ಕರ್ನಾಟಕದಲ್ಲಿ 402 ಪಿಎಸ್‌ಐ ಹುದ್ದೆಗಳಿಗೆ ನಡೆಯಬೇಕಿದ್ದ ಪರೀಕ್ಷೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿದೆ. ಯುಪಿಎಸ್‌ಸಿ ಪರೀಕ್ಷೆ ದಿನಾಂಕದೊಂದಿಗೆ ಸಂಘರ್ಷ ಉಂಟಾಗಿದ್ದರಿಂದ ಮತ್ತು ಅಭ್ಯರ್ಥಿಗಳ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಮಾಹಿತಿ ನೀಡಿದರು.
ಬೆಂಗಳೂರು (ಸೆ.12): ರಾಜ್ಯ ಸರ್ಕಾರದಲ್ಲಿ ಖಾಲಿಯಿದ್ದ 402 ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸೆ.22ರ ಬದಲಾಗಿ ಸೆ.28ರ ಶನಿವಾರದಂದು ನಡೆಸಲು ಮುಂದೂಡಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ರಾಜ್ಯದ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು, ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ಮುಖ್ಯ ಪರೀಕ್ಷೆಗೆ ಮತ್ತು ಪಿಎಸ್‌ಐ ಪರೀಕ್ಷೆ ಸೆ.22ರಂದು ನಿಗದಿಯಾಗಿರುವುದರಿಂದ ಎರಡು ಪರೀಕ್ಷೆ ಬರೆಯಲು ಆಗುವುದಿಲ್ಲ. ಯಾವುದಾದರು ಒಂದು ಪರೀಕ್ಷೆ ಅವಕಾಶ ಕೈತಪ್ಪುತ್ತದೆ. ಹೀಗಾಗಿ ಪಿಎಸ್ಐ ಪರೀಕ್ಷೆ ಮುಂದೂಡುವಂತೆ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು. ಇದರ ಜೊತೆಗೆ ವಿಪಕ್ಷವಾದ ಬಿಜೆಪಿಯ ನಾಯಕರ ನಿಯೋಗವು ಮನವಿ ನೀಡಿತ್ತು. ಈ ಹಿನ್ನೆಲೆಯಲ್ಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಡಿಸೆಂಬರ್‌ವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ತಿಳಿಸಿದ್ದರು.
undefined
ಪಿಎಸ್ಐ ಪರೀಕ್ಷೆ ಮುಂದೂಡಿಕೆ, 600 ಹೊಸ ಪೋಸ್ಟ್ ಭರ್ತಿ ಬಗ್ಗೆ ಅಪ್ಡೇಟ್ ಕೊಟ್ಟ ಗೃಹ ಸಚಿವ ಪರಮೇಶ್ವರ!
ಇನ್ನು ಪ್ರಾಥಮಿಕ ಶಿಕ್ಷಣ ಸಚಿವ ಮಂಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ, ಶನಿವಾರದಂದು ಒಂದು ದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಪರೀಕ್ಷೆ ನಡೆಸಲು ಶಿಕ್ಷಕರು ಬೇಕಾಗುತ್ತದೆ ಎಂದು ಮನವಿಯನ್ನೂ ಮಾಡಲಾಗಿತ್ತು. ಎಲ್ಲ ಆಕಾಂಕ್ಷಿಗಳ ಮನವಿಗೆ ಮನ್ನಣೆ ಕೊಟ್ಟು, ಅನುಕೂಲಕರವಾಗುವ ನಿಟ್ಟಿನಲ್ಲಿ ಸೆ.28ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲ ಪಿಎಸ್‌ಐ ಅಭ್ಯರ್ಥಿಗಳ ಒಳಿತಿನಿಂದ ಸರ್ಕಾರದಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ CET, NEET 2ನೇ ಸುತ್ತಿನ ಆಯ್ಕೆ ಬದಲಾವಣೆಗೆ ಅವಕಾಶ, ಎಚ್ಚರಿಕೆ ನೀಡಿದ ಕೆಇಎ
ಇನ್ನು ರಾಜ್ಯದಲ್ಲಿ ಪೊಲೀಸ್ ಪೇದೆ ನೇಮಕಾತಿಗೆ ವಯೋಮಿತಿ ಹೆಚ್ಚಳದ ಕುರಿತು ಬೇರೆ ರಾಜ್ಯಗಳಿಂದ ಮಾಹಿತಿ ಕಲೆ ಹಾಕಿದ್ದೇವೆ. ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ, ವರದಿಯನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಮತ್ತೊಂದೆಡೆ ರಾಜ್ಯದಲ್ಲಿ ಒಟ್ಟು 1000ಕ್ಕೂ ಅಧಿಕ ಪಿಎಸ್‌ಐ ಹುದ್ದೆಗಳು ಖಾಲಿಯಿವೆ. ಕಳೆದ ನಾಲ್ಕು ವರ್ಷಗಳಿಂದ ಪಿಎಸ್ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲುಒಂದು ವರ್ಷ ಬೇಕಾಗುತ್ತದೆ. ಎರಡು ವರ್ಷ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, 402 ಪಿಎಸ್‌ಐ ಹುದ್ದೆಗಳಿಗೆ ಆದಾಷ್ಟು ಬೇಗ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಉಳಿದಂತೆ ಶೀಘ್ರವೇ ಪುನಃ 600 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.