
ವಿಜಯಪುರ (ಜು.14): ಹಾಲಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವತ್ತ ಗಮನ ಹರಿಸುತ್ತಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಕಾಂಗ್ರೆಸ್ ಸರ್ಕಾರ ಗಮನ ಹರಿಸಲಿಲ್ಲ. ಇದರಾಚೆ ಇಡೀ ಲಿಂಗಾಯತ ಸಮಾಜಕ್ಕಾದರೂ ಮೀಸಲಾತಿ ನೀಡಬೇಕೆಂದು ಒತ್ತಾಯ ಮಾಡಿದರೂ ಉಪಯೋಗವಾಗಲಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಟಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ನಗರದ ಶಿವಾನುಭವ ಮಂಟಪದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ವಕೀಲರ ಪರಿಷತ್ ಸಭೆ ಹಾಗೂ ವಕೀಲರ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಚಿಂತನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮೀಸಲಾತಿಗಾಗಿ ಮುಂದಿನ ಹೋರಾಟದ ರೂಪುರೇಷೆ ಸ್ವರೂಪಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. ಪಂಚಮಸಾಲಿ ಮೀಸಲಾತಿಗಾಗಿ ಈ ವರೆಗೆ ನಡೆದ ಹೋರಾಟಗಳು ಹಾಗೂ ಅವುಗಳು ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹೋರಾಟದ ವೇಳೆ ಬೆಳಗಾವಿಯ ಅಧಿವೇಶನದ ವೇಳೆ ನಮ್ಮ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಹಿಂದಿನ ಯಾವುದೇ ಸರ್ಕಾರ ಇಂಥ ಕೃತ್ಯ ಮಾಡಿಲ್ಲ. ಇದನ್ನು ಹೈಕೋರ್ಟ್‌ನಲ್ಲಿ ದಾವೆ ಮಾಡಿದಾಗ ನ್ಯಾಯಾಂಗ ತನಿಖೆಗೆ ಆದೇಶವಾಗಿದೆ. ನ್ಯಾಯಾಂಗ ವಿಭಾಗದಲ್ಲಿ ಹೋರಾಟ ಮಾಡಲು ಪಂಚಮಸಾಲಿ ವಕೀಲರ ಪರಿಷತ್ ರಚನೆ ಮಾಡಲಾಗಿದೆ. ಸಾಮಾಜಿಕ ಆರ್ಥಿಕ ಔದ್ಯೋಗಿಕ ಸಮೀಕ್ಷೆಯ ವರದಿಯ ವಿರುದ್ಧವೂ ಸ್ವಾಮೀಜಿ ಕಿಡಿ ಕಾರಿದರು.
ಮುಂದಿನ ಜಾತಿಗಣತಿ ವೇಳೆ ಎಲ್ಲರೂ ಸರಿಯಾಗಿ ಜಾತಿಯನ್ನು ನಮೂದು ಮಾಡಬೇಕು. 2028ರ ಚುನಾವಣೆ ಪೂರ್ವ ಗ್ರಾಮ ಗ್ರಾಮಗಳಲ್ಲಿ ಪಂಚಮಸಾಲಿ 2ಎ ಮೀಸಲಾತಿ ಜಾಗೃತಿ ಮೂಡಿಸಬೇಕು ಎಂದು ಸಭೆಯಲ್ಲಿ ಸ್ವಾಮೀಜಿ ಎಚ್ಚರಿಸಿದರು. ಈ ಸಭೆಯಲ್ಲಿ ವಕೀಲರ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ, ನ್ಯಾಯವಾದಿ ದಾನೇಶ ಅವಟಿ ಸೇರಿದಂತೆ 400 ವಕೀಲರು ಭಾಗವಹಿಸಿದ್ದರು.
ಸಭೆಯಲ್ಲಿ ವಕೀಲರ ಪರಿಷತ್ತಿನಲ್ಲಿ ಪಂಚಮಸಾಲಿ ಹೋರಾಟದ ಬಗ್ಗೆ ಮುಂದಿನ ಹಾದಿಯ ಕುರಿತು ಚರ್ಚೆ ನಡೆಸಲಾಯಿತು. ವೇದಿಕೆ ಮೇಲೆ ಕೂಡಲ ಸಂಗಮ ಶ್ರೀಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು. ವೇದಿಕೆ ಮುಂಭಾಗದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಕೀಲರ ಪರಿಷತ್ ಪದಾಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 400ಕ್ಕೂ ಅಧಿಕ ವಕೀಲರು ಹೋರಾಟದ ರೂಪುರೇಷೆಯ ಕುರಿತು ಚರ್ಚಿಸಿದರು. ವಕೀಲರ ಪರಿಷತ್ತಿನ ಮೂಲಕ ಮೀಸಲಾತಿ ಹೋರಾಟ ಮಾಡುವ ಬಗ್ಗೆಯೂ ಚರ್ಚೆಯನ್ನು ನಡೆಸಲಾಯಿತು.
ಮುಂದಿನ ರಾಷ್ಟ್ರಮಟ್ಟದ ಜನಗಣತಿಯಲ್ಲಿ ಪಂಚಮಸಾಲಿ ಸಮಾಜದವರು ಏನು ಬರೆಸಬೇಕು ಹಾಗೂ ಇತರೆ ಹೋರಾಟದ ಕುರಿತು ಸಭೆ ಮಾಡಲಾಗಿದೆ. ವಕೀಲರ ಪರಿಷತ್ ಮೂಲಕ ಯಾವುದನ್ನು ಬರೆಸಬೇಕೆಂದು ನಿರ್ಧಾರ ಮಾಡಲಾಗುತ್ತದೆ. ಈಗಾಗಲೇ 2ಡಿ ಮೀಸಲಾತಿ ನೀಡಲಾಗಿದೆ. 2ಡಿ ಹೋರಾಟ ಪಂಚಮಸಾಲಿ ಅಷ್ಟೇಯಲ್ಲಾ ಇತರೆ ಸಮಾಜಗಳನ್ನು ಒಳಗೊಂಡಿದೆ. ಹಾಗಾಗಿ 2ಡಿ ಮೀಸಲಾತಿ ಸಿಗಬೇಕಾದರೆ ಏನೆಲ್ಲಾ ಹೋರಾಟ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
-ಬಸನಗೌಡ ಪಾಟೀಲ ಯತ್ನಾಳ, ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ