PU ಪಾಸಾದವರಿಗೆ ಆಯಿಲ್ ಇಂಡಿಯಾ ಕಂಪನಿಯಲ್ಲಿ ಕೆಲಸ, ಅಪ್ಲೈ ಮಾಡಿ

By Suvarna NewsFirst Published Jul 3, 2021, 4:03 PM IST
Highlights

ಆಯಿಲ್ ಇಂಡಿಯಾ ಲಿ.(ಒಐಎಲ್) ಕಂಪನಿಯು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಈ ಕಂಪನಿಯ ಉದ್ಯೋಗಕ್ಕೆ ಪಿಯುಸಿ ಅಥವಾ 12ನೇ ತರಗತಿ ಪಾಸಾದವರು ಅಪ್ಲೈ ಮಾಡಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ನೀವೇನಾದ್ರೂ ಪಿಯುಸಿ ಅಥವಾ 12ನೇ ತರಗತಿ ಪಾಸ್ ಮಾಡಿದ್ದರೆ ಸಾಕು. ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ ಉದ್ಯೋಗಕ್ಕೆ ಸೇರಬಹುದು. ಕೈತುಂಬಾ ಸಂಬಳ ಗಳಿಸುವ ಉದ್ಯೋಗಾವಕಾಶಗಳು ನಿಮ್ಮನ್ನ ಅರಸಿಕೊಂಡು ಬಂದಿವೆ. 

ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ವಿವಿಧ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಒಐಎಲ್‌ನ ಅಧಿಕೃತ ವೆಬ್‌ಸೈಟ್ https://www.oil-india.com/ ಗೆ ಭೇಟಿ ನೀಡಬಹುದು.

ಜುಲೈ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಆಗಸ್ಟ್ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಈ ನೇಮಕಾತಿ ಡ್ರೈವ್‌ನಲ್ಲಿ ಸುಮಾರು 120 ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುವುದು. ದುಲಿಯಾಜನ್‌ನಲ್ಲಿರುವ ಕೇಂದ್ರ ಕಚೇರಿ ವತಿಯಿಂದ ಈ 120 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಉತ್ಪಾದನೆ ಮತ್ತು ಪರಿಶೋಧನಾ ಪ್ರದೇಶಗಳಲ್ಲಿ OIL ಘಟಕಕಗಳಲ್ಲಿ ಕೆಲಸ ನಿಯೋಜಿಸಲಾಗುತ್ತದೆ. 

ಸ್ಪೋರ್ಟ್ಸ್ ಕೋಟಾದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಆಗಿ

ಅಭ್ಯರ್ಥಿಗಳು ಸರ್ಕಾರದ ಮಾನ್ಯತೆಯಿರೋ ಬೋರ್ಡ್ ಅಥವಾ ಯೂನಿವರ್ಸಿಟಿಯಿಂದ 12ನೇ ತರಗತಿ ಅಥವಾ ಪಿಯುಸಿಯಲ್ಲಿ ಶೇಕಡಾ 40ರಷ್ಟು ಅಂಕ ಗಳಿಸಿ ಪಾಸ್ ಆಗಿರಬೇಕು. ಜೊತೆಗೆ ಅಭ್ಯರ್ಥಿಯು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರವನ್ನು ಹೊಂದಿರಬೇಕು. ಎಂಎಸ್ ವರ್ಡ್, ಎಂಎಸ್ ಎಕ್ಸೆಲ್, ಎಂಎಸ್ ಪವರ್ ಪಾಯಿಂಟ್ ಇತ್ಯಾದಿಗಳನ್ನ ಸಂಪೂರ್ಣವಾಗಿ ಬಲ್ಲವರಾಗಿರಬೇಕು. 

ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಒಐಎಲ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಜನರಲ್ ಕೆಟಗರಿಯ ಅಭ್ಯರ್ಥಿಗಳ ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಇನ್ನು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷ ಮತ್ತು ಒಬಿಸಿ (ಹಿಂದುಳಿದ ವರ್ಗ) ಅಭ್ಯರ್ಥಿಯ ವಯಸ್ಸು 18 ರಿಂದ 33 ವರ್ಷಗಳ ಒಳಗಿರಬೇಕು. ಸರ್ಕಾರಿ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯು ನೀಡಿರುವ ಅಡ್ಮಿಟ್ ಕಾರ್ಡ್ ಅಥವಾ ಪಾಸ್ ಪ್ರಮಾಣಪತ್ರ ಅಥವಾ 10 ನೇ ತರಗತಿಯ ಮಾರ್ಕ್‌ಶೀಟ್‌ನಲ್ಲಿ ನಮೂದಿಸಿರುವಂತೆ ಹುಟ್ಟಿದ ದಿನಾಂಕ (ಡಿಒಬಿ) ವನ್ನು ಮಾತ್ರ ವಯೋಮಿತಿಯ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ಹುಟ್ಟಿದ ದಿನಾಂಕದ ಪರಿಶೀಲನೆಗಾಗಿ ಬೇರೆ ಯಾವುದೇ ದಾಖಲೆಯನ್ನು ಸ್ವೀಕರಿಸಲಾಗುವುದಿಲ್ಲ.

ಆರ್ಥಿಕ ಹಿಂಜರಿತ ಉಂಟಾದ್ರೆ, ಯಾವೆಲ್ಲ ಉದ್ಯೋಗಳು ಉಳಿಯಲಿವೆ?

ಜನರಲ್ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ 200 ರೂಪಾಯಿ ಪಾವತಿಸಬೇಕಾಗುತ್ತದೆ. ಎಸ್‌ಸಿ / ಎಸ್‌ಟಿ / ಇಡಬ್ಲ್ಯೂಎಸ್ / ಬೆಂಚ್‌ಮಾರ್ಕ್ ವಿಕಲಾಂಗ ವ್ಯಕ್ತಿಗಳು / ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಆನ್‌ಲೈನ್ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ) ಮೂಲಕ ಆಯ್ಕೆ ಪ್ರಕ್ರಿಯೆಯನ್ನ ನಡೆಸಲಾಗುತ್ತದೆ, ಇದರಲ್ಲಿ ಕನಿಷ್ಠ 40%  ಅರ್ಹತಾ ಅಂಕಗಳನ್ನ ಗಳಿಸಬೇಕು. ಪರೀಕ್ಷೆಯು ಬಹುಆಯ್ಕೆ ಪ್ರಶ್ನೆಪತ್ರಿಕೆ( ಎಂಸಿಕ್ಯೂ) ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎಂಎಸ್ ಆಫೀಸ್‌ನಲ್ಲಿ ಪ್ರಾವೀಣ್ಯತೆ, ಅಗತ್ಯ ಕೌಶಲ್ಯಗಳನ್ನು ಪರೀಕ್ಷಿಸುವಂತಹ ಪ್ರಶ್ನೆಗಳಿರುತ್ತವೆ. 

ಆಯಿಲ್ ಇಂಡಿಯಾ ಲಿಮಿಟೆಡ್‌ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳೊಂದಿಗೆ ಇಂಗ್ಲಿಷ್ ಭಾಷೆ ಮತ್ತು ಸಾಮಾನ್ಯ ಜ್ಞಾನ, ತಾರ್ಕಿಕತೆ, ಅಂಕಗಣಿತ / ಸಂಖ್ಯಾತ್ಮಕ ಮತ್ತು ಮಾನಸಿಕ ಸಾಮರ್ಥ್ಯ, ತಾಂತ್ರಿಕ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಸುಮಾರು ೨ ತಾಸುಗಳ ಕಾಲ ಸಿಬಿಟಿ ಪರೀಕ್ಷೆ ನಡೆಯಲಿದ್ದು, ಇಂಗ್ಲೀಷ್ ಹಾಗೂ ಅಸ್ಸಾಮೀಸ್ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ. 

NCC ಸ್ಪೆಷಲ್ ಎಂಟ್ರಿ ಸ್ಕೀಮ್: ಸೇನೆ ಸೇರಲು ಸುವರ್ಣ ಅವಕಾಶ, ಅರ್ಜಿ ಹಾಕಿ

ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ (ಸಿಬಿಟಿ) ಪಡೆದ ಅಂಕಗಳ ಆಧರಿಸಿ ಅರ್ಹತೆಯ ಪ್ರಕಾರ ಅಂತಿಮ ಆಯ್ಕೆ ಮಾಡಲಾಗುತ್ತದೆ. ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ 26,600 ರೂಪಾಯಿಯಿಂದ 90,000 ರೂ.ವರೆಗೆ ವೇತನ ದೊರೆಯಲಿದೆ. 

ಆಸಕ್ತ ಅಭ್ಯರ್ಥಿಗಳು ಆಗಸ್ಟ್ 15ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

click me!