ಕೆಎಸ್‌ಆರ್‌ಟಿಸಿ ಉದ್ಯೋಗ: ಎಂಟು ವರ್ಷಗಳಲ್ಲಿ 13,888 ನೌಕರರ ನಿವೃತ್ತಿ, ಕೇವಲ 262 ನೇಮಕಾತಿ

By Sathish Kumar KH  |  First Published Jan 19, 2024, 4:25 PM IST

ಕೆಎಸ್‌ಆರ್‌ಟಿಸಿಯಲ್ಲಿ ಕಳೆದ 2016ರಿಂದ ಈವರೆಗೆ 13,888 ನೌಕರರು ನಿವೃತ್ತಿ ಹೊಂದಿದ್ದಾರೆ. ಆದರೆ ಸರ್ಕಾರ ಈ ಅವಧಿಯಲ್ಲಿ ಕೇವಲ 262 ಮಂದಿಯನ್ನು ಮಾತ್ರ 2024ರಲ್ಲಿ ನೇಮಕ ಮಾಡಿಕೊಂಡಿದೆ.


ಬೆಂಗಳೂರು (ಜ.19): ರಾಜ್ಯ ಸರ್ಕಾರದ ಉದ್ಯಮಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) ಕಳೆದ 2016ರಿಂದ ಈವರೆಗೆ (ಕಳೆದ 8 ವರ್ಷಗಳಲ್ಲಿ) ಬರೋಬ್ಬರಿ 13,888 ನೌಕರರು ನಿವೃತ್ತಿ ಹೊಂದಿದ್ದಾರೆ. ರಾಜ್ಯ ಸರ್ಕಾರ ಈ ಪೈಕಿ ಕೇವಲ 262 ಮಂದಿಯನ್ನು ಮಾತ್ರ 2024ರಲ್ಲಿ ನೇಮಕ ಮಾಡಿಕೊಂಡಿದೆ.

ರಾಜ್ಯದ ಯಾವುದೇ ಸರ್ಕಾರಿ ಇಲಾಖೆ, ನಿಗಮಗಳು ಅಥವಾ ಮಂಡಳಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಾ ಹೋಗಬೇಕು. ಆದರೆ, ಇಲ್ಲಿ ಪ್ರತಿವರ್ಷ ಸಾವಿರಾರು ಜನರು ನಿವೃತ್ತಿ ಹೊಂದುತ್ತಿದ್ದರೂ, ಅದಕ್ಕೆ ಪರ್ಯಾಯ ನೇಮಕಾತಿಯನ್ನೂ ಮಾಡಿಕೊಳ್ಳದೇ ಹಾಲಿ ಇರುವ ನೌಕರರಿಗೆ ಕನಿಷ್ಠ ವೇತನಕ್ಕೆ ಗರಿಷ್ಠ ಕೆಲಸವನ್ನು ಮಾಡಿಸುತ್ತಿದ್ದಾರೆ. ಇನ್ನು ಸಾರ್ವಜನಿಕ ಸೇವೆ ನೀಡುವಲ್ಲಿಯೂ ತೊಂದರೆ ಉಂಟಾಗುವಂತೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ವಿಭಾಗಗಳಲ್ಲಿ ಕಳೆದ ಎಂಟು ವರ್ಷಗಳಲ್ಲಿ 13,888 ನೌಕರರು ನಿವೃತ್ತಿ ಹೊಂದಿದ್ದಾರೆ. ಆದರೆ, ಇದಕ್ಕೆ ಶೇ.10 ನೌಕರರನ್ನೂ ಕೂಡ ಸರ್ಕಾರ ನೇಮಕಾತಿ ಮಾಡಿಕೊಂಡಿಲ್ಲ.

Tap to resize

Latest Videos

undefined

522 ಕೋಟಿ ಡೀಲ್‌, ಅಶೋಕ್‌ ಲೇಲ್ಯಾಂಡ್‌ ಕಂಪನಿಯಿಂದ 1225 ಹೊಸ ಬಸ್‌ ಖರೀದಿ ಮಾಡಲಿರುವ KSRTC

ಇನ್ನು ಕಳೆದ 2021ರಲ್ಲಿ 700 ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ನಡೆಸಲಾಗಿದ್ದ ನೇಮಕಾತಿ ಪ್ರಕ್ರಿಯೆಯು ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅರ್ಧಕ್ಕೆ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದ್ದು ಅದರಲ್ಲಿಯೂ ಕೇವಲ 262 ನೌಕರರನ್ನು ನೇಮಕಾತಿ ಮಾಡಲಾಗಿದೆ. ಇನ್ನು ಕೆಎಸ್‌ಆರ್‌ಟಿಸಿ ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ನೇಮಕವಾದವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೇಮಕಾತಿ ಆದೇಶ ಪತ್ರವನ್ನು ನೀಡಿದ್ದಾರೆ. ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವಂತೆ ಸಲಹೆ ನೀಡಿದ್ದಾರೆ.

ನಂತರ ಕೆಎಸ್‌ಆರ್‌ಟಿಸಿ ಉದ್ಯೋಗಗಳ ಬಗ್ಗೆ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿಯಲ್ಲಿ ಸುಮಾರು 8 ವರುಷಗಳ ನಂತರ ನೇಮಕಾತಿ‌ ನಡೆಸಿದೆ. 2016 ರಿಂದ ಇಲ್ಲಿಯವರೆಗೆ 13,888 ಸಿಬ್ಬಂದಿಗಳು ನಿವೃತ್ತಿಯನ್ನು ಹೊಂದಿದ್ದಾರೆ. ಆದರೆ, ಇತರೆ ಕಾರಣಗಳಿಂದ ತೆರವಾಗಿರುವ ಹುದ್ದೆಯನ್ನು ಭರ್ತಿ ಮಾಡಿರಲಿಲ್ಲ. ಇದರಿಂದ ಬಸ್ಸುಗಳ ಸಮರ್ಪಕ ಕಾರ್ಯಚರಣೆಗೆ ತೊಂದರೆ ಉಂಟಾಗುತ್ತಿತ್ತು. ಸದರಿ ನೇಮಕಾತಿ ಸ್ವಲ್ಪ ಮಟ್ಟಿಗೆ  ನಿಗಮಕ್ಕೆ ಸಹಕಾರಿಯಾಗಲಿದೆ. ಮಾರ್ಚ್ ನಂತರ ಮತ್ತಷ್ಟು ತಾಂತ್ರಿಕ‌ ಸಹಾಯಕ‌ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ತಾಂತ್ರಿಕ ಸಹಾಯಕರ ನೇಮಕಾತಿ ಫೈನಲ್ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರಿದೆಯೇ ನೋಡಿ!

ರಾಜ್ಯದಲ್ಲಿ ನಿರುದ್ಯೋಗವೂ ತಾಂಡವಾಡುತ್ತಿದ್ದು, ಯುವಜನರು ಉದ್ಯೋಗ ಸಿಗದೇ ಸರ್ಕಾರದಿಂದ ಪುಡಿಗಾಸು ನೀಡುವ ಗುತ್ತಿಗೆ ಕೆಲಸ ಅಥವಾ ಖಾಸಗಿ ಕಂಪನಿಗಳಲ್ಲಿ ಸೇರಿಕೊಂಡು ಜೀತದಂತೆ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಹಿಂದೆ ಕಳೆದ 30 ವರ್ಷಗಳ ಹಿಂದೆ ನೇಮಕಗೊಂಡ ಸಾವಿರಾರು ನೌಕರರು ನಿವೃತ್ತಿ ಆಗುತ್ತಿದ್ದರೂ ಅದನ್ನು ಭರ್ತಿ ಮಾಡುವಲ್ಲಿ ಮಾತ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ. ಪ್ರತಿ ಬಾರಿ ಚುನಾವಣೆಯ ಪ್ರಣಾಳಿಕೆಯಲ್ಲಿ ಲಕ್ಷ ಲಕ್ಷ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡುತ್ತಾರೆ. ಆದರೆ, ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲವೊಂದಿಷ್ಟು ಉದ್ಯೋಗ ಮೇಳ ಮಾಡಿಕೊಂಡು ಯುವಕರನ್ನು ನಿರುದ್ಯೋಗಿಗಳನ್ನಾಗಿಯೇ ಮಾಡುತ್ತಾರೆ.

click me!