ಕರೋನಾ ವೈರಸ್‌: ಏರ್ಪೋರ್ಟಲ್ಲಿ 493 ಪ್ರಯಾಣಿಕರ ತಪಾಸಣೆ

By Kannadaprabha NewsFirst Published Jan 24, 2020, 8:17 AM IST
Highlights

ವಿವಿಧ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಬೆಂಗಳೂರಿ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ರೋಗ ಹರಡದಂತೆ ತೀವ್ರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. 

 ಬೆಂಗಳೂರು [ಜ.24]:  ಭಾರತಕ್ಕೂ ಕರೋನಾ ವೈರಸ್‌ ಹರಡುವ ಭೀತಿ ಆವರಿಸಿದೆ. ಹೀಗಾಗಿ ‘ಕರೋನಾ ವೈರಸ್‌’ ವರದಿಯಾಗಿರುವ ದೇಶಗಳಿಂದ ಆಗಮಿಸಿರುವ 493 ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದು, ಯಾರಲ್ಲೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲ.

ಜ.22ರಿಂದ 23ರವರೆಗೆ ಒಟ್ಟು 493 ಪ್ರಯಾಣಿಕರು ಚೀನಾದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ತಪಾಸಣೆ ನಡೆಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್‌ ಕುಮಾರ್‌ ಹೇಳಿದ್ದಾರೆ.

440 ಜನರಿಗೆ ಕೊರೋನಾ ವೈರಸ್‌ ಸೋಂಕು, ಮೃತರ ಸಂಖ್ಯೆ ಏರಿಕೆ!...

ಅಲ್ಲದೆ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಹಾಗೂ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ಅವರು ಗುರುವಾರ ಕರೋನಾ ವೈರಸ್‌ ಬಗ್ಗೆ ಎಚ್ಚರ ವಹಿಸುವ ಸಂಬಂಧ ಸಭೆ ನಡೆಸಿದ್ದಾರೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಚಕ್ಷಣಾ ದಳವನ್ನು ನಿಯೋಜಿಸುವ ಮೂಲಕ ಅಂತಹ ದೇಶಗಳಿಂದ ಆಗಮಿಸುವವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಜಾವೇದ್‌ ಅಖ್ತರ್‌ ಸೂಚನೆ ನೀಡಿದರು.

ಮುನ್ನೆಚ್ಚರಿಕೆ ಕ್ರಮ:  ಸಾಮಾನ್ಯವಾಗಿ ಶಂಕಿತ ರೋಗಿಗಳಿಗೆ ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮೂಗು ಸೋರುವಿಕೆ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ನ್ಯುಮೋನಿಯಾ ಮತ್ತು ಕೆಲ ಸಂದರ್ಭದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಶಂಕಿತರು ಹಾಗೂ ರೋಗಿಗಳ ಚಿಕಿತ್ಸೆಗಾಗಿ ಈಗಾಗಲೇ ರಾಜೀವ್‌ ಗಾಂಧಿ ಎದೆ ರೋಗ ಆಸ್ಪತ್ರೆಯಲ್ಲಿ 10 ಹಾಸಿಗೆ ಪ್ರತ್ಯೇಕ ವಾರ್ಡ್‌ ಸಿದ್ಧಪಡಿಸಲಾಗಿದೆ.

click me!