
ಬೆಂಗಳೂರು: ಭ್ರೂಣ ಹತ್ಯೆ ತಡೆಗೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಭ್ರೂಣ ಲಿಂಗ ಪತ್ತೆಗೆ ಮುಂದಾದವರ ಬಗ್ಗೆ ಮಾಹಿತಿ ಕೊಟ್ಟವರಿಗೆ ನೀಡುವ ಬಹುಮಾನವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶುಕ್ರವಾರ ಆರೋಗ್ಯ ಇಲಾಖೆಯಿಂದ ಆರೋಗ್ಯ ಸೌಧದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಇಲಾಖೆ ಗಮನಾರ್ಹ ಕಾರ್ಯ ಮಾಡಿದೆ. ಪ್ರಸಕ್ತ ರಾಜ್ಯದಲ್ಲಿ 1000:947 ಪುರುಷ, ಸ್ತ್ರೀ ಅನುಪಾತ ಇದೆ. ಇದನ್ನು ಸರಿಪಡಿಸದಿದ್ದರೆ ಗಂಭೀರ ಸಾಮಾಜಿಕ ಸಮಸ್ಯೆ ಉಂಟಾಗಲಿದೆ. ಇದಕ್ಕಾಗಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆಗೆ ಸಂಬಂಧಿಸಿ, ಯಶಸ್ವಿಯಾದ ಗುಪ್ತ ಕಾರ್ಯಾಚರಣೆಯಲ್ಲಿ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗಿದೆ. ಜನತೆ ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭ್ರೂಣ ಹತ್ಯೆ ತಡೆಗೆ ಸಹಕರಿಸಬೇಕು ಎಂದರು.
ಸ್ತ್ರೀಯರ ಆರೋಗ್ಯ ರಕ್ಷಣೆಗೆ ಇಲಾಖೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ‘ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯು ಹೆಣ್ಣುಮಕ್ಕಳ ರಕ್ತಹೀನತೆ ಹೋಗಲಾಡಿಸುವಲ್ಲಿ ಮಹತ್ವದ ಯೋಜನೆಯಾಗಿದೆ. ‘ಶುಚಿ ಯೋಜನೆ’, ‘ಜನನಿ ಸುರಕ್ಷಾ ಯೋಜನೆ’ ಜಾರಿಗೊಳಿಸಲಾಗಿದೆ ಎಂದರು.
ಹೆಣ್ಣುಮಕ್ಕಳಿಗೆ ಹಾಗೂ ವಸತಿ ನಿಲಯಗಳಲ್ಲಿನ ಒಟ್ಟು 19,64,507 ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ಒದಗಿಸಿದ್ದೇವೆ. ‘ಮುಟ್ಟಿನ ಕಪ್ʼ ಯೋಜನೆಯಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಒಟ್ಟು 9,44,466 ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್ ಅನ್ನು ಒದಗಿಸಲು ಇಲಾಖೆ ಸಜ್ಜಾಗಿದ್ದು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಇಲಾಖೆ ಆಯುಕ್ತ ಗುರುದತ್ತ ಹೆಗಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಅವಿನಾಶ್ ಮೆನನ್ ರಾಜೇಂದ್ರನ್, ಇಲಾಖೆ ನಿರ್ದೇಶಕ ಡಾ. ವಸಂತ್ ಕುಮಾರ್ ಕೆ. ಹಾಗೂ ಅಧಿಕಾರಿಗಳು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ