ಕೊರೋನಾ ಆರ್ಭಟ: 100 ಟಿಟಿ ವಾಹನಗಳು ಆ್ಯಂಬುಲೆನ್ಸಾಗಿ ಪರಿವರ್ತನೆ

By Kannadaprabha NewsFirst Published Jul 18, 2020, 7:22 AM IST
Highlights

ನಿಗದಿತ ಕೋವಿಡ್‌ ಆಸ್ಪತ್ರೆಗಳಿಗೆ ಸೋಂಕಿತರನ್ನು ಸಾಗಿಸಲು ಆ್ಯಂಬುಲೆನ್ಸ್‌ ಸಮಸ್ಯೆ ಎದುರಾಗಿತ್ತು|  ತ್ವರಿತವಾಗಿ ಟಿಟಿ ವಾಹನಗಳನ್ನು ಆ್ಯಂಬುಲ್ಸ್‌ಗಳಾಗಿ ಪರಿವರ್ತಿಸಲು ಕಾವೇರಿ ಸಂಸ್ಥೆ ಒಪ್ಪಿದೆ| ಮೊದಲ ಹಂತವಾಗಿ 100 ಟಿಟಿ ವಾಹನಗಳ ಪೈಕಿ 20 ವಾಹನಗಳು ಸಿದ್ಧ| 10 ವಾಹನಗಳನ್ನು ವಲಯಗಳಿಗೆ ನಿಯೋಜಿಸಲಾಗಿದೆ. ಇನ್ನುಳಿದ 80 ಟಿಟಿ ವಾಹನಗಳು ಶೀಘ್ರವೇ ವೈದ್ಯಕೀಯ ಸೇವೆಗೆ ಬಳಕೆ ಅಣಿಯಾಗಲಿವೆ|

ಬೆಂಗಳೂರು(ಜು. 18): ಆಸ್ಪತ್ರೆಗಳಿಗೆ ಸೋಂಕಿತರ ಕರೆದೊಯ್ಯಲು 100 ಟೆಂಪೋ ಟ್ರಾವಲರ್‌ (ಟಿಟಿ) ವಾಹನಗಳನ್ನು ಆ್ಯಂಬುಲೆನ್ಸ್‌ಗಳಾಗಿ ಪರಿವರ್ತಿಸಲಾಗುತ್ತಿದ್ದು, ಇದರಲ್ಲಿ 20 ವಾಹನಗಳು ಸೇವೆಗೆ ಸಿದ್ಧವಾಗಿವೆ ಎಂದು ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

ನಿಗದಿತ ಕೋವಿಡ್‌ ಆಸ್ಪತ್ರೆಗಳಿಗೆ ಸೋಂಕಿತರನ್ನು ಸಾಗಿಸಲು ಆ್ಯಂಬುಲೆನ್ಸ್‌ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯಕಾರ್ಯದರ್ಶಿಗಳು, ಆ್ಯಂಬುಲೆನ್ಸ್‌ ಸಮಸ್ಯೆ ನಿರ್ವಹಣೆಗೆ ಸಂಚಾರ ವಿಭಾಗದ ಪೊಲೀಸರಿಗೆ ಸೂಚಿಸಿದ್ದರು. ಪ್ರಸುತ್ತ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸ್ಪಂದಿಸಿದ ಜಂಟಿ ಆಯುಕ್ತ ರವಿಕಾಂತೇಗೌಡ, ಡಿಸಿಪಿಗಳಾದ ಡಾ. ಸೌಮ್ಯಲತಾ ಹಾಗೂ ಎಂ.ನಾರಾಯಣ್‌ ಅವರು, ಖಾಸಗಿ ಟಿಟಿ ವಾಹನಗಳನ್ನು ಅಂಬ್ಯುಲೆನ್ಸ್‌ಗಳಾಗಿ ಪರಿವರ್ತಿಸಿ ವೈದ್ಯಕೀಯ ಸೇವೆಗೆ ನೀಡಲು ಯೋಜಿಸಿದರು.

ಈ ಸಂಬಂಧ ಕಬ್ಬನಪೇಟೆಯ ಕಾವೇರಿ ಆ್ಯಂಬುಲೆನ್ಸ್‌ ಸರ್ವಿಸಸ್‌ನನ್ನು ಸಂಪರ್ಕಿಸಲಾಯಿತು. ತ್ವರಿತವಾಗಿ ಟಿಟಿ ವಾಹನಗಳನ್ನು ಆ್ಯಂಬುಲ್ಸ್‌ಗಳಾಗಿ ಪರಿವರ್ತಿಸಲು ಕಾವೇರಿ ಸಂಸ್ಥೆ ಒಪ್ಪಿದೆ. ಮೊದಲ ಹಂತವಾಗಿ 100 ಟಿಟಿ ವಾಹನಗಳ ಪೈಕಿ 20 ವಾಹನಗಳು ಸಿದ್ಧವಾಗಿವೆ. 10 ವಾಹನಗಳನ್ನು ವಲಯಗಳಿಗೆ ನಿಯೋಜಿಸಲಾಗಿದೆ. ಇನ್ನುಳಿದ 80 ಟಿಟಿ ವಾಹನಗಳು ಶೀಘ್ರವೇ ವೈದ್ಯಕೀಯ ಸೇವೆಗೆ ಬಳಕೆ ಅಣಿಯಾಗಲಿವೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಆಂಬುಲೆನ್ಸ್ ಇಲ್ಲ, ಸೋಂಕಿತರನ್ನು ಟಿಟಿಯಲ್ಲಿ ರವಾನೆ; ಉಸಿರಾಟದ ಸಮಸ್ಯೆಯಿಂದ ಮಹಿಳೆ ಸಾವು

ಆ್ಯಂಬುಲೆನ್ಸ್‌ ಕೊರತೆ ನೀಗಿಸಲು ಕೋವಿಡ್‌ ನೋಡಲ್‌ ಆಫೀಸರ್‌ ಹಾಗೂ ಡಿಸಿಪಿ ಪೂರ್ವ (ಸಂಚಾರ) ನಾರಾಯಣ ನೇತೃತ್ವದಲ್ಲಿ ಹಲಸೂರು ಗೇಟ್‌ ಸಂಚಾರ ಠಾಣೆ ವಿಜಿ ಕುಮಾರ್‌ ಹಾಗೂ ಬ್ಯಾಟರಾಯಪುರ ಸಂಚಾರ ಠಾಣೆ ಗಿರಿರಾಜ್‌ ಕಾರ್ಯನಿರ್ವಹಿಸುತ್ತಿದ್ದಾರೆ.
 

click me!