ಬಿಬಿಎಂಪಿ ನಂಬಿಕೊಂಡರೆ ನಗರದಲ್ಲಿ ಭೀಕರ ಸ್ಥಿತಿ ಸೃಷ್ಟಿ: ಹೈಕೋರ್ಟ್ ಕಿಡಿ| ಕೊರೋನಾ ನಿರ್ವಹಣೆಯಲ್ಲಿ ಪಾಲಿಕೆ ವಿಫಲ: ವಿಭಾಗೀಯ ಪೀಠ ಕೆಂಡಾಮಂಡಲ
ಬೆಂಗಳೂರು(ಜು.14): ನಗರದಲ್ಲಿ ಕೊರೋನಾ ನಿರ್ವಹಣೆ ಹಾಗೂ ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಅನುಷ್ಠಾನ ಮತ್ತು ಅಲ್ಲಿನ ಬಡವರಿಗೆ ಆಹಾರ ಕಿಟ್ ತಲುಪಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ಕೆಂಡಾಮಂಡಲವಾದ ಹೈಕೋರ್ಟ್, ಈ ಕುರಿತು ವಿವರಣೆ ನೀಡಲು ಮಂಗಳವಾರ ಮಧ್ಯಾಹ್ನ 2.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರಿಗೆ ತಾಕೀತು ಮಾಡಿದೆ.
ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ, ನಗರದ ಕಂಟೈನ್ಮೆಂಟ್ ವಲಯಗಳಲ್ಲಿನ ಬಡ ಹಾಗೂ ನಿರ್ಗತಿಕರನ್ನು ಗುರುತಿಸುವ ಕನಿಷ್ಠ ಕೆಲಸವನ್ನೂ ಬಿಬಿಎಂಪಿ ಮಾಡಿಲ್ಲ ಎಂದು ಚಾಟಿ ಬೀಸಿತು.
undefined
ಬೆಂಗ್ಳೂರಿಂದ ಸೋಮವಾರ ಲಕ್ಷಾಂತರ ಜನ ಗುಳೆ!
ನಗರದಲ್ಲಿ ಕೊರೋನಾ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಎಲ್ಲಾ ಹಂತಗಳಲ್ಲಿ ವಿಫಲವಾಗಿದೆ. ಯಾವ ಆದೇಶ ನೀಡಿದರೂ ಪಾಲಿಕೆಯ ಕಾರ್ಯವೈಖರಿ ಬದಲಾಗುವ ಲಕ್ಷಣಗಳು ಇಲ್ಲ. ಬಿಬಿಎಂಪಿ ಇಂದು ಸಲ್ಲಿಸಿರುವ ಲಿಖಿತ ವಾದವೊಂದೇ ಸಾಕು ಈ ಸಂಸ್ಥೆಯನ್ನು ಅಮಾನತಿಗೆ ಶಿಫಾರಸ್ಸು ಮಾಡಲು. ಪಾಲಿಕೆಯ ವೈಫಲ್ಯ ಅನೇಕ ಪ್ರಕರಣಗಳಲ್ಲಿ ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿ, ರಾಜ್ಯ ಸರ್ಕಾರ ನಗರದಲ್ಲಿನ ಕಂಟೈನ್ಮೆಂಟ್ ವಲಯ ನಿರ್ವಹಣಾ ಜವಾಬ್ದಾರಿಯನ್ನು ತಾನೇ ನಿರ್ವಹಣೆ ಮಾಡಬೇಕು. ಈಗಾಗಲೇ ನಗರದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಬಿಬಿಎಂಪಿಯನ್ನು ನಂಬಿಕೊಂಡು ಕೂತರೇ ಇನ್ನೂ ಭೀಕರ ಸ್ಥಿತಿಗೆ ನಗರ ತಲುಪಲಿದೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿತು.
ಪರೀಕ್ಷೆ ಮಾಡಿಸದೆ ಗ್ರಾಮಕ್ಕೆ ಬಂದ್ರೆ 25000 ರೂ ದಂಡ!
ಸರ್ಕಾರವೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ: ಕೋರ್ಟ್
ರಾಜ್ಯ ಸರ್ಕಾರ ತನ್ನ ಆಡಳಿತ ಯಂತ್ರ ಉಪಯೋಗಿಸಿ ನಗರದ ಕಂಟೈನ್ಮೆಂಟ್ ವಲಯದ ಜನರಿಗೆ ಆಹಾರ ಸಾಮಗ್ರಿ ನೀಡಬೇಕು. ಎಸ್‌ಓಪಿ ಅನುಷ್ಠಾನ ಮಾಡಬೇಕೆಂದು ನ್ಯಾಯಪೀಠ ನೀಡಿದ್ದ ಸೂಚನೆಗೆ ಸರ್ಕಾರ ಈವರೆಗೂ ಯಾವುದೇ ಉತ್ತರ ನೀಡಿಲ್ಲ. ಸರ್ಕಾರ ಸಹ ಕೋರ್ಟ್ ಆದೇಶಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಆದ್ದರಿಂದ ಹಿರಿಯ ಅಧಿಕಾರಿಯನ್ನು ಕೋರ್ಟ್‌ಗೆ ಕರೆಯಿಸಿಕೊಂಡು ಅವರಿಂದ ವಿವರಣೆ ಪಡೆಯುವ ಮಾರ್ಗವೊಂದೇ ನ್ಯಾಯಾಲಯದ ಮುಂದಿದೆ. ಹೀಗಾಗಿ, ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರು ಮಂಗಳವಾರ ಮಧ್ಯಾಹ್ನ 2.30ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿತು.