ರಾಜ್ಯದ ಗ್ರಾಪಂನಲ್ಲಿ ಪೌರಕಾರ್ಮಿಕರ ಕೊರತೆಯೂ ಕಾಣುತ್ತಿದೆ. ಜೊತೆಗೆ ಸೌಲಭ್ಯವು ಸಿಗುತ್ತಿಲ್ಲ, ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದ ಎಂ.ಶಿವಣ್ಣ
ಮಳವಳ್ಳಿ(ಸೆ.21): ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 40 ಸಾವಿರ ಪೌರಕಾರ್ಮಿಕರನ್ನು ಕಾಯಂ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಸುಧಾರಿಸಲಾಗಿದೆ. ಆದರೆ, ರಾಜ್ಯದ ಗ್ರಾಪಂನಲ್ಲಿ ಪೌರಕಾರ್ಮಿಕರ ಕೊರತೆಯೂ ಕಾಣುತ್ತಿದೆ. ಜೊತೆಗೆ ಸೌಲಭ್ಯವು ಸಿಗುತ್ತಿಲ್ಲ, ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಆಸ್ಪತ್ರೆ, ಬಸ್ ನಿಲ್ದಾಣ, ರೆಸ್ಟೋರೆಂಟ್, ಲಾಡ್ಜ್ ಸೇರಿದಂತೆ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ ಮಾಹಿತಿ ಪಡೆಯಲು ರಾಜ್ಯಾದ್ಯಂತ ಸರ್ವೇ ಕಾರ್ಯ ಕೈಗೊಳ್ಳಲಾಗುವುದು. ನ್ಯಾಷನಲ… ಕಾಲೇಜು ವತಿಯಿಂದ ಮೈಸೂರು, ಕೊಪ್ಪಳ ಹಾಗೂ ಬಾಗಲಕೋಟೆಯಲ್ಲಿ ಪ್ರಾಯೋಗಿಕವಾಗಿ ಸರ್ವೇ ಕಾರ್ಯಕೈಗೊಳ್ಳಲಾಗಿದೆ ಎಂದರು.
ಸರ್ವೇ ಕಾರ್ಯದ ನಂತರ ಸ್ವಚ್ಛತಾ ಕಾರ್ಮಿಕರ ನಿಖರವಾದ ಅಂಕಿ-ಅಂಶಗಳು ಲಭ್ಯವಾಗಲಿವೆ. ಅಂದಾಜು 5 ಲಕ್ಷ ಸ್ವಚ್ಛತಾ ಕಾರ್ಮಿಕರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು.
Chikkamagaluru: ಆರು ಸಾವಿರ ಪೌರ ಕಾರ್ಮಿಕರ ಕಾಯಂಗೆ ಕ್ರಮ
ಪೌರ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ಪರಿಗಣಿಸುವ ಬೇಡಿಕೆಗೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಳ ಸಮುದಾಯದ ಸೇವೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನೇಮಕ ಮಾಡಿದ್ದಾರೆ. ಸಮಯವನ್ನು ವ್ಯರ್ಥ ಮಾಡದೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕೆಳ ವರ್ಗದ ಜನರ ಸೇವೆ ಮಾಡುತ್ತಿದ್ದೇನೆ. ಸಂವಿಧಾನಾತ್ಮಕ ಅಧಿಕಾರ ಇರುವುದರಿಂದ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಯಾರು ಮಾಡದ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿರುವುದರಿಂದ ಅವರಿಗೆ ಸ್ವಂತ ಮನೆ, ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಸಲಕರಣೆಗಳ ಜೊತೆಗೆ ಎಸ್‌ಸಿಎಸ್‌ಟಿ ಅನುದಾನದಲ್ಲಿ ಹಣ ಮೀಸಲಿಡಲಾಗುವುದು. ಹಲಗೂರಿನಲ್ಲಿ ವಾಸವಿದ್ದ ಪೌರ ಕಾರ್ಮಿಕರ ಮನೆಗಳಿಗೆ ಮಳೆ ನೀರು ನುಗ್ಗಿದೆ. ತಾಲೂಕು ಮತ್ತು ಜಿಲ್ಲಾಢಳಿತದಿಂದ ಕುಟುಂಬಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅವರಿಗೆ ಬೇಕಾದ ಮೂಲಕ ಸೌಲಭ್ಯ ನೀಡಲಾಗುತ್ತಿದೆ. ಅಲ್ಲಿಗೆ ಭೇಟಿಕೊಟ್ಟು ಪೌರಕಾರ್ಮಿಕರ ಕುಂದುಕೊರತೆಗಳನ್ನು ಪರಿಶೀಲಿಸಲಾಗುವುದು ಎಂದರು. ಈ ವೇಳೆ ತಹಸೀಲ್ದಾರ್ ವಿಜಯಣ್ಣ, ತಾಪಂ ಇಒ ರಾಮಲಿಂಗಯ್ಯ, ಪುರಸಭೆ ಮುಖ್ಯಾಧಿಕಾರಿ ಹರಿಪ್ರಸಾದ್, ಸಮಾಜ ಕಲ್ಯಾಣ ಅಧಿಕಾರಿ ಜನಾರ್ದನ್ ಸೇರಿದಂತೆ ಮುಖಂಡರು ಇದ್ದರು.