ಬೆಂಗಳೂರು (ಸೆ.05): ಕೊರೋನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಿರುವ ಅಗತ್ಯ ಸಿದ್ಧತೆಗಳ ಕುರಿತು ಶನಿವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಅಗತ್ಯ ಔಷಧ ಹಾಗೂ ವೈದ್ಯಕೀಯ ಪರಿಕರಗಳ ಖರೀದಿಗೆ 17.72 ಕೋಟಿ ರು. ಬಿಡುಗಡೆಗೆ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರನೇ ಅಲೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ತಜ್ಞರ ಪ್ರಕಾರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಡುವೆ ರಾಜ್ಯದಲ್ಲೂ ಮೂರನೇ ಅಲೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೂರನೇ ಅಲೆ ಬಾರದಂತೆ ತಡೆಯಬೇಕು. ಒಂದೊಮ್ಮೆ ಮೂರನೇ ಅಲೆ ಉಂಟಾದರೆ ಅಗತ್ಯ ಔಷಧ, ಆಕ್ಸಿಜನ್, ವೈದ್ಯಕೀಯ ಪರಿಕರಗಳನ್ನು ಈಗಲೇ ಸಿದ್ಧ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
undefined
2ನೇ ಅಲೆಗಿಂತ 3ನೇ ಅಲೆ ತೀವ್ರ : ಎಚ್ಚರಿಕೆ
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕೊರೋನಾ ಚಿಕಿತ್ಸೆಗೆ ಅಗತ್ಯವಿರುವ 50ಕ್ಕೂ ಹೆಚ್ಚು ಮಾದರಿಯ ಔಷಧಗಳ ಖರೀದಿಗೆ 17.72 ಕೋಟಿ ರು. ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಜತೆಗೆ ವಾರಾಂತ್ಯದ ಕಫä್ರ್ಯ ಹಾಗೂ ಗಣೇಶೋತ್ಸವ ಕುರಿತು ನಿರ್ಧಾರ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಲಾಗಿದೆ ಎಂದು ಹೇಳಿದರು.
ಶಿವಕುಮಾರ ಸ್ವಾಮೀಜಿ ಗ್ರಾಮಕ್ಕೆ 5 ಕೋಟಿ: ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ರಾಮನಗರದ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ 25 ಕೋಟಿ ರು. ವೆಚ್ಚದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ ಗಡಿನಾಡು ಅಭಿವೃದ್ಧಿ ಮಂಡಳಿಯು ನಿರ್ಮಾಣ ಕಾರ್ಯದಿಂದ ಹಿಂದೆ ಸರಿದ ಕಾರಣ ಕೆಆರ್‌ಐಡಿಎಲ್ ವತಿಯಿಂದ ಕೈಗೊಳ್ಳಲು ನಿರ್ಧರಿಸಲಾಗಿದೆ. ಆರಂಭಿಕವಾಗಿ 5 ಕೋಟಿ ರು. ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಐಟಿಐ ವಿದ್ಯಾರ್ಥಿಗಳಿಗೆ ಟೂಲ್‌ಕಿಟ್: ಪ್ರಸಕ್ತ 2021-22ನೇ ಸಾಲಿನಲ್ಲಿ ರಾಜ್ಯದ ಎಲ್ಲ ಐಟಿಐಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟಜಾತಿ, ಪಂಗಡದ 13061 ವಿದ್ಯಾರ್ಥಿಗಳಿಗೆ ಟೂಲ್‌ಕಿಟ್ ಖರೀದಿಗೆ 17.18 ಕೋಟಿ ರು. ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ.
ಉಳಿದಂತೆ ಕೃಷಿ ಇಲಾಖೆ ಅಧೀನದಲ್ಲಿನ ಬೀಜ ನಿಗಮಕ್ಕೆ ಬೀಜೋತ್ಪಾದನಾ ಕಾರ್ಯಗಳಿಗೆ ನೀಡಲಾಗಿದ್ದ 10 ಕೋಟಿ ರು. ಕ್ಯಾಶ್ ಕ್ರೆಡಿಟ್ ಸೌಲಭ್ಯವನ್ನು 20 ಕೋಟಿ ರು.ಗೆ ಹೆಚ್ಚಿಸಿ ಸರಕಾರದ ಖಾತರಿ (ಗ್ಯಾರಂಟಿ) ಮುಂದುವರಿಸುವುದು. ಹಾಗೆಯೇ ನಿಗಮದ ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ಅಗತ್ಯವಾದ 400 ಕೋಟಿ ರು. ದುಡಿಯುವ ಬಂಡವಾಳ ಸಾಲ ಸೌಲಭ್ಯಕ್ಕೆ ಸರಕಾರದ ಗ್ಯಾರಂಟಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಆಯ್ದ 26 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ 2011-12ನೇ ಸಾಲಿನಲ್ಲಿ ಟೆಂಡರ್ ಹಂಚಿಕೆಯಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕಾಮಗಾರಿ ನಡೆದಿರಲಿಲ್ಲ. ಇದೀಗ ಹೊಸದಾಗಿ ಟೆಂಡರ್ ಕರೆದು 98.50 ಕೋಟಿ ರು. ಮಂಜೂರಾತಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ ಹೂಡಿಕೆ ಆಕರ್ಷಣೆಗೆ ನೆರವು ಪಡೆಯುವ ನಿಟ್ಟಿನಲ್ಲಿ ಬೋಸ್ಟನ್ ಕನ್‌ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇವೆ ಬಳಸಿಕೊಳ್ಳಲಾಗಿತ್ತು. ಆದರೆ ಕಳೆದ ಬಾರಿ ಕೋವಿಡ್ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಹೂಡಿಕೆಗೆ ಉತ್ತೇಜನ ದೊರಕಿಲ್ಲ. ಈ ಬಾರಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಸೇರಿದಂತೆ ಇತರೆ ಹೂಡಿಕೆ ಆಕರ್ಷಣೆಗೆ ನೆರವು ಪಡೆಯಲು ಇದೇ ಸಂಸ್ಥೆಗೆ ಕಳೆದ ವರ್ಷದಂತೆ ಇನ್ನೊಂದು ವರ್ಷದ ಅವಧಿಗೆ 12 ಕೋಟಿ ರು. ಭರಿಸಲು ಒಪ್ಪಿಗೆ ಕೊಡಲಾಗಿದೆ ಎಂದು ಹೇಳಿದರು.
ಸಂಪುಟದ ಇತರೆ ನಿರ್ಣಯಗಳು
* ಚಿತ್ರದುರ್ಗದ ಮೊಳಕಾಲ್ಮುರು ತಾಲ್ಲೂಕಿನ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿಯ 10.97 ಕೋಟಿ ರು. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
* ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮಿನಿ ವಿಧಾನಸೌಧ ಕಾಮಗಾರಿಗೆ 12.28 ಕೋಟಿ ರು. ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಒಪ್ಪಿಗೆ
* ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿ ಕೊಪ್ಪ ಗ್ರಾಮದ ಸರ್ವೇ ನಂಬರ್ 110ರಲ್ಲಿನ ಅರಣ್ಯ ಇಲಾಖೆಯ 2.10 ಎಕರೆಯಲ್ಲಿದ್ದ ವೀವರ್ಸ್ ಕಾಲೋನಿ ನಿವಾಸಿಗಳಿಗೆ ವಸತಿ ಕಲ್ಪಿಸಿ ಅರಣ್ಯ ಇಲಾಖೆಗೆ ಪರ್ಯಾಯವಾಗಿ 2.10 ಎಕರೆ ಭೂಮಿ ನೀಡಲು ಒಪ್ಪಿಗೆ
* ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಹೈಕೋರ್ಟ್ ಆದೇಶದಡಿ ಪರಿಷ್ಕೃತ ದರದಲ್ಲಿ ನರಸಿಂಹರಾಜಪುರದಲ್ಲಿ 116 ಎಕರೆ ಹಾಗೂ ಅಜ್ಜಂಪುರದಲ್ಲಿ 116 ಎಕರೆ ಭೂಮಿ ಸ್ವಾಧೀನಕ್ಕೆ ಹೆಚ್ಚುವರಿ 1.97 ಕೋಟಿ ರು. ಶುಲ್ಕ ಪಾವತಿಗೆ ಒಪ್ಪಿಗೆ
* ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗಳಿಗೆ 12.65 ಕೋಟಿ ರು. ವೆಚ್ಚದಲ್ಲಿ ಯುಪಿಎಸ್, ಬ್ಯಾಟರಿ ಖರೀದಿಗೆ ಘಟನೋತ್ತರ ಅನುಮೋದನೆ
* ರಾಮನಗರದ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ಜಿಟಿಟಿಸಿ ಕೇಂದ್ರಗಳನ್ನು ನಬಾರ್ಡ್ ಆರ್‌ಐಡಿಎಫ್- 27 ಯೋಜನೆಯಡಿ 101.97 ಕೋಟಿ ರು. ವೆಚ್ಚದಲ್ಲಿ ಸರಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವಾಗಿ ಸ್ಥಾಪಿಸಲು ಅನುಮತಿ
* ಸುಗ್ರೀವಾಜ್ಞೆ ಬದಲಿಗೆ ‘ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ತಿದ್ದುಪಡಿ) ವಿಧೇಯಕ’ ಮಂಡನೆಗೆ ಒಪ್ಪಿಗೆ
* ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿದ್ಯಾರಣ್ಯಪುರ ಡಂಪ್‌ಸೈಟ್‌ನಲ್ಲಿರುವ 3.08 ಲಕ್ಷ ಟನ್ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿಗೆ 14.38 ಕೋಟಿ ರು. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ