ನೇಮಕಾತಿ ಆದೇಶ ಪತ್ರಕ್ಕಾಗಿ ಉಪನ್ಯಾಸಕರು ಮಾಡುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭೇಟಿ ನೀಡಿದರು. ಈ ವೇಳೆ ಧರಣಿ ನಿರತ ಉಪನ್ಯಾಸಕರಿಗೆ ಭರವಸೆ ಕೊಟ್ಟರು.
ಬೆಂಗಳೂರು, (ಅ.15): ಕೇಂದ್ರ ಸರಕಾರದ ಸೂಚನೆಯಂತೆ ಅತಿ ಶೀಘ್ರದಲ್ಲಿಯೇ ಕಾಲೇಜುಗಳು ಆರಂಭವಾಗುತ್ತಿದ್ದು, ಅದರಂತೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾದ ಕೂಡಲೇ ಕೌನ್ಸೆಲಿಂಗ್ ಮುಗಿಸಿಕೊಂಡು ನೇಮಕಾತಿ ಅದೇಶದ ನೀರಿಕ್ಷೆಯಲ್ಲಿರುವ ಎಲ್ಲ ಉಪನ್ಯಾಸಕರಿಗೆ ನೇಮಕಾತಿ ಪತ್ರವನ್ನು ನೀಡಲು ಸರಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನೇಮಕಾತಿ ಪತ್ರ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಪಿಯುಸಿ ಮಂಡಳಿ ಎದುರು ಧರಣಿ ನಡೆಸುತ್ತಿರವ ಭಾವಿ ಉಪನ್ಯಾಸಕರನ್ನು ಗುರುವಾರ ಭೇಟಿಯಾದ ಡಿಸಿಎಂ, ಹಣಕಾಸು ಇಲಾಖೆಯ ಕೆಲ ಆಕ್ಷೇಪಗಳ ಕಾರಣಕ್ಕೆ ನೇಮಕಾತಿ ಪತ್ರಗಳನ್ನು ನೀಡುವುದು ತಡವಾಗಿದೆ. ಇದಕ್ಕೆ ಕೋವಿಡ್ ಕೂಡ ಒಂದು ಕಾರಣ. ಇದೀಗ ಸ್ವತಃ ಮುಖ್ಯಮಂತ್ರಿಗಳೇ ಹಣಕಾಸು ಇಲಾಖೆ ಎತ್ತಿದ್ದ ಆಕ್ಷೇಪಗಳನ್ನು ನಿವಾರಿಸಿ ಕಾಲೇಜುಗಳು ಆರಂಭವಾದ ಕೂಡಲೇ ನೇಮಕಾತಿ ಆದೇಶಗಳನ್ನು ನೀಡುವಂತೆ ಸೂಚಿಸಿದ್ದಾರೆಂದು ತಿಳಿಸಿದರು.
undefined
ಆರ್ಡರ್ ಕಾಪಿ ಕೊಡುವವರೆಗೆ ನಾವು ತೆರಳುವುದಿಲ್ಲ; ಪಿಯು ಉಪನ್ಯಾಸಕರಿಂದ ಅಹೋರಾತ್ರಿ ಪ್ರತಿಭಟನೆ
ದಿನೇದಿನೆ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳು ಶುರುವಾಗುವುದು ಇನ್ನೂ ತಡಡವಾಗಬಹುದು. ಹೀಗಾಗಿ ಈಗಲೇ ಆದೇಶ ಪತ್ರಗಳನ್ನು ನೀಡಿ ಎಂದು ಉಪನ್ಯಾಸಕರು ಒತ್ತಾಯ ಮಾಡಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ, ಕಾಲೇಜುಗಳನ್ನು ಅರಂಭ ಮಾಡಿ ಎಂದು ಈಗಾಗಲೇ ಕೇಂದ್ರ ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಹಾಗೂ ಕೆಲ ಮೂಲಭೂತ ಸೌಕರ್ಯಗಳ ತಯಾರಿ ಮಾಡಿಕೊಳ್ಳುತ್ತಿದೆ. ನಿಮಗೆ ಅನುಮಾನವೇ ಬೇಡ. ಕಾಲೇಜುಗಳು ಖಂಡಿತವಾಗಿಯೂ ಆರಂಭವಾಗುತ್ತವೆ. ಸರಕಾರದ ಮೇಲೆ ನಂಬಿಕೆ ಇಡಿ ಎಂದು ಅಭಯ ನೀಡಿದರು,