2015ರ ಉತ್ತರ ಪತ್ರಿಕೆ ನೀಡಲು ಸತಾಯಿಸುತ್ತಿರುವ ಕೆಪಿಎಸ್‌ಸಿ..!

By Kannadaprabha NewsFirst Published Jun 24, 2022, 10:40 AM IST
Highlights

*  2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ
*  ಕೆಪಿಎಸ್ಸಿ ಧೋರಣೆಗೆ ಬೇಸತ್ತು ಮುಖ್ಯಮಂತ್ರಿಗೆ ದೂರು ನೀಡಿದ ಆಯ್ಕೆ ವಂಚಿತ ಅಭ್ಯರ್ಥಿ
*  ಅಂಕ ತಿದ್ದಿರುವ ಅನುಮಾನದಿಂದ ಉತ್ತರ ಪತ್ರಿಕೆ ಪ್ರತಿ ಕೇಳಿರುವ ಧಾರವಾಡದ ರಮೇಶ ತನಿಖೆದಾರ
 

ಧಾರವಾಡ(ಜೂ.24):  2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನ​ರ್ಸ್‌ ಹುದ್ದೆಗಳ ಮುಖ್ಯ ಪರೀಕ್ಷೆಯ ಅಂಕ ತಿದ್ದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿ ನೀಡಲು ಕರ್ನಾಟಕ ಲೋಕಸೇವಾ ಆಯೋಗವು ಸತಾಯಿಸುತ್ತಿದೆ ಎಂದು ಧಾರವಾಡದ ಮೂಲದ ಆಯ್ಕೆ ವಂಚಿತ ಅಭ್ಯರ್ಥಿಯೊಬ್ಬರು ಬೇಸತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.

ಧಾರವಾಡದ ರಮೇಶ ತನಿಕೆದಾರ 2015ನೇ ಸಾಲಿನ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿ ನೀಡುವಂತೆ ನಿಯಮಾನುಸಾರ ಮಾಹಿತಿ ಹಕ್ಕಿನಡಿ ಮನವಿ ಮಾಡಿದ್ದಾರೆ. ಆದರೆ, ಕೆಪಿಎಸ್ಸಿ ನೆಪವೊಡ್ಡಿ ಮನವಿ ತಿರಸ್ಕರಿಸುತ್ತಿದೆ. ಇದೇ ವಿಷಯವಾಗಿ ಕರ್ನಾಟಕ ಮಾಹಿತಿ ಆಯೋಗ, ಹೈಕೋರ್ಟ್‌ ಆದೇಶ ಸಹ ನೀಡಿದೆ. ಸರ್ವೋಚ್ಚ ನ್ಯಾಯಾಲಯವು ವಿವಿಧ ಮೂರು ಪ್ರಕರಣಗಳಲ್ಲಿ ಮಾಹಿತಿ ಹಕ್ಕಿನಡಿ ವೈಯಕ್ತಿಕವಾಗಿ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಪ್ರತಿ ಪಡೆಯಬಹುದೇ ಹೊರತು ಬೇರೆಯವರ ಉತ್ತರ ಪತ್ರಿಕೆ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ತನ್ನ ತೀರ್ಪುಗಳಲ್ಲಿ ಉಲ್ಲೇಖಿಸಿದೆ. ಇಷ್ಟಾಗಿಯೂ ವೈಯಕ್ತಿಕವಾಗಿ ಅಭ್ಯರ್ಥಿಯೇ ಮನವಿ ಮಾಡಿದರೂ ಕೆಪಿಎಸ್ಸಿ ಮಾತ್ರ ಸುಪ್ರಿಂಕೋರ್ಟ್‌ ಆದೇಶದ ಹೆಸರಿನಲ್ಲಿ ನನ್ನ ಮನವಿ ತಿರಸ್ಕರಿಸುತ್ತಿದೆ ಎಂದು ರಮೇಶ ಆರೋಪಿಸುತ್ತಾರೆ.

15 ತಿಂಗಳಾದ್ರೂ ಫಲಿತಾಂಶವಿಲ್ಲ, ವಯಸ್ಸು ಮೀರುವ ಆತಂಕದಲ್ಲಿ ಕೆಎಎಸ್ ಆಕಾಂಕ್ಷಿಗಳು!

ಏತಕ್ಕೆ ಕೊಡುತ್ತಿಲ್ಲ..

2015ರ ಸಾಲಿನ ಮುಖ್ಯ ಪರೀಕ್ಷೆಯು ಡಿಜಿಟಲ್‌ ಮೌಲ್ಯಮಾಪನಕ್ಕೆ ಒಳಪಟ್ಟಿದೆ. ಕೆಪಿಎಸ್ಸಿಯು ಟಿಸಿಎಸ್‌ ಎಂಬ ಸಾಫ್ಟವೇರ್‌ ಕಂಪನಿ ಜತೆಗೆ ಮೌಲ್ಯಮಾಪನ ಪ್ರಕ್ರಿಯೆ ಸಲುವಾಗಿ ಒಪ್ಪಂದ ಮಾಡಿಕೊಂಡಿತ್ತು. ಮುಖ್ಯ ಪರೀಕ್ಷೆಯ ಅಂಕಗಳ ಡಾಟಾವನ್ನು ಎಡಿಟೇಬಲ್‌ ಎಕ್ಸಲ್‌ ಶೀಟ್‌ನಲ್ಲಿ ಡೌನ್‌ಲೌಡ್‌ ಮಾಡಿ, ಅಂಕ ತಿರುಚಿರುವ ಅನುಮಾನ ತಮಗಿದೆ. ಎಡಿಟೇಬಲ್‌ ಫಾರ್ಮೆಟ್‌ ಇರುವುದರಿಂದ ಅಂಕಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಸ್ವಾ್ಯಪ್‌ ಮಾಡಲು ಸಾಧ್ಯವಿದೆ.

2014ರ ಸಾಲಿನಲ್ಲಿ ಕೆಪಿಎಸ್ಸಿ ಟಿಸಿಎಸ್‌ನಿಂದ ಪಿಡಿಎಫ್‌ ಫಾರ್ಮೆಟ್‌ನಲ್ಲಿ ಡೌನ್‌ಲೌಡ್‌ ಮಾಡಿಕೊಂಡಿದ್ದರಿಂದ ಯಾವುದೇ ಅಂಕಗಳ ಬದಲಾವಣೆ ಆಗದೇ ಇರುವುದರಿಂದ ಮಾಹಿತಿ ಹಕ್ಕಿನ ಅಡಿ ಅಭ್ಯರ್ಥಿಗಳಿಗೆ ಪ್ರತಿಗಳನ್ನು ಕೆಪಿಎಸ್ಸಿ ನೀಡಿದೆ. ಆದರೆ, 2015ರ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ ನೀಡದೇ ಇರುವುದು ಅಂಕಗಳ ಬದಲಾವಣೆಯನ್ನು ಎತ್ತಿ ತೋರುತ್ತಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ತೀವ್ರವಾಗಿ ಗಮನಹರಿಸಿ ನ್ಯಾಯ ಒದಗಿಸಿಕೊಡಬೇಕೆಂದು ರಮೇಶ ತನಿಕೆದಾರ ಆಗ್ರಹಿಸುತ್ತಾರೆ.

ಪಿಯುಸಿಯಲ್ಲಿ ಮೊದಲ ರ್‍ಯಾಂಕ್ ಬಂದ ವಿದ್ಯಾರ್ಥಿಗಳು ಕೆಎಎಸ್‌ ಅಧಿಕಾರಿಯಾಗುತ್ತೇನೆ ಎಂದು ಭರವಸೆಯಿಂದ ಕನಸು ಕಟ್ಟಿ ಕೊಳ್ಳುತ್ತಾರೆ. ಅಂತೆಯೇ ನಾನು ಸಹ ರ್‍ಯಾಂಕ್ ವಿದ್ಯಾರ್ಥಿಯಾಗಿದ್ದು ಕನಸು ಕಂಡಿದ್ದೆನು. ಶ್ರಮವಹಿಸಿ ಓದಿ ಕೆಎಎಸ್‌ ಮುಖ್ಯ ಪರೀಕ್ಷೆ ವರೆಗೂ ಹೋಗಿದ್ದೇನೆ. ಪರೀಕ್ಷೆಯಲ್ಲಿ ನಾನು ಅನುತ್ತೀರ್ಣ ಆಗಿಲ್ಲ. ಕೆಪಿಎಸ್ಸಿ ಅನುತ್ತೀರ್ಣಗೊಳಿಸಿತು. ಎಷ್ಟು ವರ್ಷಗಳ ಕಾಲ ಪ್ರತಿಭಾವಂತ, ಬಡ, ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಕೆಪಿಎಸ್ಸಿ ಕೆಟ್ಟ ವ್ಯವಸ್ಥೆಯ ಜತೆಗೆ ಹೊಂದಾಣಿಕೆಯಾಗಬೇಕು? ಯುಪಿಎಸ್ಸಿ ರೀತಿಯಲ್ಲಿ ಕೆಪಿಎಸ್ಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸುತ್ತಿಲ್ಲ ಎಂದು ಬೇಸರದಿಂದ ಮುಖ್ಯಮಂತ್ರಿಗೆ ಬರದೆ ಪತ್ರದಲ್ಲಿ ಸರ್ಕಾರಕ್ಕೆ ರಮೇಶ ಪ್ರಶ್ನೆ ಕೇಳಿದ್ದಾರೆ.
 

click me!