ಜೈಲು ಸೇರಿದ್ದ 6 ಸಹೋದರರು ಸನ್ನಡತೆಯಿಂದ ಬಿಡುಗಡೆ

By Kannadaprabha News  |  First Published Oct 22, 2019, 9:54 AM IST

ಅರಿತೋ ಅರಿಯದೆಯೋ ಮಾಡಿದ ತಪ್ಪಿಗೆ ಸೆರೆಮನೆ ವಾಸ ಅನುಭವಿಸಿ ಸನ್ನಡತೆ ಆಧಾರದಡಿ ಇದೀಗ 141 ಕೈದಿಗಳು ಸ್ವತಂತ್ರರಾಗಿ ಹೊರ ಬಂದಿದ್ದಾರೆ. 


ಬೆಂಗಳೂರು (ಅ.22):  ಅರಿತೋ ಅರಿಯದೆಯೋ ಮಾಡಿದ ತಪ್ಪಿಗೆ ಸೆರೆಮನೆ ವಾಸ ಅನುಭವಿಸಿ ಸನ್ನಡತೆ ಆಧಾರದಡಿ ಸ್ವತಂತ್ರರಾದ 141 ಕೈದಿಗಳಲ್ಲಿ ಈಗ ಧನ್ಯತೆ ಭಾವ ಮೂಡಿದೆ. ಅಪರಾಧದ ಕಳಂಕ ಹೊತ್ತು ಜೈಲು ಪ್ರವೇಶಿಸುವಾಗ ಕೈಗಳಿಗೆ ಬೇಡಿ ಹಾಕಿಕೊಂಡಿದ್ದ ಅವರು, ಸೋಮವಾರ ಹೊರ ಬರುವಾಗ ಗುಲಾಬಿ ಹೂ ಹಿಡಿದಿದ್ದರು.

ಇದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಡುಬಂದ ದೃಶ್ಯ.

Latest Videos

undefined

ತೆವಳುತ್ತಾ ಬಂದ ಅಂಗವಿಕಲ:

ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಂಡ 141 ಮಂದಿ ಕೈದಿಗಳ ಪಟ್ಟಿಯಲ್ಲಿ ಓರ್ವ ಅಂಗವಿಕಲ ಗಮನ ಸೆಳೆದ. 12 ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಯಾದಗಿರಿ ಜಿಲ್ಲೆಯ ಉಲ್ಲಾಸ್‌, ಸನ್ಮಾರ್ಗದಲ್ಲಿ ಸಾಗಿ ಕೊನೆಗೆ ಸ್ವತಂತ್ರನಾಗಿದ್ದಾನೆ. ವೇದಿಕೆಗೆ ತೆವಳುತ್ತಲೇ ಬಂದು ಬಿಡುಗಡೆ ಪ್ರಮಾಣ ಪತ್ರ ಸ್ವೀಕರಿಸಿದಾಗ ಆತನ ಮೊಗದಲ್ಲಿ ಪಶ್ಚಾತ್ತಾಪದ ಭಾವ ವ್ಯಕ್ತವಾಯಿತು. ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು, ಆತನಿಗೆ ಒಳ್ಳೆಯ ಬದುಕು ಕಟ್ಟಿಕೊಳ್ಳುವಂತೆ ಬೆನ್ನುತಟ್ಟಿಕಳುಹಿಸಿದರು.

ಒಂದೇ ಕುಟುಂಬದ 6 ಸೋದರರು:

ತಮ್ಮೂರಿನಲ್ಲಿ ಮದುವೆ ಮನೆಯಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಕೊಲೆ ಆರೋಪ ಹೊತ್ತು 14 ವರ್ಷಗಳ ಸೆರೆಮನೆವಾಸ ಅನುಭವಿಸಿದ ಒಂದೇ ಕುಟುಂಬದ 6 ಮಂದಿ ಸ್ವತಂತ್ರರಾದರು.

2015ರಲ್ಲಿ ತರೀಕೆರೆ ತಾಲೂಕಿನ ದಂಡಿಗನಹಳ್ಳಿ ಗ್ರಾಮದಲ್ಲಿ ಮದುವೆ ವಿಚಾರವಾಗಿ ಗುಂಪು ಘರ್ಷಣೆ ನಡೆದು ಇಬ್ಬರು ಬಲಿಯಾಗಿದ್ದರು. ಈ ಪ್ರಕರಣದಲ್ಲಿ ಅದೇ ಊರಿನ ಓಂಕಾರಪ್ಪ ಮತ್ತು ಶೇಖರಪ್ಪ ಸೋದರರು ಸೇರಿ 20 ಮಂದಿ ಬಂಧಿತರಾಗಿದ್ದರು. ಬಳಿಕ ಕಾನೂನು ಹೋರಾಟದಲ್ಲಿ ಹತ್ತು ಮಂದಿ ದೋಷಮುಕ್ತರಾದರು. ಆದರೆ ಓಂಕಾರಪ್ಪ ಹಾಗೂ ಆತನ ಐವರು ಸೋದರರಿಗೆ ಜೀವಾವಧಿ ಶಿಕ್ಷೆಯಾಯಿತು. ‘ನಾವೇನೂ ತಪ್ಪು ಮಾಡಿರಲಿಲ್ಲ. ಘಟನೆ ನಡೆದ ದಿನ ನಾವು ಊರಿನಲ್ಲೇ ಇರಲ್ಲಿಲ್ಲ. ಹಾಗಿದ್ದರೂ ಕೊಲೆಯಾದ ಸಂಬಂಧಿಕರು ನಮ್ಮ ಮೇಲೆ ದ್ವೇಷಕ್ಕೆ ಸುಳ್ಳು ಆರೋಪ ಹೊರಿಸಿದರು. ಕೊನೆಗೆ ದೇವರು ದಯೆ ತೋರಿ ಬಂಧ ಮುಕ್ತವಾಯಿತು ಎಂದು ಬಿಡುಗಡೆಯಾದ ಓಂಕಾರಪ್ಪ ಹೇಳುವಾಗ ಕಣ್ಣಂಚಿನಲ್ಲಿ ಹನಿಗೂಡಿದ್ದವು.

ಮಿಸ್‌ ಫೈರಿಂಗ್‌-14 ವರ್ಷ ವನವಾಸ:

ಕತ್ತಲಿನಲ್ಲಿ ಕಾಡು ಪ್ರಾಣಿ ಎಂದೂ ಬಂದೂಕಿನಿಂದ ಗುಂಡು ಹಾರಿಸಿ ಸ್ನೇಹಿತನ ಪ್ರಾಣ ತೆಗೆದ ತಪ್ಪಿಗೆ ರೈತರೊಬ್ಬರು ಹದಿನಾಲ್ಕು ವರ್ಷ ಜೈಲು ವಾಸ ಅನುಭವಿಸುವಂತಾಯಿತು.

ವೀರಾಜಪೇಟೆ ತಾಲೂಕಿನ ನಾಪೋಕ್ಲು ಗ್ರಾಮದ ಕರುಣೇಶ್‌ ಅವರೇ ನತದೃಷ್ಟರೈತ. ನನಗೆ ಗೊತ್ತಿಲ್ಲ ಸರ್‌ ಏನಾಯಿತು ಅಂತ. ಅವತ್ತು ಕತ್ತಲಿನಲ್ಲಿ ಏನೋ ಬಂದಂತಾಯಿತು. ಹಿಂದೆಮುಂದೆ ನೋಡದೆ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದೆ. ಅದು ನನ್ನ ಸ್ನೇಹಿತನನ್ನೇ ಬಲಿಪಡೆಯಿತು ಎಂದು ಕರುಣೇಶ್‌ ಭಾವುಕರಾದರು.

ತೆಲಗಿ ಸಹಚರರು ಈಗ ಮುದ್ರಕರು!

ಬಹುಕೋಟಿ ಛಾಪಾ ಕಾಗದ ಹಗರಣದ ಕಿಂಗ್‌ ಪಿನ್‌ ಕರೀಂಲಾಲ್‌ ತೆಲಗಿ ಸಹಚರರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುದ್ರಕರಾಗಿದ್ದಾರೆ. ಛಾಪಾ ಕಾಗದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ತೆಲಗಿಯ ಇಬ್ಬರು ಸಹಚರರು, ಜೈಲಿನಲ್ಲಿ ಮುದ್ರಣಾಲಯದ ಉಸ್ತುವಾರಿ ಹೊತ್ತಿದ್ದಾರೆ. ಇತರೆ ಕೈದಿಗಳಿಗೆ ಮುದ್ರಣಾಲಯದಲ್ಲಿ ಅವರು ತರಬೇತಿ ಸಹ ನೀಡುತ್ತಿದ್ದಾರೆ. ಇಲ್ಲೇ ಕಾರಾಗೃಹ ಇಲಾಖೆಗೆ ಅಗತ್ಯವಾದ ಫೈಲ್‌ಗಳು, ರಸೀದಿಗಳು ಸೇರಿದಂತೆ ಮುದ್ರಣ ಕೆಲಸಗಳು ನಡೆದಿವೆ.

ಬಿಡುಗಡೆಗೆ ಮಹಿಳಾ ಕೈದಿಗಳ ಮನವಿ

ಪ್ರಸಕ್ತ ಸಾಲಿನಲ್ಲಿ ಸನ್ನಡತೆ ಆಧಾರದಡಿ ಮಹಿಳಾ ಕೈದಿಗಳ ಬಿಡುಗಡೆ ಇಲಾಖೆ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕೆಲ ಮಹಿಳಾ ಕೈದಿಗಳು ದೂರು ಸಲ್ಲಿಸಿದರು. ಎರಡು ವರ್ಷಗಳಿಂದ ಸನ್ನಡತೆ ಆಧಾರದಡಿ ಮಹಿಳೆ ಕೈದಿಗಳ ಬಂಧಮುಕ್ತಗೊಳಿಸುತ್ತಿಲ್ಲ. ಈ ಬಾರಿ ಕೇವಲ ಒಬ್ಬ ಮಹಿಳೆಯನ್ನು ಮಾತ್ರ ಪರಿಗಣಿಸಲಾಗಿದೆ. ನಾವು ಒಳ್ಳೆಯ ಮಾರ್ಗದಲ್ಲಿ ನಡೆದರೂ ಅನ್ಯಾಯವಾಗುತ್ತಿದೆ ಎಂದು ಸಜಾ ಬಂಧಿಗಳು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ ಎಂದರು.

click me!