ಅರಣ್ಯ ರಕ್ಷಣೆಗೆ 3000 ಹೊಸ ಹುದ್ದೆ ಸೃಷ್ಟಿ | ಸಿಬ್ಬಂದಿ ಕೊರತೆ : ಹೊಸ ಹುದ್ದೆ ಸೃಷ್ಟಿಸುವ ಅರಣ್ಯ ಇಲಾಖೆ ಪ್ರಸ್ತಾವನೆಗೆ ಸರ್ಕಾರದ ಒಪ್ಪಿಗೆ
ಬೆಂಗಳೂರು (ಜೂ. 03): ಅರಣ್ಯ ಉತ್ಪನ್ನಗಳ ಕಳ್ಳ ಸಾಗಾಣಿಕೆ, ಅಗ್ನಿ ಅನಾಹುತಗಳಂಥ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆಗೆ ಉಂಟಾಗುತ್ತಿದ್ದ ಸಿಬ್ಬಂದಿ ಕೊರತೆ ನೀಗಿಸುವ ಸಲುವಾಗಿ ಹೆಚ್ಚುವರಿ 3,085 ಹುದ್ದೆಗಳನ್ನು ಸೃಜಿಸುವ ಕುರಿತು ಅರಣ್ಯ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯು ವಿವಿಧ ಮೂಲಗಳಿಂದ ವನ್ಯಜೀವಿ ಮತ್ತು ಅರಣ್ಯ ಸಂಪತ್ತು ನಾಶಕ್ಕೆ ಕಾರಣವಾಗುತ್ತಿತ್ತು. ಈ ಬೆಳವಣಿಗೆ ತಪ್ಪಿಸಲು ಹಾಗೂ ಅರಣ್ಯ ಭೂಮಿ ವಿಸ್ತರಿಸುವ ಸಲುವಾಗಿ ಹೊಸದಾಗಿ ಹುದ್ದೆಗಳನ್ನು ಸೃಷ್ಟಿ ಮಾಡಿ ನೇಮಕಕ್ಕೆ ಅವಕಾಶ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಎಲ್ಲ ಹುದ್ದೆಗಳ ಭರ್ತಿಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
undefined
ಅರಣ್ಯ ಇಲಾಖೆಯಲ್ಲಿ 2018-19 ರ ಅವಧಿಯಲ್ಲಿ 15 ವೃತ್ತಗಳು, 39 ಪ್ರಾದೇಶಿಕ ವಿಭಾಗಗಳು, 30 ಸಾಮಾಜಿಕ ಅರಣ್ಯ ವಿಭಾಗಗಳು, ಐದು ಹುಲಿ ಸಂರಕ್ಷಿತ ಪ್ರದೇಶಗಳು, ಏಳು ವನ್ಯಜೀವಿ ವಿಭಾಗಗಳು ಹಾಗೂ ಒಂದು ವನ್ಯಜೀವಿ ಉಪ ವಿಭಾಗವಿದೆ. ಅಲ್ಲದೆ, 11 ಅರಣ್ಯ ಸಂಚಾರಿ ದಳ, ಆರು ಕಾರ್ಯಯೋಜನೆ ಘಟಕಗಳು, ಐದು ಸಂಶೋಧನಾ ಕೇಂದ್ರಗಳು ಹಾಗೂ ಒಂದು ಮಾನವ ಸಂಪನ್ಮೂಲ ಘಟಕ ಕಾರ್ಯನಿರ್ವ ಹಿಸುತ್ತಿದೆ.
ಈ ಎಲ್ಲ ಘಟಕಗಳಲ್ಲಿ 12,161 ವಿವಿಧ ಹುದ್ದೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಧೀನದಲ್ಲಿ 4494 ದಿನಗೂಲಿ ನೌಕರರು ಸೇವೆ ಸಲ್ಲಿಸುತ್ತಿದ್ದು, ಅರಣ್ಯ ಸಂಪತ್ತು ರಕ್ಷಣೆಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಅಲ್ಲದೆ, ಕಳೆದ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆ ಯಿಂದಾಗಿ ನಾನಾ ರೀತಿಯ ಸಮಸ್ಯೆ ಎದುರಾಗುತ್ತಿತ್ತು. ಸಿಬ್ಬಂದಿ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 2014 ರಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ದೀಪಕ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು.
ಈ ಸಮಿತಿಯು ಹೊಸ ಹುದ್ದೆಗಳ ಸೃಷ್ಟಿಗಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಅಂಗೀಕರಿಸಿರುವ ಸರ್ಕಾರ ಹೊಸ ಹುದ್ದೆಗಳ ಸೃಷ್ಟಿಗೆ ಅನುಮೋದನೆ ನೀಡಿದೆ.
ತರಬೇತಿ ಕೇಂದ್ರದ ಕೊರತೆ: ಅರಣ್ಯ ಇಲಾಖೆಯಲ್ಲಿ ಸೃಷ್ಟಿಯಾಗುವ 3085 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಇಷ್ಟೊಂದು ಸಿಬ್ಬಂದಿಯನ್ನು ಏಕಕಾಲಕ್ಕೆ ಭರ್ತಿ ಮಾಡಬೇಕಾದ ಅಗತ್ಯವಿದೆ. ಆದರೆ, ರಾಜ್ಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡುವ ಕೇಂದ್ರದ ಕೊರತೆಯಿದೆ. ಅಲ್ಲದೆ, ಪ್ರಸ್ತುತ ವಿವಿಧ ಹಂತಗಳ ಸುಮಾರು 450 ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಇವರ ತರಬೇತಿ ಪೂರ್ಣಗೊಂಡ ಬಳಿಕ ಮತ್ತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.