13,500 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕ; ಸಿಎಂ ಸಿದ್ದರಾಮಯ್ಯ

By Sathish Kumar KHFirst Published Jul 9, 2024, 1:43 PM IST
Highlights

ರಾಜ್ಯದಲ್ಲಿ ಖಾಲಿಯಿರುವ 13,500ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಶೀಘ್ರವೇ ಅರ್ಜಿ ಆಹ್ವಾನಿಸಲಾಗುತ್ತದೆ.

ಬೆಂಗಳೂರು (ಜು.09): ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ 13,500ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಡಿಸೆಂಬರ್ ತಿಂಗಳೊಳಗೆ ಭರ್ತಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂಗನವಾಡಿ ಶಾಲೆಗಳಲ್ಲಿ ಸಮರ್ಪಕವಾಗಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜೊತೆಗೆ, ಸರ್ಕಾರದಿಂದ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಪರ್ಕ ಕೊಂಡಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಎಲ್ಲೆಡೆ ನಿಯೋಜನೆ ಮಾಡಬೇಕು. ರಾಜ್ಯದ ಅಂಗನವಾಡಿ ಶಾಲೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ ಎಂಬ ಮಾಹಿತಿ ಪಡೆದರು.

Latest Videos

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ; ಡಿಕೆಶಿ ನಿಯೋಗದಿಂದ ಸಿಎಂಗೆ ಪತ್ರ

ಈ ವೇಳೆ ಮಹಿಳಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು 4,180 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 9,411 ಸಹಾಯಕಿಯರ ಹುದ್ದೆಗಳು ಖಾಲಿಯಿವೆ ಎಂದು ಮಾಹಿತಿ ನೀಡಿದರು. ಇದರ ಬೆನ್ನಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಸೇರಿದಂತೆ ಒಟ್ಟು ಖಾಲಿಯಿರುವ 13,500ಕ್ಕೂ ಅಧಿಕ ಹುದ್ದೆಗಳನ್ನು ಸರ್ಕಾರದ ನಿಯಮಾವಳಿ ಅನ್ವಯ ನೇಮಕಾತಿ ಮಾಡಿಕೊಳ್ಳಬೇಕು. ಸದರಿ ವರ್ಷದ ಡಿಸೆಂಬರ್‌ ಅಂತ್ಯದೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜೊತೆಗೆ, ನಗರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಸಹಾಯಕಿಯರ ಹುದ್ದೆಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂದುವರೆದು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಬೇಕು. ಇನ್ನು ಬಾಲ್ಯ ಗರ್ಭಿಣಿ ಪ್ರಕರಣ ತಡೆಗೆ ಕ್ರಮ ರಾಜ್ಯದಲ್ಲಿ 2022-23ರ  ಅವಧಿಯಲ್ಲಿ 13,477 ಬಾಲ ಗರ್ಭಿಣಿಯರ ಪ್ರಕರಣಗಳು ಪತ್ತೆಯಾಗಿವೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳನ್ನು ಸಂಪೂರ್ಣ ತಡೆಗಟ್ಟಬೇಕು. ಬಾಲತಾಯಂದಿರ ಪ್ರಕರಣಗಳಲ್ಲಿ ದೂರುಗಳು ಬಂದಾಗ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಬಾಲ್ಯವಿವಾಹ ಮೇಲ್ವಿಚಾರಣಾ ಸಮಿತಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳ ಬಲವರ್ಧನೆ ಮಾಡಬೇಕು ಎಂದು ಸೂಚನೆ ನೀಡಿದರು.

ಮಂಜಿನ ನಗರಿ ಮಡಿಕೇರಿಯಲ್ಲಿ ಹಾಸನದ 19 ವರ್ಷದ ಯುವತಿ ಇಟ್ಟುಕೊಂಡು ನಕಲಿ ವೇಶ್ಯಾವಾಟಿಕೆ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಇದುವರೆಗೆ 7,362 ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ  303 ಸಕ್ರಿಯ ಪ್ರಕರಣಗಳಿವೆ. 7 ಸಾವು ಸಂಭವಿಸಿದೆ. ಕೂಡಲೇ ಸೊಳ್ಳೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ  ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗೆ ವಿಶೇಷ ವಾರ್ಡ್‌ ಸಜ್ಜುಗೊಳಿಸಬೇಕು. ಮೆಡಿಕಲ್‌ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್‌ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ ರಚಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ಪ್ರತಿದಿನ ಸಭೆಗಳನ್ನು ನಡೆಸಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

click me!