ ಕ್ಷೇತ್ರ ತಿರುಪತಿಯ ಶ್ರೀಗೋವಿಂದ ಸ್ವಾಮಿ ದೇವಾಲಯದಿಂದ ಅಂದಾಜು 1.3 ಕೇಜಿ ತೂಕದ ವಜ್ರ ಖಚಿತ ಮೂರು ಚಿನ್ನದ ಕಿರೀಟಗಳು ಕಳವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ದೇವಾಲಯ ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ಅಡಿಯಲ್ಲೇ ಬರುತ್ತಿದ್ದು, ಭಾರೀ ಭದ್ರತೆಯ ನಡುವೆಯೂ ದುಷ್ಕರ್ಮಿಗಳು ಹೇಗೆ ಈ ಕೃತ್ಯ ನಡೆಸಿರಬೇಕೆನ್ನುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವೆಂಕಟೇಶ್ವರ, ಶ್ರೀಲಕ್ಷ್ಮೀ ಮತ್ತು ಪದ್ಮಾವತಿ ದೇವರಿಗೆ ಅಲಂಕರಿಸುವ ಅನಾದಿಕಾಲದ ಕಿರೀಟಗಳು ಇವಾಗಿದ್ದು, ಶನಿವಾರ ರಾತ್ರಿ ಕಳುವಾಗಿರುವುದು ಬೆಳಕಿಗೆ ಬಂದಿದೆ. ದೇವಾಲಯದಲ್ಲಿ ಅಳವಡಿಸಲಾದ ಕ್ಯಾಮರಾ ಫೂಟೇಜ್‌ಗಳಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿರುವ ಸಾಧ್ಯತೆ ಇದ್ದು, ಪರಿಶೀಲಿಸಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಟಿಟಿಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶನಿವಾರ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಮಹಿಳಾ ಸಿಬ್ಬಂದಿಯೊಬ್ಬರು ಮೂರು ಕಿರೀಟಗಳು ಸ್ಥಳದಲ್ಲಿ ಕಾಣಸದೇ ಇರುವುದನ್ನು ಟಿಟಿಡಿ ಅಧಿಕಾರಿಗಳ ಗಮನಕ್ಕೆ ತಂದರು. ಪರಿಶೀಲಿಸಿದಾಗ ಪ್ರಮುಖ ಮೂರು ಕೀರೀಟಗಳೇ ಕಳುವಾಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.
ತನಿಖೆಗೆ ಆರು ತಂಡ ರಚನೆ: ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಗೆ ಆರು ತಂಡಗಳನ್ನು ರಚಿಸಲಾಗಿದೆ. ಬೇರೆ ಬೇರೆ ದೃಷ್ಟಿಕೋನದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ, ಅನುಮಾನಾಸ್ಪದ ಕೆಲ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿರುಪತಿ ನಗರ ಎಸ್ಪಿ ಅನ್ಬುರಾಜನ್ ತಿಳಿಸಿದ್ದಾರೆ.
ಬಿಜೆಪಿ ಪ್ರತಿಭಟನೆ: ಕಿರೀಟ ಕಳವು ಪ್ರಕರಣದ ಬೆನ್ನಲ್ಲೇ ಆಂಧ್ರಪ್ರದೇಶ ಬಿಜೆಪಿ ದೇವಾಲಯದ ಭದ್ರತೆ ಪ್ರಶ್ನಿಸಿ ದೇವಾಲಯದ ಎದುರು ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಮಾಹಿತಿ ಒದಗಿಸುವಂತೆ ಒತ್ತಾಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ