
ಬೆಂಗಳೂರು (ಜೂ.01): ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದ ಮೇರೆಗೆ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವ ಲೋಕಾಯುಕ್ತ ಪೊಲೀಸರು ರಾಜ್ಯದಲ್ಲಿ ಏಳು ಅಧಿಕಾರಿಗಳಿಗೆ ಸೇರಿದ 33 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ₹24.47 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. ಬಲ್ಲ ಮೂಲಗಳ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಉಡುಪಿ, ಗದಗ ಮತ್ತು ಧಾರವಾಡದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಬೆಳಗಾವಿಯಲ್ಲಿ ದೇವರಾಜು ಅರಸ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗಪ್ಪ ಬನಸಿ, ಬಾಗಲಕೋಟೆಯಲ್ಲಿ ಆಡಿಟ್ ಆಫೀಸ್‌ನ ಪ್ರಥಮ ದರ್ಜೆ ಸಹಾಯಕ ಶೈಲ್ ಸುಭಾಷ್ ತತ್ರಾನಿ, ಬಳ್ಳಾರಿಯಲ್ಲಿ ಪಿಡಬ್ಲ್ಯೂಡಿ ಅಧೀಕ್ಷಕ ಎಂಜಿನಿಯರ್, ಅಮಿನ್ ಮುಕ್ತರ್ ಅಹಮದ್, ಹಾವೇರಿ ಜಿಲ್ಲೆಯಲ್ಲಿ ಬಾಡ ಗ್ರಾಪಂ ಪಿಡಿಓ ರಾಮಕೃಷ್ಣ ಬಾಳಪ್ಪ ಗುಡಗೇರಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮೆಸ್ಕಾಂ ಲೆಕ್ಕಾಧಿಕಾರಿ ಗಿರೀಶ್ ರಾವ್, ಗದಗ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ವೀರಪ್ಪ ಶಿರೋಳ, ಧಾರವಾಡದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಎಚ್.ಸುರೇಶ್ ಅವರಿಗೆ ಸೇರಿದ ಮತ್ತು ಅವರ ಸಂಬಂಧಿಕರ ಸ್ಥಳಗಳ ಮೇಲೆ ಕಾರ್ಯಾಚರಣೆ ಕೊಳ್ಳಲಾಗಿದೆ.
ದಾಳಿ ನಡೆಸಿದ ಅಧಿಕಾರಿಗಳ ಪೈಕಿ ಬಳ್ಳಾರಿಯ ಪಿಡಬ್ಲ್ಯೂಡಿ ಅಧೀಕ್ಷಕ ಎಂಜಿನಿಯರ್ ಅಮಿನ್ ಮುಕ್ತರ್ ಅಹಮದ್ ಬಳಿ ಅತಿ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ಒಟ್ಟು ₹7.31 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿದೆ. 31 ನಿವೇಶನಗಳು, ₹25.49 ಲಕ್ಷ ನಗದು, ₹79 ಲಕ್ಷ ಮೌಲ್ಯದ ಚಿನ್ನಾಭರಣಗಳು ಸಿಕ್ಕಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾದ ವಿವರ
1.ಸಿದ್ದಲಿಂಗಪ್ಪ ನಿಂಗಪ್ಪ ಬನಸಿ, ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸ್ ಅಭಿವೃದ್ದಿ ನಿಗಮ, ಸುವರ್ಣ ಸೌಧ, ಬೆಳಗಾವಿ.
3 ಸ್ಥಳಗಳಲ್ಲಿ ಶೋಧ, 4 ನಿವೇಶನಗಳು, 1 ವಾಸದ ಮನೆ ಸೇರಿ ಒಟ್ಟು ₹1.02 ಕೋಟಿ ಮೌಲ್ಯದ ಸ್ಥಿರಾಸ್ತಿ, ₹18 ಸಾವಿರ ನಗದು, ₹34.64 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹10.60 ಲಕ್ಷ ಮೌಲ್ಯದ ವಾಹನಗಳು ಸೇರಿ ₹45.42 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು ₹1.48 ಕೋಟಿ ಮೌಲ್ಯದ ಆಸ್ತಿ ಪತ್ತೆ.
2. ಶೈಲ್ ಸುಭಾಷ ತತ್ರಾನಿ, ಪ್ರ.ದ.ಸ, ಆಡಿಟ್ ಆಫೀಸ್, ಬಾಗಲಕೋಟೆ.
4 ಸ್ಥಳಗಳಲ್ಲಿ ಕಾರ್ಯಾಚರಣೆ, 3 ನಿವೇಶನಗಳು, 6 ವಾಸದ ಮನೆಗಳು, 6.38 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹2.27 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆ. ₹21 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹45.60 ಲಕ್ಷ ಮೌಲ್ಯದ ವಾಹನಗಳು ಸೇರಿ ₹66.61 ಲಕ್ಷ ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಒಟ್ಟು ₹2.93 ಕೋಟಿ ಮೌಲ್ಯದ ಸಿಕ್ಕಿದೆ.
3. ಅಮಿನ್ ಮುಕ್ತರ್ ಅಹಮದ್, ಅಧೀಕ್ಷಕ ಎಂಜಿನಿಯರ್, ಪಿಡಬ್ಲ್ಯೂಡಿ, ಬಳ್ಳಾರಿ.
5 ಸ್ಥಳಗಳಲ್ಲಿ ಪರಿಶೀಲನೆ, 31 ನಿವೇಶನಗಳು, 2 ವಾಸದ ಮನೆ, 5.30 ಎಕರೆ ಕೃಷಿ ಜಮೀನು ಸೇರಿ ₹5.71 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದ್ದು, ₹25.49 ಲಕ್ಷ ನಗದು, ₹79 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹47.10 ಲಕ್ಷ ಮೌಲ್ಯದ ವಾಹನಗಳು, ₹10 ಲಕ್ಷ ಮೌಲ್ಯದ ಇತರೆ ಗೃಹೋಪಯೋಗಿ ವಸ್ತುಗಳು ಸೇರಿ ₹1.61 ಕೋಟಿ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ₹7.31 ಕೋಟಿ ಮೌಲ್ಯದ ಆಸ್ತಿ ಲಭ್ಯವಾಗಿದೆ.
4. ರಾಮಕೃಷ್ಣ ಬಾಳಪ್ಪ ಗುಡಗೇರಿ, ಪಿಡಿಓ, ಬಾಡ ಗ್ರಾಪಂ, ಶಿಗ್ಗಾವಿ ತಾಲೂಕು, ಹಾವೇರಿ.
2 ಸ್ಥಳಗಳಲ್ಲಿ ಶೋಧ ಕಾರ್ಯ, 2 ನಿವೇಶನಗಳು, 1 ವಾಸದ ಮನೆ, 9.7 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹86.16 ಲಕ್ಷ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹79 ಸಾವಿರ ನಗದು, ₹8.53 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹13.50 ಲಕ್ಷ ಮೌಲ್ಯದ ವಾಹನಗಳು, ₹10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು ₹32.82 ಲಕ್ಷ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ₹1.18 ಕೋಟಿ ಮೌಲ್ಯದ ಆಸ್ತಿ ಪತ್ತೆ.
5. ಗಿರೀಶ್ ರಾವ್, ಲೆಕ್ಕಾಧಿಕಾರಿ, ಮೆಸ್ಕಾಂ, ಕಾರ್ಕಳ, ಉಡುಪಿ.
5 ಸ್ಥಳಗಳಲ್ಲಿ ಪರಿಶೀಲನೆ, 5 ನಿವೇಶನಗಳು, 1 ವಾಸದ ಮನೆ, 1 ವಾಣಿಜ್ಯ ಮಳಿಗೆ ಸೇರಿ ಒಟ್ಟು ₹2.48 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದ್ದು, ₹4 ಸಾವಿರ ನಗದು, ₹30.25 ಲಕ್ಷ ಮೌಲ್ಯದ ಚಿನ್ನಾಭರಣ, ₹9.50 ಲಕ್ಷ ಮೌಲ್ಯದ ವಾಹನಗಳು, ₹1.24 ಲಕ್ಷ ಮೌಲ್ಯದ ಮೊಬೈಲ್ ಫೋನ್ ಸೇರಿ ₹41 ಲಕ್ಷ ಮೌಲ್ಯದ ಚರಾಸ್ತಿ ಲಭ್ಯ. ಒಟ್ಟು ₹2.89 ಕೋಟಿ ಮೌಲ್ಯದ ಆಸ್ತಿ ಪತ್ತೆ.
6. ಗಂಗಾಧರ ವೀರಪ್ಪ ಶಿರೋಳ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಗದಗ.
7 ಸ್ಥಳಗಳಲ್ಲಿ ತಪಾಸಣೆ, 4 ನಿವೇಶನಗಳು, 7 ವಾಸದ ಮನೆಗಳು, 3.29 ಎಕರೆ ಕೃಷಿ ಜಮೀನು ಸೇರಿ ₹2.68 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹25 ಸಾವಿರ ನಗದು, ₹27.53 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹17.30 ಲಕ್ಷ ಮೌಲ್ಯದ ವಾಹನಗಳು, ₹21.25 ಲಕ್ಷ ಬ್ಯಾಂಕ್ ಉಳಿತಾಯ ಸೇರಿ ₹66.33 ಲಕ್ಷ ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಒಟ್ಟು ₹3.34 ಕೋಟಿ ಆಸ್ತಿ ಪತ್ತೆ.
7. ಎಚ್.ಸುರೇಶ್, ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಧಾರವಾಡ.
7 ಸ್ಥಳಗಳಲ್ಲಿ ಶೋಧ ಕಾರ್ಯ, 2 ನಿವೇಶನಗಳು, 2 ವಾಸದ ಮನೆಗಳು, 6 ವಾಣಿಜ್ಯ ಮಳಿಗೆಗಳು, 11.35 ಎಕರೆ ಕೃಷಿ ಜಮೀನು ಸೇರಿ ₹2.89 ಕೋಟಿ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹76 ಸಾವಿರ ನಗದು, ₹23.98 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹26 ಲಕ್ಷ ಮೌಲ್ಯದ ವಾಹನಗಳು, ₹1.65 ಕೋಟಿ ಮೌಲ್ಯದ ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್, ₹25 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹2.40 ಕೋಟಿ ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಒಟ್ಟು ₹5.30 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ