5 ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಬಂಡವಾಳ ಹೂಡಿಕೆ| ಹುಬ್ಬಳ್ಳಿ-ಧಾರವಾಡದಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1, ಜಗಳೂರಿನಲ್ಲಿ 2 ಕಾರ್ಖಾನೆ ಸ್ಥಾಪನೆ|
ಬೆಂಗಳೂರು(ಡಿ.22): ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಪವನ ಶಕ್ತಿ, ಸೌರವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 26,659 ಕೋಟಿ ರು. ಬಂಡವಾಳ ಹೂಡಿಕೆಯ ಐದು ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು 13,341 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 55ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಈ ಐದು ಪ್ರಸ್ತಾವನೆಗಳಿಗೆ ಅನುಮತಿ ನೀಡಿದೆ. ಎಲೆಸ್ಟ್ ಪ್ರೈವೆಟ್ ಲಿಮಿಟೆಡ್ ಕಂಪನಿ ಹುಬ್ಬಳ್ಳಿ-ಧಾರವಾಡದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಆರಂಭಿಸಲಿದ್ದು, 14,255 ಕೋಟಿ ರು. ಹೂಡಿಕೆ ಮಾಡಲಿದೆ. ಇದರಿಂದ 867 ಉದ್ಯೋಗ ಸೃಷ್ಟಿಯಾಗಲಿದೆ. ಅಂತೆಯೆ ಇದೇ ಕಂಪನಿ ಹುಬ್ಬಳ್ಳಿ-ಧಾರವಾಡದಲ್ಲಿ 6,339 ಕೋಟಿ ರು. ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಅಗತ್ಯವಿರುವ ಲೀಥಿಯಂ ಅಯಾನ್ ಸೆಲ್ ಮತ್ತು ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲಿದ್ದು, 1,804 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
undefined
ಒಂದು ದಿನ ವೇತನ ಸಹಿತ ರಜೆ ಘೋಷಿಸಿದ ಸರ್ಕಾರ: ಯಾವಾಗ..?
ಅಂತೆಯೆ ಹ್ಯುನೆಟ್ ಪ್ರೈವೆಟ್ ಲಿಮಿಟೆಡ್ ಕಂಪನಿ ಚಿಕ್ಕಬಳ್ಳಾಪುರದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕೆ, ಲೀಥಿಯಂ ಬ್ಯಾಟರಿ ಉತ್ಪಾದನಾ ಘಟಕ ಆರಂಭಕ್ಕೆ 1,825 ಕೋಟಿ ರು. ಹೂಡಿಕೆ ಮಾಡಲಿದ್ದು, ಇದರಿಂದ 2,210 ಉದ್ಯೋಗ ಸೃಷ್ಟಿಯಾಗಲಿದೆ. ಮಿರಾಕ್ಯುಲಮ್ ಗ್ರೀನ್ ಪವರ್ ಕಂಪನಿ ಜಗಳೂರಿನಲ್ಲಿ ಪವನ, ಸೌರ ವಿದ್ಯುತ್ ಯೋಜನೆಗೆ 1,290 ಕೋಟಿ ರು. ಹೂಡಿಕೆ ಮಾಡಲಿದ್ದು, ಇದರಿಂದ 2,820 ಉದ್ಯೋಗ ಸೃಷ್ಟಿ ಹಾಗೂ ಸನಾಲಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪನಿ ಜಗಳೂರಿನಲ್ಲಿ ಪವನ, ಸೌರ ವಿದ್ಯುತ್ ಯೋಜನೆಗೆ 2,950 ಕೋಟಿ ರು. ಹೂಡಿಕೆ ಮಾಡಲಿದ್ದು, ಇದರಿಂದ 5,640 ಉದ್ಯೋಗ ಸೃಷ್ಟಿಯ ನಿರೀಕ್ಷೆಯಿದೆ.
ಸಮಿತಿಯ ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಂ ರೇವಣ್ಣಗೌಡ ಉಪಸ್ಥಿತರಿದ್ದರು.