ಒಂದು ಬಾರಿಗೆ ಮಾತ್ರ ಅನ್ವಯ ವಯೋಮಿತಿ, 3 ವರ್ಷ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ಈ ನಿರ್ಧಾರ
ಬೆಂಗಳೂರು(ನ.04): ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್, ಸಿಎಆರ್ ಹಾಗೂ ಡಿಎಆರ್) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಎರಡು ವರ್ಷ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಕಳೆದ ಮೂರು ವರ್ಷಗಳಿಂದ ಕೋವಿಡ್‌ನಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದರು. ಹೀಗಾಗಿ ನೇಮಕಾತಿಯಲ್ಲಿ ಎರಡು ವರ್ಷಗಳ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ಇದೀಗ ಒಂದು ಬಾರಿಗೆ ಅನ್ವಯವಾಗುವಂತೆ 2022-23ನೇ ಸಾಲಿನಲ್ಲಿ ಕರೆದಿರುವ ಪೊಲೀಸ್ ಕಾನ್ಸ್‌ಟೇಬಲ್(ಸಿವಿಲ್-1591 ಹುದ್ದೆ, ಸಿಎಆರ್ ಹಾಗೂ ಡಿಎಆರ್- ಒಟ್ಟು 3,484 ಹುದ್ದೆ) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸಿ, ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿರುವ ಕಡೆಯ ದಿನಾಂಕವನ್ನು ವಿಸ್ತರಿಸಿದೆ.
undefined
ಪೇದೆಗಳ ವಯೋಮಿತಿ ಹೆಚ್ಚಳಕ್ಕಾಗಿ ಸಚಿವ ಆರಗ ಕಾಲಿಗೆ ಬಿದ್ದು ಕಣ್ಣೀರು
ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಎಸ್ಸಿ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ, ಬುಡಕಟ್ಟು ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ. ಸಿಎಆರ್ ಮತ್ತು ಡಿಎಆರ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಪರಿಶಿಷ್ಟಜಾತಿ ಮತ್ತು ಇತರೆ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ.
ಇದರ ಜತೆಗೆ ಅರ್ಜಿ ಸಲ್ಲಿಸಲು ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನವೆಂಬರ್ 28 ಮತ್ತು ಸಿಎಆರ್ ಹಾಗೂ ಡಿಎಆರ್ ಹುದ್ದೆಗಳಿಗೆ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ನಿಗದಿತ ಶುಲ್ಕ ಪಾವತಿಸಲು ಡಿಸೆಂಬರ್ 2ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.