
ಬೆಳಗಾವಿ (ಡಿ.01): ಕೆಲವೊಬ್ಬರು ಜೀವನದಲ್ಲಿ ಕೇವಲ ಯಾವುದಾದರೂ ಒಂದು ಸರಕಾರಿ ಹುದ್ದೆ ಪಡೆಯಬೇಕು ಎಂದು ಹಲವು ವರ್ಷಗಳ ಕಾಲ ಕಷ್ಟಪಟ್ಟು ಓದುತ್ತಾರೆ. ಓದಿನ ನೆಪದಲ್ಲಿ ಬೇರೆಲ್ಲ ಜವಾಬ್ದಾರಿಗಳನ್ನು ಬಿಟ್ಟು, ಸರ್ಕಾರಿ ನೌಕರಿ ಸಿಗದಿದ್ದಲ್ಲಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಕಠಿಣ ಪರಿಶ್ರಮದಿಂದ ಓದಿ ಸರ್ಕಾರಿ ನೌಕರಿ ಪಡೆಯುತ್ತಾರೆ. ಆದರೆ, ಇದೀಗ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಳೇಗಾಂವ ಗ್ರಾಮದ 26 ವರ್ಷಗಳ ಧರೆಪ್ಪ ಸಂಗಮೇಶ ನಾಗಗೋಳ ಎಂಬ ಯುವಕ ಬರೋಬ್ಬರಿ 10 ಸರಕಾರಿ ನೌಕರಿ ಪಡೆಯುವ ಮೂಲಕ ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಮಾದರಿ ಆಗಿದ್ದಾನೆ. ಇದೀಗ ಪ್ರಥಮ ದರ್ಜೆ ಸಹಾಯಕನಾಗಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಧರಪ್ಪ ಅವರ ತಂದೆ ಸಂಗಮೇಶ ಕೂಲಿ ಕಾರ್ಮಿಕರು. ತಾಯಿ ಆಶಾ ಕಾರ್ಯಕರ್ತೆ, ಅರ್ಧ ಎಕರೆ ಕೃಷಿ ಭೂಮಿಯೇ ಇವರ ಇಡೀ ಕುಟುಂಬಕ್ಕೆ ಆಧಾರವಾಗಿದೆ. ಇಷ್ಟೆಲ್ಲಾ ಬಡತನವಿದ್ದರೂ ಬಿ.ಕಾಂ. ಪದವಿ ಪೂರ್ಣಗೊಳಿಸಿದ ಬಳಿಕ ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದ ಧರೆಪ್ಪ ಅವರಿಗೆ ತಂದೆಯ ಮಾತು ಸ್ಫೂರ್ತಿ ನೀಡಿತು. 'ನಮ್ಮ ಗ್ರಾಮದಲ್ಲಿ ಬಡವರ ಮಕ್ಕಳು ಸರಕಾರಿ ನೌಕರಿ ಪಡೆದಿಲ್ಲ, ನೀನು ನೌಕರಿ ಪಡೆದು ಮಾದರಿಯಾಗು. ನಾವಿಬ್ಬರೂ (ತಂದೆ-ತಾಯಿ) ಕಷ್ಟಪಟ್ಟು ನಿನ್ನ ಓದಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ' ಎಂಬ ತಂದೆಯ ಮಾತಿನಿಂದ ಪ್ರೇರಣೆ ಪಡೆದರು. ನಂತರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ಅಧ್ಯಯನ ನಡೆಸಿದ್ದರಿಂದ 10 ಸರಕಾರಿ ಹುದ್ದೆಗಳು ಅವರನ್ನು ಹುಡುಕಿ ಮನೆಬಾಗಿಲಿಗೆ ಬಂದವು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯಲು 2021ರಲ್ಲಿ ಧಾರವಾಡಕ್ಕೆ ಹೋಗಿದ್ದ ಧರೆಪ್ಪ, ಬಾಡಿಗೆ ಕೊಠಡಿ, ಊಟ, ಗ್ರಂಥಾಲಯ ಸೇರಿ ಇತರ ಖರ್ಚು ಸರಿದೂಗಿಸಲು ಸಾಧ್ಯವಾಗದೇ ಸ್ವಗ್ರಾಮಕ್ಕೆ ಮರಳಿ ಸ್ವಂತ ಓದು ಆರಂಭಿಸಿದರು. ದಿನಪತ್ರಿಕೆ, ಯೂಟ್ಯೂಬ್ ವಿಡಿಯೊ, ಆಕರ ಗ್ರಂಥಗಳು, ಸ್ವಂತ ನೋಟ್ಸ್ ಅಧ್ಯಯನಕ್ಕೆ ನೆರವಾದವು, ಸಾಧನೆಗೆ ಮೆಟ್ಟಿಲಾಯಿತು.
ಮಗನಿಗಾಗಿ ಮೇಕೆ ಮಾರಿ, ರೂಮು ನಿರ್ಮಿಸಿದ ಅಪ್ಪ:
ತಾವು ವಾಸಕ್ಕಿದ್ದ ಮನೆ ತೀವ್ರ ಚಿಕ್ಕದಾಗಿದ್ದರಿಂದ ಅಭ್ಯಾಸ ಮಾಡಲು ಕೋಣೆ ಇದ್ದ ಕಾರಣ ಮಗನ ಓದಿಗೆ ನೆರವಾಗಲು ತಂದೆ ಸಂಗಮೇಶ ಅವರು ಮನೆಯಲ್ಲಿದ್ದ ಮೇಕೆಗಳನ್ನು ಮಾರಿ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಟ್ಟಿದ್ದರು. ಬೆಳಗ್ಗೆ 5ರಿಂದ ಓದು ಆರಂಭಿಸುತ್ತಿದ್ದ ಧರೆಪ್ಪ ನಿತ್ಯ 14 ತಾಸು ಓದಿಗೆ, 1 ತಾಸು ವ್ಯಾಯಾಮ ಮತ್ತು ಯೋಗಾಭ್ಯಾಸಕ್ಕೆ ಮೀಸಲಿಡುತ್ತಿದ್ದರು.
ಹಾಲಿ ಧರೆಪ್ಪ ಅವರು ಪ್ರಥಮ ದರ್ಜೆ ಸಹಾಯಕ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಸದ್ಯ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ತಾ.ಪಂ.ನಲ್ಲಿ ಜೂನ್ ನಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಎಎಸ್ ಮುಖ್ಯ ಪರೀಕ್ಷೆ ಫಲಿತಾಂಶಕ್ಕೆ ಕಾಯುತ್ತಿದ್ದು, ಉನ್ನತ ಹುದ್ದೆಗೆ ಹೋಗುವ ಹಾದಿಯಲ್ಲಿದ್ದಾರೆ.
ಐಎಎಸ್ ಅಧಿಕಾರಿಯಾಗೋ ಕನಸು:
ತಂದೆಯ ಮಾತು, ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಬೇಕು ಎಂಬ ದೃಢ ನಿರ್ಧಾರವೇ ಈ ಯಶಸ್ಸಿಗೆ ಕಾರಣ. ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಾರೂ ಬೇಕಾದರೂ ಸರಕಾರಿ ನೌಕರಿ ಪಡೆಯಬಹುದು. ಮುಂದೆ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿ ಕರ್ನಾಟಕದಲ್ಲೇ ಸೇವೆ ಮಾಡಬೇಕು ಎಂಬ ಆಸೆ ಇದೆ.
-ಧರೆಪ್ಪ ನಾಗಗೋಳ, ಹತ್ತು ಸರಕಾರಿ ನೌಕರಿ ಪಡೆದ ಸಾಧಕ