
ಮೈಸೂರು(ಜ.19): ಸಂಗೀತ ವಿವಿ ಸೇರಿದಂತೆ ಎಲ್ಲಾ ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿ ನೇಮಕವನ್ನು ಹಂತ ಹಂತವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಶನಿವಾರ ಆಯೋಜಿಸಿದ್ದ 7, 8 ಮತ್ತು 9ನೇ ಸಾಲಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ವಿವಿ ಆರಂಭವಾಗಿ 17 ವರ್ಷವಾದರೂ ಸೌಲಭ್ಯದ ಕೊರತೆ ಎದುರಿಸುತ್ತಿದೆ. ಕರ್ನಾಟಕದಲ್ಲಿನ ಸಂಗೀತ ವಿವಿ, ಸಂಸ್ಕೃತ ವಿವಿ, ಜಾನಪದ ವಿವಿ ಮತ್ತು ಕನ್ನಡ ವಿವಿಗಳು ವಿಶೇಷವಾದ ಸ್ಥಾನ ಹೊಂದಿವೆ. ಈ ವಿವಿಗಳು ಬೆಳೆಯಲು ಸರ್ಕಾರದಿಂದ ವಿಶೇಷವಾದ ಪ್ರೋತ್ಸಾಹ ಸಿಗಬೇಕು. ಬೇರೆ ವಿವಿಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕಾಗುತ್ತದೆ. ಆದರೆ ಸಂಗೀತ ಮತ್ತು ಪ್ರದರ್ಶಕ ಕಲೆಗಳಲ್ಲಿ ಪದವಿ ಪಡೆಯಲು ತಾವು ಪಡೆದ ಶಿಕ್ಷಣದ ಪ್ರದರ್ಶನ ನಡೆಯಲೇಬೇಕು ಎಂದರು.
ಕೆಎಎಸ್ ಕನ್ನಡ ಮರುಪರೀಕ್ಷೆ ಬೇಡಿಕೆ ತಿರಸ್ಕರಿಸಿದ ಕೆಪಿಎಸ್‌ಸಿ?
ಸಂಗೀತ ವಿವಿಯಲ್ಲಿ ಹಲವು ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ ಮತ್ತು ಪ್ರದರ್ಶಕ ಕಲೆಗಳ ಶಿಕ್ಷಣ ನೀಡುತ್ತಿವೆ. ಈ ವಿವಿ ಮೂಲಕ ಹಲವು ಮಂದಿಯನ್ನು ಗುರುತಿಸುವ ಕೆಲಸ ಆಗುತ್ತಿದೆ. ಅನೇಕಾರು ಮಂದಿ ಯುವಕ, ಯುವತಿಯರಿಗೆ ಪ್ರೋತ್ಸಾಹ ನೀಡುವ ಉತ್ತಮ ವೇದಿಕೆಯಾಗಿದೆ. ಆದರೆ ಇಂತಹ ಪ್ರತಿಷ್ಠಿತ ಮತ್ತು ವಿಶಿಷ್ಟ ವಿವಿಗೆ ತನ್ನದೇ ಆದ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳಲು ಶಕ್ತಿ ಇಲ್ಲದಂತಾಗಿದೆ. ಇದಕ್ಕೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ ನೀಡಬೇಕು. ಏಕೆಂದರೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಮಂದಿ ಆಕರ್ಷಿತರಾಗುತ್ತಿದ್ದಾರೆ. ಆ ಮೂಲಕ ಮಕ್ಕಳ ಗಮನ ಬೇರೆಕಡೆ ಹೋಗುವ ವಾತಾವರಣ ಇದೆ. ಆದ್ದರಿಂದ ನಾವು ಪ್ರಾಚೀನ ಕಲೆ ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿವಿಯ ಪ್ರಸ್ತುತ ಕುಲಪತಿ ನಾಗೇಶ್ವಿ. ಬೆಟ್ಟಕೋಟೆ ಅವರ ಅವಧಿಯಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸಿದ್ದಾರೆ. ಮುಂದೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲವಿದೆ. ಅರ್ಹರಿಗೆ ಮಾತ್ರ ಈ ಅವಕಾಶ ದೊರಕಲಿದೆ ಎಂದು ಅವರು ಹೇಳಿದರು.
ಸಂಗೀತ ವಿವಿಯಲ್ಲಿ ಪುರುಷರು ಹೆಚ್ಚಾಗಿ ಚಿನ್ನದ ಪದಕ ಪಡೆದು ಪುರುಷರ ಮರ್ಯಾದೆ ಉಳಿಸಿದ್ದಾರೆ. ಮೈಸೂರು ವಿವಿ ಘಟಿಕೋತ್ಸವದಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳೇ ಚಿನ್ನದ ಪದಕಗಳಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಿದ್ಧಿ ಜನಾಂಗದ ಮಕ್ಕಳಿಗೆ ಶೈಕ್ಷಣಿಕವಾಗಿ ಸಂಗೀತ ಕಲಿಸಬೇಕು
ಮಹೇಂದ್ರ ದೇವನೂರು
ಮೈಸೂರು: ಸಿದ್ಧಿ ಸಮುದಾಯಕ್ಕೆ ರಕ್ತಗತವಾಗಿ ಬಂದಿರುವ ಸಂಗೀತವನ್ನು ಶೈಕ್ಷಣಿಕವಾಗಿ ಕಲಿಸುವ ಉದ್ದೇಶವಿದೆ ಎಂದು ಚಿನ್ನದ ಪದಕ ವಿಜೇತೆ ರೇಣುಕಾ ಸಿದ್ಧಿ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಘಟಿಕೋತ್ಸವದಲ್ಲಿ ಚಿನ್ನದ ಪದಕಪಡೆದ ರೇಣುಕಾ ಸಿದ್ಧಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ನೃತ್ಯ, ಸಂಗೀತ ನಮ್ಮ ಸಮುದಾಯದ ರಕ್ತದಲ್ಲಿಯೇ ಇದೆ. ಆದರೆ ಅದನ್ನು ನಮ್ಮ ಸಮುದಾಯದ ಪೀಳಿಗೆಗೆ ಶೈಕ್ಷಣಿಕಾಗಿ ಕಲಿಸಬೇಕು ಎಂಬ ಗುರಿ ಇದೆ. ಸಂಗೀತ ವಿವಿಯಲ್ಲಿನ ನಾಟಕ ವಿಷಯದಲ್ಲಿ ಸ್ನಾತ ಕೋತ್ತರ ಪದವಿ ಪಡೆದಿದ್ದೇನೆ. ಸಿದ್ದಿ ಸಮುದಾಯದ ಮಕ್ಕಳಲ್ಲಿ ಇರುವ ನೃತ್ಯ, ಸಂಗೀತದೊಂದಿಗೆ ನಾಟಕ ಕಲೆಯನ್ನು ವ್ಯವಸ್ಥಿತವಾಗಿ ಕಲಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ನನ್ನದು ಎಂದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೆರೆ ಗ್ರಾಮದ ರೇಣುಕಾ ಅವರು ನೀನಾಸಂನ ವಿದ್ಯಾರ್ಥಿನಿ. 40 ರ ದಶಕದಲ್ಲಿ ಕೆ.ವಿ.ಸುಬ್ಬಣ್ಣ ಮತ್ತು ಚಿದಂಬರರಾವ್ ಜಂಬೆ ಅವರು ಹಾಡಿಯಲ್ಲಿ ಸಮುದಾಯದ ಜನರಿಗೆ ಕಲಿಸಿದ ನಾಟಕದಿಂದ ರೇಣುಕಾ ಅವರ ಇಡೀ ಕುಟುಂಬ ಪ್ರಭಾವಿತಗೊಂಡಿದ್ದು, ರೇಣುಕಾ ಅವರ ತಾತ ಮತ್ತು ತಾಯಿ ಕೂಡ ನಾಟಕಗಳನ್ನು ಕಲಿತು ಎಲ್ಲೆಡೆ ಪ್ರದರ್ಶನಕ್ಕೆ ತೆರಳುತ್ತಿದ್ದರು. ನಾನೂ ಕೂಡ ತಾಯಿಯಿಂದ ಪ್ರಭಾವಿತಳಾಗಿ ನಾಟಕ ಕಲಿಯಲು ಆರಂಭಿಸಿದೆ. ನೀನಾಸಂ ಸೇರಿದಂತೆ ಹಲವು ಸಂಸ್ಥೆಗಳ ನಾಟಕ ಪ್ರದರ್ಶನ ನಡೆಸಿ ಕೊನೆಗೆ ಬೆಂಗಳೂರಿನ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.
ನಾಟಕ ಕಲಿಕೆ ಕೂಡ ಶೈಕ್ಷಣಿಕವಾಗಿ ಇರಬೇಕು ಎಂಬ ಉದ್ದೇಶದಿಂದ ಸಂಗೀತ ವಿವಿಯಲ್ಲಿ ನಾಟಕ ವಿಷಯದಲ್ಲಿ ಪದವಿಯೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನನ್ನ ಸಮುದಾಯದ ಜನರಿಗೂ ಈ ನಾಟಕ ಕಲೆಯನ್ನು ಹಂಚುವುದೇ ನನ್ನ ಗುರಿ ಎಂದು ಅವರು ಹೇಳಿದರು.
ಮೊಬೈಲ್‌ನಲ್ಲೇ ಓದಿ ಪಿಎಸ್‌ಐ ಆದ ಜೀಪ್ ಚಾಲಕ, ಪೇದೆ!
ಶ್ರೀರಂಗಪಟ್ಟಣ ತಾಲೂಕು ಬೆಳಗೋಳ ನಿವಾಸಿ ವಿ. ವಿಜಯಶ್ರೀ ಅವರು ಕರ್ನಾಟಕ ಶಾಸೀಯ ಸಂಗೀತ ವಿಷಯದ ಸ್ನಾತಕೋತ್ತರ ಪದವಿಯಲ್ಲಿ 9 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಬಿಟೆಕ್ ಪದವೀಧರೆಯಾಗಿರುವ ವಿಜಯಶ್ರೀ ಕಳೆದ 8 ವರ್ಷಗಳಿಂದ ಪತಿ ಮತ್ತು ಮಕ್ಕಳೊಂದಿಗೆ ಬೆಳಗೋಳದಲ್ಲಿ ನೆಲೆಸಿದ್ದು, ಬಾಲ್ಯದಿಂದಲ್ಲೂ ಇದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಆಸಕ್ತಿ ಸಾಧನೆ ಮಾಡುವಂತೆ ಮಾಡಿದೆ ಎಂದು ಹೇಳಿದರು.
ಹಿಂದೂಸ್ತಾನಿ ಶಾಸೀಯ ಸಂಗೀತದಲ್ಲಿ ಸಾಗರ ತಾಲೂಕಿನ ಲಿಂಗದಹಳ್ಳಿಯ ಎಲ್.ಬಿ. ಬಿಂದು ಅವರು ಆರು ಚಿನ್ನದ ಪದಕ ಗಳಿಸಿದ್ದಾರೆ. ಎಂಕಾಂ ಪದವಿ ಪಡೆದಿರುವ ಬಿಂದು, ಬಾಲ್ಯದಿಂದಲ್ಲೂ ಹಿಂದೂಸ್ಥಾನಿ ಶಾಸೀಯ ಸಂಗೀತದಲ್ಲಿ ಆಸಕ್ತಿ ಇತ್ತು. ಈಗ ಸಂಗೀತ ವಿವಿಯಲ್ಲೇ ಪಿ.ಎಚ್.ಡಿ ಪದವಿ ಪಡೆಯುವ ಗುರಿ ಇದೆ ಎಂದರು.