ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ, ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೂ ಮೀಸಲಾತಿ!

By Suvarna News  |  First Published Feb 24, 2022, 9:43 AM IST

ರಾಜ್ಯ ಸರ್ಕಾರವು ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಬೋಧನೆಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಮೊದಲ ಬಾರಿಗೆ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಶೇ.1ರಷ್ಟು ಮೀಸಲಾತಿ ಕಲ್ಪಿಸಿದೆ.


ಬೆಂಗಳೂರು (ಫೆ.24): ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ(6ರಿಂದ 8ನೇ ತರಗತಿ) ಬೋಧನೆಗೆ 15 ಸಾವಿರ ಪದವೀಧರ ಶಿಕ್ಷಕರ(ಜಿಪಿಟಿ) ನೇಮಕಾತಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಶೇ.1ರಷ್ಟು ಮೀಸಲಾತಿ ಕಲ್ಪಿಸಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು-2022 ಅನ್ನು ಪ್ರಕಟಿಸಿದ್ದ ಕರಡು ಅಧಿಸೂಚನೆಗಳಿಗೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್ ಶಿವಕುಮಾರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾಾರೆ.

Tap to resize

Latest Videos

ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ಇತರೆ ಹಿಂದುಳಿದ ವರ್ಗದ ಅಂಗವಿಕಲ ಅಭ್ಯರ್ಥಿಗಳಿಗೆ 47 ವರ್ಷದವರಿಗೆ, ಹಿಂದುಳಿದ ವರ್ಗದ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 45 ವರ್ಷ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷದವರೆಗೂ ಅವಕಾಶ ನೀಡಿದೆ. ಪ್ರತಿ ಪ್ರವರ್ಗದಲ್ಲಿ ಶೇ.1ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಂದ ಭರ್ತಿಗೆ ಅವಕಾಶ ನೀಡಿದೆ.

AIISH Mysuru Recruitment 2022: ಮೈಸೂರಿನಲ್ಲಿರುವ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಉದ್ಯೋಗವಕಾಶ

ಮಾನದಂಡಗಳು: ಶಿಕ್ಷಕರ ಆಯ್ಕೆ ವಿಚಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ(ಸಿಇಟಿ)ಯಲ್ಲಿ ಶೇ.50ರಷ್ಟು ಅಂಕ, ಟಿಇಟಿ ಯಲ್ಲಿ ಶೇ.20, ಪದವಿಯಲ್ಲಿ ಶೇ.20ರಷ್ಟು ಅಂಕ ಮತ್ತು ಬಿ.ಇಡಿ ಯಲ್ಲಿ ಶೇ.10ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ನಾಲ್ಕು ವರ್ಷಗಳ ಬಿ.ಇಡಿ ಪಡೆದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ಯಲ್ಲಿ ಶೇ.50ರಷ್ಟು ಅಂಕ, ಟಿಇಟಿ ಯಲ್ಲಿ ಶೇ.20 ಮತ್ತು ಬಿ.ಇಡಿ ಯಲ್ಲಿ ಶೇ.30ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂಕಗಳ ಪರಿಗಣನೆ ವೇಳೆ ಇಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಒಂದೇ ಪ್ರಮಾಣದ ಅಂಕಗಳನ್ನು ಪಡೆದರೆ ಅಭ್ಯರ್ಥಿಗಳ ವಯಸ್ಸಿನ ಆಧಾರದ ಮೇಲೆ, ಅಂದರೆ ಹಿರಿಯ ವಯಸ್ಸಿನವರನ್ನು ಆಯ್ಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಐಚ್ಛಿಕ ವಿಷಯಗಳ ವ್ಯಾಸಂಗ ಕಡ್ಡಾಯ: ಭಾಷಾ ವಿಷಯಗಳಲ್ಲಿ ಹುದ್ದೆ ಬಯಸುವ ಅಭ್ಯರ್ಥಿಗಳು, ಪದವಿ ವೇಳೆ ಭಾಷಾ ವಿಷಯಗಳ ಜತೆಗೆ ಮೂರು ವರ್ಷದ ಐಚ್ಛಿಕ ವಿಷಯವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಸಂಸ್ಕೃತ ಸೇರಿದಂತೆ ಇತರೆ ಭಾಷೆ ವಿಷಯಗಳನ್ನು ಐಚ್ಛಿಕ ವಿಷಯಗಳನ್ನು ಅಭ್ಯಾಸ ಮಾಡಿರಬೇಕು ಮತ್ತು ಈ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಪಡೆದಿರಬೇಕು.

ಗಣಿತ ಮತ್ತು ವಿಜ್ಞಾನ ಹುದ್ದೆಗೆ: ಗಣಿತ ಮತ್ತು ಭೌತಶಾಸ್ತ್ರ ವಿಷಯಗಳನ್ನು ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಅದರ ಜೊತೆಗೆ ರಸಾಯನಶಾಸ್ತ್ರ, ಗಣಕಶಾಸ್ತ್ರ, ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ ಮತ್ತು ಭೂಗರ್ಭಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ವ್ಯಾಸಂಗ ಮಾಡಿರಬೇಕು. ಎಂಜಿನಿಯರಿಂಗ್ ಪದವೀಧರರು ಮೊದಲ ಮೂರು/ನಾಲ್ಕು ಸೆಮಿಸ್ಟರ್‌ಗಳಲ್ಲಿ ಗಣಿತ ಮತ್ತು ಉಳಿದ ಸೆಮಿಸ್ಟರ್‌ಗಳಲ್ಲಿ ಅನ್ವಯಿಕ ಗಣಿತ ಅಭ್ಯಾಸ ಮಾಡಿರಬೇಕು.

Bellary Anganawadi Recruitment 2022: ಬಳ್ಳಾರಿಯ ವಿವಿಧ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಾಸ್ತುಶಿಲ್ಪ ವಿಷಯವನ್ನು ಹೊರತುಪಡಿಸಿ ಕನಿಷ್ಠ ಮೂರು ಅಥವಾ 4 ಸೆಮಿಸ್ಟರ್‌ಗಳಲ್ಲಿ ಗಣಿತ ಅಥವಾ ಅನ್ವಯಿಕ ಗಣಿತ ವಿಷಯವನ್ನು ಅಭ್ಯಾಸ ಮಾಡಿರುವ ಎಂಜಿನಿಯರಿಂಗ್ ಪದವೀಧರರನ್ನು ಗಣಿತ ವಿಷಯದ ಶಿಕ್ಷಕರ ಹುದ್ದೆಗೆ ಪರಿಗಣಿಸಲಾಗಿದೆ. ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಜತೆಗೆ, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್‌ಸ್‌, ಎಲೆಕ್ಟ್ರಾನಿಕ್ಸ್‌, ಸಂಖ್ಯಾಶಾಸ್ತ್ರ, ಭೂಗೋಳಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಜೀವ ವಿಜ್ಞಾನ ಹುದ್ದೆಗೆ: ಜೈವಿಕ ಭೂವಿಜ್ಞಾನ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ರಸಾಯನಶಾಸ್ತ್ರದೊಂದಿಗೆ ಇತರ ಎರಡು ಐಚ್ಛಿಕ ವಿಷಯಗಳಾಗಿ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರೇಷ್ಮೆ, ಪರಿಸರ ವಿಜ್ಞಾನ, ತಳಿಶಾಸ್ತ್ರ, ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವಿಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿರಬೇಕು.

ಸಮಾಜಶಾಸ್ತ್ರ ಬೋಧನೆಗೆ: ಸಮಾಜಶಾಸ್ತ್ರ ಬೋಧನೆಗೆ ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ, ರಾಜ್ಯಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು.

click me!