56432 ಸರ್ಕಾರಿ ಹುದ್ದೆ ಭರ್ತಿಗೆ ಸಂಪುಟ ಅಸ್ತು, 100ರ ಬದಲು 400 ರೋಸ್ಟರ್‌ ಬಿಂದು ಪಾಲನೆ

Published : May 01, 2026, 06:00 AM IST
CM Cabinet Meeting

ಸಾರಾಂಶ

ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ, 100ರ ಬದಲು 400 ರೋಸ್ಟರ್ ಬಿಂದುಗಳನ್ನು ಅಳವಡಿಸಲು ಸಚಿವ ಸಂಪುಟ ನಿರ್ಧರಿಸಿದೆ. ಈ ಬದಲಾವಣೆಯು ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಗುರಿ ಹೊಂದಿದ್ದು, ಹಳೆಯ ಅಧಿಸೂಚನೆಗಳನ್ನು ಹಿಂಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಮೇ.1): ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ 100 ರೋಸ್ಟರ್‌ ಬಿಂದುಗಳ ಬದಲಾಗಿ 400 ರೋಸ್ಟರ್‌ ಬಿಂದುಗಳನ್ನು ಪಾಲಿಸಲು ಹಾಗೂ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ 400 ಬಿಂದುಗಳ ರೋಸ್ಟರ್ ಅನ್ವಯ ತುರ್ತಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಮಾಡಲಾಗಿದೆ.

ಏ.24ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯವನ್ನು ಬದಲಿಸಿ ಗುರುವಾರ ಪರಿಷ್ಕೃತ ನಿರ್ಧಾರ ಕೈಗೊಳ್ಳಲಾಗಿದೆ. 100 ರೋಸ್ಟರ್‌ ಬಿಂದುಗಳ ಆಧಾರದ ಮೇಲೆ ಮೀಸಲಾತಿ ಹಾಗೂ ಒಳ ಮೀಸಲಾತಿ ಅನುಷ್ಠಾನ ಕಠಿಣವಾಗಲಿದೆ. ಹೀಗಾಗಿ ರೋಸ್ಟರ್‌ ಬಿಂದುಗಳನ್ನು 400 ಬಿಂದುಗಳ ವರ್ತುಲಗಳಾಗಿ ವಿಭಜಿಸಿ ಅದರ ಆಧಾರದ ಮೇಲೆ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಹಾಗೂ ಅದರ ಒಳ ಮೀಸಲಾತಿ ನಿಗದಿ ಮಾಡಲು ತೀರ್ಮಾನಿಸಲಾಗಿದೆ.

ಅಧಿಸೂಚನೆ ಹಿಂದಕ್ಕೆ

ಇದೇ ವೇಳೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವ ಪ್ರಕರಣಗಳನ್ನು ಹೊರತುಪಡಿಸಿ 2025ರ ಸೆ.3ರ ಬಳಿಕ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನ್ವಯ ಆಗುವಂತೆ ಹೊರಡಿಸಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ.

ಹೊಸದಾಗಿ ಹೊರಡಿಸುವ ನೇಮಕಾತಿ ಅಧಿಸೂಚನೆಗಳಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಶೇ.50ರ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಶೇ.15ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಪ್ರವರ್ಗ ಎ ಮತ್ತು ಬಿ ಗೆ ತಲಾ ಶೇ. 5.25 ಮತ್ತು ಪ್ರವರ್ಗ ಸಿಗೆ ಶೇ.4.50ರಷ್ಟು ಒಳಮೀಸಲು ಕಲ್ಪಿಸಿ ಹೊಸದಾಗಿ ಅಧಿಸೂಚನೆ ಪ್ರಕಟಿಸಬೇಕು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ತಕ್ಷಣವೇ ಆದೇಶ ಹೊರಡಿಸಬೇಕು. ಅದರ ಅನ್ವಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮಾರ್ಪಡಿಸುವ 400 ಬಿಂದುಗಳ ಅಡಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ.

ನೇಮಕಾತಿಯಲ್ಲಿ ಒಳ ಮೀಸಲಾತಿ ಹೇಗೆ?

ಏ.24ರ ಸಂಪುಟ ಸಭೆ ತೀರ್ಮಾನದಂತೆ ಶೇ.50 ರಷ್ಟು ಮೀಸಲಾತಿಯಲ್ಲಿ ಶೇ.15 ರಷ್ಟು ಮೀಸಲಾತಿಯನ್ನು ಎಸ್ಸಿಗೆ ಮೀಸಲಿಡಬೇಕು. ಆ ಶೇ.15 ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಎ, ಬಿ ಪ್ರವರ್ಗಕ್ಕೆ ತಲಾ ಶೇ.5.25 ಹಾಗೂ ಸಿ ಪ್ರವರ್ಗಕ್ಕೆ ಶೇ.4.5 ರಷ್ಟು ಒಳ ಮೀಸಲು ಹಂಚಿಕೆ ಮಾಡಬೇಕು. ಪ್ರವರ್ಗ ಸಿ ಗೆ ಲಭ್ಯವಾಗುವ ಹುದ್ದೆಗಳಲ್ಲಿ ಮತ್ತು ಶೈಕ್ಷಣಿಕ ಪ್ರವೇಶಾತಿ ಸೀಟುಗಳಲ್ಲಿ ಶೇ.20ರಷ್ಟು 56 ಅಲೆಮಾರಿ ಜಾತಿಗಳಿಗೆ ಮೀಸಲಿಸಲಾಗುವುದು. ಒಂದು ವೇಳೆ ಅಲೆಮಾರಿಗಳು ಲಭ್ಯವಾಗದಿದ್ದಲ್ಲಿ ಸಿ ವರ್ಗದ ಇತರೆ ಜಾತಿಗಳಿಗೆ ಲಭ್ಯವಾಗಲಿವೆ.

ಎಸ್ಸಿಗೆ 3ಕ್ಕಿಂತ ಕಡಿಮೆ ಹುದ್ದೆಯಿದ್ದರೆ ಒಳ ಮೀಸಲು ಇಲ್ಲ

ನೇಮಕಾತಿಗೆ 400 ಬಿಂದುಗಳ ವರ್ತುಲಗಳನ್ನು ಅಳವಡಿಸಲಾಗುತ್ತದೆ. ಈ ವೇಳೆ ಯಾವುದೇ ನೇಮಕಾತಿಯಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಿದ್ದಲ್ಲಿ ಆಗ ಎಲ್ಲ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು 101 ಜಾತಿಗಳಿಗೆ ಮುಕ್ತ ಅವಕಾಶ ನೀಡುವುದು. ಅಂದರೆ 3ಕ್ಕಿಂತ ಕಡಿಮೆ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಿರುವಂತಹ ಸೀಮಿತ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯ ಆಗುವುದಿಲ್ಲ. ಆಗ 101 ಜಾತಿಗಳೂ ಸ್ಪರ್ಧೆ ಮಾಡಿ ಅರ್ಹರು ಆ ಹುದ್ದೆ ಪಡೆಯಬಹುದು ಎಂದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶೇ.6 ರಷ್ಟು ಹುದ್ದೆ ಬ್ಯಾಕ್‌ಲಾಗ್

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.17 ರಿಂದ ಶೇ.24ಕ್ಕೆ ಹೆಚ್ಚಳ ಮಾಡಿರುವುದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಎಲ್ಲಾ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಯ ಶೇ.2 ಹಾಗೂ ಪರಿಶಿಷ್ಟ ಪಂಗಡದ ಶೇ.4 ರಷ್ಟು ಹುದ್ದೆ ಸೇರಿ ಶೇ.6 ರಷ್ಟು ಹುದ್ದೆಗಳನ್ನು ಬ್ಯಾಕ್‌ಲಾಗ್‌ ಹುದ್ದೆ ಎಂದು ಪರಿಗಣಿಸಲಾಗುವುದು. ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳದ ಪರ ನ್ಯಾಯಾಲಯ ಆದೇಶ ಮಾಡಿದರೆ ಆ ಹುದ್ದೆಗಳನ್ನು ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಂದ ಭರ್ತಿ ಮಾಡಲು ತೀರ್ಮಾನಿಸಲಾಗಿದೆ.

ತುರ್ತು ನೇಮಕಾತಿಗೆ ನಿರ್ಧಾರ:

ಈ ಎಲ್ಲ ನಿಯಮ ಮತ್ತು ಷರತ್ತು ಅನ್ವಯ 56,432 ಹುದ್ದೆಗಳ ನೇರ ನೇಮಕಾತಿಗೆ ತುರ್ತು ಕ್ರಮಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ. ಸಂಪುಟ ತೀರ್ಮಾನದಂತೆ ನೇಮಕಾತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಮಾರ್ಪಾಟಿತ 400 ಬಿಂದುಗಳ ರೋಸ್ಟರ್ ಹೊರಡಿಸಲಾಗುತ್ತದೆ.

 

PREV
Read more Articles on
click me!

Recommended Stories

ಕರ್ನಾಟಕದಲ್ಲಿ 56,834 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಗ್ರೀನ್ ಸಿಗ್ನಲ್: ಗೃಹ ಸಚಿವ ಪರಮೇಶ್ವರ
ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ₹450 ಕೋಟಿ ಬಿಡುಗಡೆ ಮಾಡಿದ ಸರ್ಕಾರ!