2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು,(ಜ.23): ನಾಳೆ ಅಂದ್ರೆ ಜನವರಿ 24ರಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆ ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಂದು (ಶನಿವಾರ) ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
2020ರ ಜನವರಿ 31ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನಾಳೆ ಅಂದರೆ 2021ರ ಜನವರಿ 24ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಲಾಗಿತ್ತು.
ಪರೀಕ್ಷೆಗೂ ಮುನ್ನಾದಿನ ಅಂದ್ರೆ ಶನಿವಾರವೇ ಭಾನುವಾರ ಎರಡು ಅಧಿವೇಶನಗಳಲ್ಲಿ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಲೀಕ್ ಆಗಿವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಎಫ್ಡಿಎ ಪರೀಕ್ಷೆ ನಡೆಯುವ ದಿನಾಂಕವನ್ನು ಮರುನಿಗದಿ ಮಾಡಿ ಪ್ರಕಟಿಸಲಾಗುವುದು ಎಂದು ಜಿ.ಸತ್ಯವತಿ ತಿಳಿಸಿದ್ದಾರೆ.