ಕರ್ನಾಟಕದಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ! ಬೇಸಿಗೆಯಲ್ಲಿ ನೌಕರರಿಗೆ ರಿಲೀಫ್ ಕೊಟ್ಟ ಸರ್ಕಾರ!

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬೇಸಿಗೆಯ ತಾಪಮಾನದ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಲಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಒಟ್ಟು 9 ಜಿಲ್ಲೆಗಳಲ್ಲಿ ಈ ಬದಲಾವಣೆ ಅನ್ವಯವಾಗಲಿದೆ.


ಬೆಂಗಳೂರು (ಏ.02): ಕರ್ನಾಟಕದಲ್ಲಿ ಈ ಬಾರಿ ಬೇಸಿಗೆ ಕಾಲ ಪ್ರಖರವಾಗಿದ್ದು, ತಾಪಮಾನವೂ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೇಸಿಗೆಯ ಅವಧಿಯಲ್ಲಿ ಮಧ್ಯಾಹ್ನದ ನಂತರ ಕೆಲಸ ಮಾಡುವುದು ಕಷ್ಟಸಾಧ್ಯವಾಗಲಿದ್ದು, ನೌಕರರಿಗೆ ಅನಾರೋಗ್ಯವೂ ಕಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಮತ್ತು ಸರ್ಕಾರಿ ಸೇವೆ ಪಡೆಯಲು ಬರುವ ಸಾರ್ವಜನಿಕರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೇಸಿಗೆಯ ತಿಂಗಳಾದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸರ್ಕಾರಿ ಕಚೇರಿ ಕೆಲಸದ ಅವಧಿ (Karnataka Government Office working timings) ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಅತ್ಯಂತ ಬಿಸಿಲು ಪಡೆಯುವಂತಹ ಬಯಲು ಸೀಮೆಯ ಜಿಲ್ಲೆಗಳಾದ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಹಾಗೂ ಕಿತ್ತೂರು ಕರ್ನಾಟಕದ 2 ಜಿಲ್ಲೆಗಳು ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಲಾಗಿದೆ. ಎಲ್ಲ ಸರ್ಕಾರಿ ನೌಕರರು ಹಾಗೂ ಸರ್ಕಾರಿ ಸೇವೆ ಪಡೆಯಲು ಬರುವ ಸಾರ್ವಜನಿಕರು ಉರಿ ಬಿಸಿಲು, ಹೆಚ್ಚಿದ ತಾಪಮಾನ ಪರಿಣಾಮದಿಂದ ತಪ್ಪಿಸಿಕೊಳ್ಳಲು ಏಪ್ರೀಲ್‌, ಮೇ ತಿಂಗಳು ಕೆಲಸದ ಅವಧಿಯನ್ನು ರಾಜ್ಯ ಸರ್ಕಾರ ಬದಲಾಯಿಸಲಾಗಿದೆ.

Latest Videos

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳು ಹಾಗೂ ಕಿತ್ತೂರು ಕರ್ನಾಕದ (ಬೆಳಗಾವಿ ವಿಭಾಗ) ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಬದಲಾವಣೆ ಅವಧಿ ಅನ್ವಯವಾಗಲಿದೆ. ಈ ಎರಡು ತಿಂಗಳು ಅವಧಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳಿಗೆ ಬೆಳಗಿನ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕೆಲಸದ ಅವಧಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: 12 ಲಕ್ಷ ಸರ್ಕಾರಿ ನೌಕರರಿಗೆ 2% ಡಿಎ ಹೆಚ್ಚಳ, ಆದ್ರೂ ನೌಕರರು ಖುಷಿಯಾಗಿಲ್ಲ!

ಕಳೆದ ಹಲವು ದಶಕಗಳಿಂದ ಬೇಸಿಗೆಯ ಕಚೇರಿ ಸಮಯದಲ್ಲಿ ಬದಲಾವಣೆ ಇತ್ತು. ಆದಾಗ್ಯೂ ಕಳೆದ 2 ವರ್ಷದಿಂದ ಎಲೆಕ್ಷನ್‌ ಹಾಗೂ ಇತರೆ ಕಾರಣಗಳಿಂದಾಗಿ ಸರಕಾರ ಈ ಸವಲತ್ತು ನೀಡಿರಲಿಲ್ಲ. ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಸಮಯದ ಬದಲಾವಣೆಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಸರ್ಕಾರದಿಂದ ಕಚೇರಿ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿದೆ. ಈಗಾಗಲೇ ಕಲಬುರಗಿಯಲ್ಲಿ ಬೇಸಿಗೆಯ ಅತ್ಯಧಿಕ ತಾಪಮಾನ 42.8 ಡಿಗ್ರಿ ಸೆಲ್ಸಿಯಸ್ ದಾಖಲು ಆಗಿದೆ. ಜೊತೆಗೆ, ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನ ಕಲೆದ 15 ದಿನದಿಂದ ಸರಾಸರಿ 41 ಡಿಗ್ರಿ ದಾಖಲು ಆಗುತ್ತಿದೆ. ಹೀಗಾಗಿ, ಕಚೇರಿ ಕೆಲಸದ ಸಮಯ ಬದಲಾವಣೆಯಿಂದಾಗಿ ಸರಕಾರಿ ನೌಕರರು, ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಇಬ್ಬರಿಗೂ ಅನುಕೂಲ ಆಗಲಿದೆ.

click me!