
ಬೀರೂರು: ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ನಡೆದ ಅಮೃತ್‌ಮಹಲ್ ಗಂಡು ಕರುಗಳ ಎರಡು ದಿನಗಳ ಬಹಿರಂಗ ವಾರ್ಷಿಕ ಹರಾಜಿನಲ್ಲಿ ಬಿ 18-39 ಮಸಣಿ ಬೀಜದ ಹೋರಿ ₹2.32 ಲಕ್ಷಕ್ಕೆ ಮಾರಾಟವಾಯಿತು.
ಪ್ರತಿವರ್ಷ ಜನವರಿ ತಿಂಗಳ 3ನೇ ಬುಧವಾರ ನಡೆಯುವ ಹರಾಜಿನಲ್ಲಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾವೇರಿ, ಚಿಕ್ಕಮಗಳೂರು, ಹಾಸನ, ಮೈಸೂರು ಮೊದಲಾದ ಕಡೆಗಳಿಂದ ಕೃಷಿಕರು , ನೂರಾರು ರೈತರು ಭಾಗವಹಿಸಿದ್ದರು. ಬಾಸೂರು ಕಾವಲಿನ “ಬಿ 18-39 ಮಸಣಿ ಬೀಜದ ಹೋರಿಯನ್ನು ಶಿವಮೊಗ್ಗ ತಾಲೂಕು ಕಪ್ಪನಹಳ್ಳಿಯ ರವಿಕುಮಾರ್ ₹2.32 ಲಕ್ಷಕ್ಕೆ ಕೂಗಿದರು. ಇದು ಅತಿ ಹೆಚ್ಚಿನ ಮೌಲ್ಯ ಪಡೆದ ಹಿರಿಮೆಗೆ ಪಾತ್ರವಾಯಿತು.ಮೈಸೂರು ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿರುವ ಅಮೃತ್‌ಮಹಲ್ ಆಕರ್ಷಕ ಮೈಕಟ್ಟನ್ನು ಹೊಂದಿ ಕೃಷಿ ಚಟುವಟಿಕೆಗಳಿಗೆ ಹೇಳಿಮಾಡಿಸಿರುವ ಹೋರಿಕರುಗಳಿಗೆ ಭಾರಿ ಬೇಡಿಕೆಯಿದ್ದು ಹರಾಜು ಪ್ರಕ್ರಿಯೆ ಅಂದಿನಿಂದಲೂ ಚಾಲನೆಯಲ್ಲಿದೆ. ಸರ್ಕಾರದ ಅಧೀನದ ರಾಜ್ಯದ ವಿವಿಧೆಡೆ ತಳಿಸಂವರ್ಧನಾ ಕೇಂದ್ರ ಪ್ರಾರಂಭಿಸಲಾಗಿದ್ದು ಇಲ್ಲಿ ಬೆಳೆದಂತಹ ಹೋರಿಕರುಗಳಿಗೆ ಭಾರಿ ಬೇಡಿಕೆಯಿದೆ.
ಜಿಲ್ಲೆಯ ಬಾಸೂರು, ಲಿಂಗದಹಳ್ಳಿ, ಅಜ್ಜಂಪುರ ಹಾಗು ನೆರೆಯ ಜಿಲ್ಲೆಯ ರಾಮಗಿರಿ, ಹಬ್ಬನಗದ್ದೆ, ಚಿಕ್ಕಎಮ್ಮಿಗನೂರು ಮತ್ತು ರಾಯಚಂದ್ರ ಅಮೃತ್‌ಮಹಲ್ ಕಾವಲುಗಳಲ್ಲಿ ವೈಶಿಷ್ಟ ಪೂರ್ಣವಾಗಿ ಬೆಳೆಸಲಾಗುತ್ತದೆ. ಹರಾಜಿನಲ್ಲಿ 170 ಅಮೃತ್‌ಮಹಲ್ ಕ್ಷೇತ್ರದ ಹೋರಿಕರುಗಳು, 8 ಬೀಜದ ಹೋರಿಗಳು ಮತ್ತು 3 ಎತ್ತು ಗಳು ಪಾಲ್ಗೊಂಡಿದ್ದವು.
ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹೊಸೂರಿನ ಕೃಷಿಕ ವೀರೇಂದ್ರ ಪಾಟೀಲ್ ₹ 2,07,500 ಕ್ಕೆ ಅಜ್ಜಂಪುರ ಕೇಂದ್ರದ ಹೋರಿಕರುಗಳಾದ ಎ24-25 ಬಣ್ಣದ ಸರ, ಎ24-35 ಗಂಗೆ, ಎ24-40 ಗಾಳಿಕೆರೆ ಜೋಡಿಕರುಗಳನ್ನು ಪಡೆದು, ಜೋಡಿ ಕರುಗಳ ಅತಿ ಹೆಚ್ಚಿನ ಬಿಡ್ ದಾರ ಎನಿಸಿ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ವಿನೋದ ಪ್ರಿಯಾರಿಂದ ಟ್ರೋಫಿ ಸ್ವೀಕರಿಸಿದರು.
ಸ್ಥಳೀಯ ಕೃಷಿಕರಿಗಿಂತ ಹಾವೇರಿ, ಹಿರೇಕೆರೂರು, ಶಿಕಾರಿಪುರ, ಮಾಸೂರು, ಈಸೂರು, ಬ್ಯಾಡಗಿ, ದಾವಣಗೆರೆ, ರಾಣಿಬೆನ್ನೂರು, ತಿಪಟೂರು, ಚನ್ನರಾಯಪಟ್ಟಣ, ಅರಸೀಕೆರೆ ಮತ್ತಿತರ ಕಡೆಯ ಪಶು ಸಂಗೋಪಕರು ಹರಾಜಿನಲ್ಲಿ ಹುರುಪಿನಿಂದ ಭಾಗವಹಿಸಿದ್ದರು. ಕರುಗಳು ತೋರುತ್ತಿದ್ದ ಚಟುವಟಿಕೆ ಯಿಂದಲೇ ಅವುಗಳ ಸಾಮರ್ಥ್ಯ ಗುರುತಿಸಿ ಅವುಗಳಿಗೆ ಬೆಲೆ ಕಟ್ಟುವಲ್ಲಿ ಬಿಡ್ ದಾರರು ಮುಂದಾದರೆ, ಅವರನ್ನು ಪ್ರೋತ್ಸಾಹಿಸುವಂತೆ ರೈತರು ಕೇಕೆ ಸೀಟಿ ಹಾಕುತ್ತ ಕರು ಮತ್ತು ಹರಾಜು ಕೂಗುವವರಿಗೆ ಉತ್ತೇಜನ ನೀಡುತ್ತಿದ್ದರು.
ಶಿಕಾರಿಪುರದ ಈಸೂರಿನ ಬಸವರಾಜು ₹2.03,500ಕ್ಕೆ ಅಜ್ಜಂಪುರ ಕೇಂದ್ರದ ಹೋರಿ ಕರುಗಳಾದ ಎ 24-25 ಬಣ್ಣದ ಸರ , ಎ 24-35 ಗಾಳಿಕೆರೆ ಜೋಡಿಯನ್ನು ಪಡೆದು 2 ನೇ ಅತಿಹೆಚ್ಚಿನ ಬಿಡ್ದಾರ ಎನಿಸಿದರೆ, ಹಾವೇರಿಯ ಮಲ್ಲನಗೌಡ ಶಿವನಗೌಡ ಅದೇ ಕೇಂದ್ರಕ್ಕೆ ಸೇರಿದ ಎ24-17 ರಂಗನಾಥ, ಎ24 -47 ಪಾತ್ರ ಜೋಡಿಯನ್ನು ₹1.85 ಲಕ್ಷಕ್ಕೆ ಪಡೆದರು. ಅ ಜೋಡಿಕರುಗಳು ₹1.50 ಲಕ್ಷದ ಆಸುಪಾಸಿನಲ್ಲಿ ಹರಾಜಾ ದವು ಈ ಹಿಂದಿನ ವರ್ಷಗಳಲ್ಲಿ ಪಡೆದು ಸಾಕಿದ ಹಲವು ಹೋರಿಕರುಗಳನ್ನು ಹರಾಜು ಕೇಂದ್ರದ ಆವರಣದ ಬಳಿ ಹಲ ರೈತರು ಮಾರಾಟಕ್ಕೆ ಇಟ್ಟಿದ್ದು ಕೂಡಾ ಕಂಡುಬಂತು.
ಹರಾಜು ಪ್ರಕ್ರಿಯೆಯಲ್ಲಿ ಪಶುಸಂಗೋಪನಾ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ವಿನೋದಪ್ರಿಯಾ, ನಿರ್ದೇಶಕ ಪಿ.ಶ್ರೀನಿವಾಸ್, ಹೆಚ್ಚುವರಿ ನಿರ್ದೇಶಕ ಡಾ.ಪ್ರಸಾದ್ ಮೂರ್ತಿ ಜಂಟಿ ನಿರ್ದೇಶಕರಾದ ಡಾ.ಶಿವಣ್ಣ, ಡಾ.ಸಿದ್ದಗಂಗಯ್ಯ, ಡಾ.ಪ್ರಸನ್ನ ಕುಮಾರ್, ಹೆಚ್ಚುವರಿ ನಿರ್ದೇಶಕ ಡಾ.ಪರಮೇಶ್ವರನಾಯ್ಕ, ಅಜ್ಜಂಪುರ ಕೇಂದ್ರದ ಉಪನಿರ್ದೇಶಕ ಡಾ. ಪ್ರಭಾಕರ್ ಬಾಸೂರು ಕೇಂದ್ರದ ಡಾ.ಕೆ.ಟಿ.ನವೀನ್, ಬಿಳುವಾಲ ಕಾವಲಿನ ಡಾ.ಪೃತ್ವಿರಾಜ್, ಬೀರೂರು ಕೇಂದ್ರದ ಡಾ.ಗೌಸ್ ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ರೈತರು ಭಾಗವಹಿಸಿದ್ದರು.
ಹರಾಜು ಕೂಗಿದ ಕರುಗಳನ್ನು 24 ಗಂಟೆಯೊಳಗೆ ಪೂರ್ಣ ಹಣ ಪಾವತಿಸಿ ಬಿಡ್ ಮಾಡಿದವರು ಪಡೆಯಬೇಕಿತ್ತು ಪ್ರತಿ ಹರಾಜಿನಲ್ಲಿ ಭಾಗವಹಿಸಲು ₹20 ಸಾವಿರ ಪಾವತಿಸಿ ಟೋಕನ್ ಪಡೆಯಲು ನಾಲ್ಕು ಕೌಂಟರ್ ರಚಿಸಲಾಗಿತ್ತು. ಬುಧವಾರ ಸಂಜೆ ವೇಳಗೆ ಬಹಳಷ್ಟು ರಾಸುಗಳ ಬಿಡ್ ಮುಗಿದು ₹1.02 ಕೋಟಿ ಹಣ ಸಂಗ್ರಹವಾಗಿದೆ ಎಂದು ಹರಾಜು ಕೇಂದ್ರದ ಅಧಿಕಾರಿಗಳು ತಿಳಿಸಿದರು.--ಬಾಕ್ಸ್--
ಅಮೃತಮಹಲ್ ತಳಿಯ ರಾಸು ಹೆಚ್ಚು ಶಕ್ತಿಯುತಅಮೃತ್ ಮಹಲ್ ತಳಿಯ ಹೋರಿಕರುಗಳು ಹೆಚ್ಚು ಶಕ್ತಿಯುತವಾಗಿದ್ದು, ಸಾಕುವವರ ನಂಬಿಕೆಗೆ ಪಾತ್ರ ವಾಗಿವೆ. ನಾವು ಕಳೆದ 20 ವರ್ಷಗಳಿಂದಲೂ ಹರಾಜಿನಲ್ಲಿ ಖರೀದಿಸಿದ ರಾಸುಗಳನ್ನು ಕೃಷಿ, ಹಬ್ಬದಲ್ಲಿ ಕಿಚ್ಚು ಹಾಯಿಸುವುದು, ಎತ್ತಿನ ಗಾಡಿ ಓಟದಲ್ಲಿ ಸ್ಪರ್ಧಿಸುವುದು ಮೊದಲಾದ ಚಟುವಟಿಕೆಗಳಲ್ಲಿ ಬಳಸು ತ್ತೇವೆ” ಎಂದು ದಾವಣಗೆರೆ ಬಸವರಾಜ್ ಮತ್ತು ಸಂಗಡಿಗರು ಹೇಳಿದರು.