KPTCL Recruitment Scam: ಅರ್ಧ ಶತಕ ಪೂರೈಸಿದ ಬಂಧಿತರ ಸಂಖ್ಯೆ!

By Kannadaprabha NewsFirst Published Jan 14, 2023, 12:44 PM IST
Highlights

ಕೆಪಿಟಿಸಿಎಲ್‌ ಅಕ್ರಮ ಪರೀಕ್ಷೆ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 50ಕ್ಕೇರಿದಂತಾಗಿದೆ. 

ಬೆಳಗಾವಿ (ಜ.14): ಕೆಪಿಟಿಸಿಎಲ್‌ ಅಕ್ರಮ ಪರೀಕ್ಷೆ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 50ಕ್ಕೇರಿದಂತಾಗಿದೆ. ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ದರ್ಗಾಶಿರೂರು ಗ್ರಾಮದ ಶಿವರಾಜ್ ಲಕ್ಷ್ಮೀಪುತ್ರ ಪೊಲೀಸ್‌ಪಾಟೀಲ (28) ಬಂಧಿತ ಆರೋಪಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗಿರುವ ಕೆಪಿಟಿಸಿಎಲ್‌ ನ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಡಿವೈಸ್‌ಗಳ ಮೂಲಕ ಅಕ್ರಮ ಎಸಗಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಮೈಕ್ರೋಚಿಪ್‌ ಉಪಯೋಗಿಸಿ ಪರೀಕ್ಷೆ ಬರೆದಿದ್ದ ಶಿವರಾಜ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್‌ ಡಿವೈಸ್‌, ಮೈಕ್ರೊಚಿಪ್‌, ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ನೇಮಕಾತಿ, ಬಡ್ತಿ ಗೊಂದಲ ಸರಿಪಡಿಸಲು ಆಗ್ರಹ
ಕಲಬುರಗಿ: ಸರ್ಕಾರಿ ನೇಮಕಾತಿ ಹಾಗೂ ವಿವಿಧಿ ಇಲಾಖೆಗಳಲ್ಲಿ ನೀಡಲಾಗುತ್ತಿರುವ ಬಡ್ತಿ ಸಂದರ್ಭದಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್‌ ಸದಸ್ಯ ಶಶಿಲ್‌ ನಮೋಶಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ಅಂಕಗಳನ್ನು ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ನಾನ್‌-ಎಚ್ಕೆ (ಹೈದ್ರಾಬಾದ್‌-ಕರ್ನಾಟಕೇತರ) ವೃಂದದಲ್ಲಿ ಆಯ್ಕೆಯಾಗುವುದು ಅವರ ಮೂಲಭೂತ ಹಕ್ಕಾಗಿರುತ್ತದೆ. ಆದರೆ, ಈ ನಿಯಮವನ್ನು ಅಲ್ಲಗಳೆಯುವ ಮೂಲಕ ಸಂವಿಧಾನದ ಪರಿಚ್ಛೇದ 14 ಹಾಗೂ 371(ಜೆ) ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿದೆ. ಹಾಗಾಗಿ, ಯಾವುದೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಾಗ ಮೊದಲು ನಾನ್‌-ಎಚ್ಕೆ ಮೂಲ ವೃಂದ ಪ್ರಕಟಿಸಿದ ನಂತರ ಎಚ್‌.ಕೆ. ವೃಂದ ಪ್ರಕಟಿಸುವಂತೆ ನಿಯಮ ರೂಪಿಸಬೇಕೆಂದು ಸಲಹೆ ನೀಡಿದರು.

ಪ್ರಸಕ್ತ 371(ಜೆ) ಅಡಿ ಸಮತಲದ ಬದಲು ಲಂಬೀಕೃತ ಮೀಸಲಾತಿ ನೀಡಲಾಗುತ್ತಿದೆ. ಇದರ ಬದಲು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ ನೀಡುತ್ತಿರುವ ಮಾದರಿಯಲ್ಲಿ 371(ಜೆ) ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಗೃಹ ಸಚಿ​ವರು ರಾಜೀನಾಮೆ ನೀಡ​ದಿ​ದ್ದರೆ ಹಗ​ರಣ ಬಯ​ಲಿ​ಗೆ: ಕಿಮ್ಮನೆ ರತ್ನಾ​ಕರ್‌

ಅರ್ಜಿ ಸಲ್ಲಿಸುವ ಸ್ಥಳ ಅಥವಾ ನಿಯುಕ್ತಿ ಸಂದರ್ಭದಲ್ಲಿ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ಆದ್ಯತೆ ಬಗ್ಗೆ ಅಸಂವಿಧಾನಿಕವಾಗಿ ಪ್ರಶ್ನೆಗಳನ್ನು ಕೇಳುವ ಪರಿಪಾಠ ಕೈಬಿಡಬೇಕು. ಮಿಕ್ಕುಳಿದ ವೃಂದದ ಅಡಿಯಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಸೇವಾ ಅವಧಿಯಲ್ಲಿ ಸ್ಥಳೀಯ ವೃಂದದ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂಬ ಅಸಂವಿಧಾನಿಕ ನಿಯಮ ತೆಗೆದು ಹಾಕಬೇಕು. ಎಸ್ಸಿ/ಎಸ್ಟಿಮಾದರಿಯಲ್ಲಿ ಜನರಲ್‌ ಮೆರಿಟ್ನಲ್ಲಿಯೂ ಅಭ್ಯರ್ಥಿಗಳಿಗೆ 371(ಜೆ) ಅಡಿ ಸೇವಾ ಸೌಲಭ್ಯಗಳನ್ನು ಮುಂದುವರೆಸಬೇಕೆಂದು ಅವರು ಸಲಹೆ ನೀಡಿದರು.

 

Assistant Professor Merit list: ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಮೆರಿಟ್‌ ಪಟ್ಟಿ ಬಿಡುಗಡೆ

ಮೆರಿಟ್‌ ಅನುಗುಣವಾಗಿ ಆಯ್ಕೆಪಟ್ಟಿಸಿದ್ಧಪಡಿಸುವಾಗ ಮೊದಲಿಗೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿಸಿದ್ದಪಡಿಸಬೇಕು. ನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಎದುರಾಗಿ ಅರ್ಹ ಸ್ಥಳೀಯ ಅಭ್ಯರ್ಥಿಗಳ ಆಯ್ಕೆಪಟ್ಟಿಸಿದ್ದಪಡಿಸಬೇಕೆಂದು ಅವರು ಒತ್ತಿ ಹೇಳಿದರು. ಪ್ರವೀಣ ಹರಿದಾಸ ಮತ್ತು ಅಣವೀರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

click me!