ಪೊಲೀಸ್‌ ನೇಮಕಾತಿ, ಅಭ್ಯರ್ಥಿಗಳಿಗೆ ಸರ್ಕಾರದಿಂದ ಗುಡ್‌ ನ್ಯೂಸ್‌!

By Kannadaprabha NewsFirst Published Feb 2, 2020, 11:15 AM IST
Highlights

ಪೊಲೀಸ್‌ ನೇಮಕಾತಿ ವಯಸ್ಸು ಹೆಚ್ಚಳ ಮನವಿಗೆ ಸಿಎಂ ಸ್ಪಂದನೆ| ಶೀಘ್ರದಲ್ಲೇ 16 ಸಾವಿರ ಪೊಲೀಸ್‌ ಸಿಬ್ಬಂದಿ ನೇಮಕ ನಿರೀಕ್ಷೆ: ರವಿಕುಮಾರ್‌

ಬೆಂಗಳೂರು[ಫೆ.02]: ಪೊಲೀಸ್‌ ಸಿಬ್ಬಂದಿ ನೇಮಕಾತಿಯ ವಯೋಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸದ್ಯದಲ್ಲೇ ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 16 ಸಾವಿರ ಪೊಲೀಸ್‌ ಸಿಬ್ಬಂದಿ ನೇಮಕಕ್ಕೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ ಎಂದರು.

ಇತರ ರಾಜ್ಯಗಳಲ್ಲಿ ಪೊಲೀಸ್‌ ಇಲಾಖೆ ಸೇರ್ಪಡೆಗೆ ಬೇರೆ-ಬೇರೆ ವಯೋಮಿತಿ ನಿಗದಿಪಡಿಸಲಾಗಿದೆ. ಕರ್ನಾಟಕದಲ್ಲಿ ಸಾಮಾನ್ಯ ವರ್ಗಕ್ಕೆ 25 ವರ್ಷ, ಹಿಂದುಳಿದ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗಕ್ಕೆ 27ರ ವಯೋಮಿತಿ ಇದೆ. ಪ್ರಸ್ತುತ ಇರುವ ವಯೋಮಿತಿಯನ್ನು ಹೆಚ್ಚಳ ಮಾಡುವಂತೆ ಪಕ್ಷದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ನಿಯೋಗದ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಸಿದ್ದುಗೆ ಟಿಪ್ಪು ಕುರಿತ ಪುಸ್ತಕ ರವಾನೆ

ಟಿಪ್ಪು ಸುಲ್ತಾನ್‌ ಹಿಂದೂ ವಿರೋಧಿಯಷ್ಟೇ ಅಲ್ಲದೆ, ಕನ್ನಡ ವಿರೋಧಿಯೂ ಆಗಿದ್ದ. ಹಿಂದೂ ದೇವರ ವಿಗ್ರಹಗಳನ್ನು ಧ್ವಂಸಗೊಳಿಸುವ ದೊಡ್ಡ ಆಂದೋಲನ ನಡೆಸಿದ್ದ. ಕೊಡಗಿನಲ್ಲಿ ಕೊಡವ ಸಮುದಾಯದವರನ್ನು ಬಲಿ ಪಡೆದಿದ್ದಾನೆ ಎಂದು ಇದೇ ವೇಳೆ ರವಿಕುಮಾರ್‌ ಆರೋಪಿಸಿದರು.

ಕಾಂಗ್ರೆಸ್‌ ಪಕ್ಷ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನೂ ಅವಮಾನಿಸಿತ್ತು. ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರನ್ನೂ ಗೌರವಿಸಿಲ್ಲ. ವೀರ ಸಾವರ್ಕರ್‌ ಅವರ ತ್ಯಾಗ, ಹೋರಾಟ ಕುರಿತ ‘ಆತ್ಮಾಹುತಿ’ ಪುಸ್ತಕ ಹಾಗೂ ಟಿಪ್ಪು ನೈಜ ಇತಿಹಾಸ ಕುರಿತ ಪುಸ್ತಕಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಚೆ ಮೂಲಕ ಕಳುಹಿಸಿದ್ದೇವೆ. ಆ ಪುಸ್ತಕಗಳನ್ನು ಓದಿ ಸರಿಯಾದ ಇತಿಹಾಸ ತಿಳಿದುಕೊಳ್ಳಲಿ ಎಂದು ಕುಟುಕಿದರು.

click me!