3 ವಿಧಾನ ಮಂಡಲಗಳ ಅಧಿವೇಶನ : ‘ನೆರೆ’ ಬಗ್ಗೆ ಚರ್ಚೆ

By Kannadaprabha NewsFirst Published Oct 9, 2019, 7:14 AM IST
Highlights

ಮೂರು ದಿನಗಳ ಕಾಳ ವಿಧಾನಮಂಡಲ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಈ ವೇಳೆ ವಿವಿಧ ವಿಚಾರಗಳ ಚರ್ಚೆ ನಡೆಯಲಿದೆ. 

ಬೆಂಗಳೂರು [ಅ.09]:   ನೆರೆ ಪರಿಹಾರ ಕುರಿತು ಪ್ರತಿಪಕ್ಷಗಳು ಮತ್ತು ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪಗಳ ವಿನಿಮಯ ನಡೆಯುತ್ತಿರುವುದರ ನಡುವೆಯೇ ಗುರುವಾರದಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದ್ದು, ‘ಜಂಗೀ ಕುಸ್ತಿ’ ನಡೆಯುವ ಸಾಧ್ಯತೆಯಿದೆ.

ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಎರಡನೇ ಅಧಿವೇಶನ ಇದಾಗಿದ್ದು, ಸ್ಪೀಕರ್‌ ಆಯ್ಕೆಗಾಗಿ ಕಳೆದ ಜುಲೈನಲ್ಲಿ ಕರೆದಿದ್ದ ಮೊದಲ ಅಧಿವೇಶನದಲ್ಲಿ ಯಾವುದೇ ಮಹತ್ವದ ಚರ್ಚೆ ನಡೆದಿರಲಿಲ್ಲ.

ಗುರುವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದ್ದು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಂಭವಿಸಿರುವ ನೆರೆಪೀಡಿತ ಪ್ರದೇಶಗಳಲ್ಲಿ ಸರ್ಕಾರ ಸಮರ್ಪಕ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂಬ ಆರೋಪದೊಂದಿಗೆ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಮುಗಿಬೀಳಲು ಸಜ್ಜಾಗಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲು ರಾಜ್ಯ ಸರ್ಕಾರವೂ ಸಿದ್ಧತೆ ಕೈಗೊಂಡಿದ್ದು, ಹಿಂದಿನ ಸರ್ಕಾರಗಳ ವೇಳೆ ನೆರೆ ಪರಿಹಾರ ಸಂದರ್ಭ ಎಷ್ಟೆಷ್ಟುಮತ್ತು ಯಾವಾಗ ಪರಿಹಾರ ಬಿಡುಗಡೆ ಮಾಡಲಾಗಿತ್ತು ಎಂಬೆಲ್ಲ ಅಂಕಿ ಅಂಶಗಳೊಂದಿಗೆ ಸದನದಲ್ಲಿ ಮುಂದಿಡಲು ನಿರ್ಧರಿಸಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದ್ದರೂ ರಾಜ್ಯದಲ್ಲಿನ ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಕೇಂದ್ರ ಸರ್ಕಾರ ಒಂದು ರುಪಾಯಿ ಕೂಡ ಬಿಡುಗಡೆ ಮಾಡಿಲ್ಲ ಎಂಬ ಪ್ರಬಲ ಅಸ್ತ್ರವನ್ನು ಮುಂದಿಟ್ಟುಕೊಂಡು ಈ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಂತ್ರ ರೂಪಿಸಿದ್ದವು. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ತೀವ್ರ ಸಂಕಷ್ಟಕ್ಕೀಡು ಮಾಡಿತ್ತು. ಆದರೆ, ಕಳೆದ ವಾರ ಕೇಂದ್ರ ಸರ್ಕಾರ 1,200 ಕೋಟಿ ರು.ಗಳನ್ನು ನೆರೆ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಇದೀಗ ಯಡಿಯೂರಪ್ಪ ನಿರಾಳರಾಗಿದ್ದು, ಪ್ರತಿಪಕ್ಷಗಳನ್ನು ಎದುರಿಸಲು ಮುಂದಾಗಿದ್ದಾರೆ.

ಇಂದು ಸಚಿವರ ಸಭೆ

ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ವಾಗ್ದಾಳಿ ಎದುರಿಸಲು ಸಜ್ಜಾಗುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ತಮ್ಮ ಸಂಪುಟದ ಎಲ್ಲ ಸಚಿವರ ಸಭೆ ಕರೆದಿದ್ದಾರೆ.

ಸಂಜೆ 4 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಭೆ ಕರೆದಿದ್ದು, ಇದರಲ್ಲಿ ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ. ಅಧಿವೇಶನದಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಬಹುದಾದ ಅಂಶಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಸಚಿವರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಬಿಜೆಪಿ ಶಾಸಕಾಂಗ ಸಭೆ

ವಿಧಾನಮಂಡಲದ ಅಧಿವೇಶನದ ಮುನ್ನಾ ದಿನವಾದ ಬುಧವಾರ ಆಡಳಿತಾರೂಢ ಬಿಜೆಪಿಯ ಶಾಸಕಾಂಗ ಸಭೆಯೂ ನಡೆಯಲಿದೆ.

ಸಂಜೆ 6 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಅಧಿವೇಶನದಲ್ಲಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಒಡಕಿನ ಮಾತು ಆಡದೆ ಒಗ್ಗಟ್ಟು ಪ್ರದರ್ಶಿಸಲು ಶಾಸಕರಿಗೆ ಸೂಚನೆ ನೀಡಲಾಗುತ್ತದೆ. ಜೊತೆಗೆ ಸದನದಲ್ಲಿ ಸಕ್ರಿಯವಾಗಿ ಹಾಜರಿರಲು ನಿರ್ದೇಶನ ನೀಡಲಾಗುತ್ತದೆ ಎನ್ನಲಾಗಿದೆ.

ಅಧಿವೇಶನ ವಿಸ್ತರಣೆ ಆಗುತ್ತಾ?

ವಿಧಾನಮಂಡಲದ ಅಧಿವೇಶನ ಈಗ ನಿಗದಿಯಾಗಿರುವಂತೆ ಮೂರು ದಿನಗಳ ಕಾಲ ಮಾತ್ರ ನಡೆಯುತ್ತದೆಯೇ ಅಥವಾ ವಿಸ್ತರಣೆಯಾಗುತ್ತದೆಯೆ ಎಂಬುದು ಕುತೂಹಲಕರವಾಗಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿತ್ತು. ಅಂದರೆ, ಗುರುವಾರದಿಂದ ಶನಿವಾರದವರೆಗೆ ಮೂರು ದಿನಗಳ ಕಾಲ ನಿಗದಿಯಾಗಿದೆ. ಆದರೆ, ಇದೀಗ ಉಪಚುನಾವಣೆ ಮುಂದೂಡಿಕೆಯಾಗಿದ್ದರಿಂದ ಅಧಿವೇಶನದ ಅವಧಿ ವಿಸ್ತರಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಈ ಬಗ್ಗೆ ಮೊದಲ ದಿನವಾದ ಗುರುವಾರ ಸದನ ಕಲಾಪ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿದ ನಂತರ ಸ್ಪಷ್ಟನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿದುಬಂದಿದೆ.

click me!