ಶಿಕ್ಷಕರ ನೇಮಕಾತಿ ಅಕ್ರಮ ತಡೆಗೆ ಕ್ರಮ: ಸಚಿವ ನಾಗೇಶ್‌

By Kannadaprabha NewsFirst Published Dec 27, 2022, 10:56 AM IST
Highlights

ಪರೀಕ್ಷಾ ತಂತ್ರಾಂಶ ಸಂಸ್ಥೆಗಳ ಬದಲಾಗಿ ಎನ್‌ಐಸಿ/ಎಸ್‌ಡಿಸಿ ಸರ್ಕಾರಿ ಸಂಸ್ಥೆಗಳ ಸಹಕಾರ ಮತ್ತು ಮಾರ್ಗದರ್ಶನಲ್ಲಿ ಅರ್ಜಿ, ಪರೀಕ್ಷೆ, ಮೌಲ್ಯಮಾಪನ, ಆಯ್ಕೆ ಪಟ್ಟಿ ತಯಾರಿಸಲು ಕ್ರಮ ವಹಿಸಲಾಗಿದೆ: ಸಚಿವ ಬಿ.ಸಿ. ನಾಗೇಶ್‌ 

ವಿಧಾನ ಪರಿಷತ್‌(ಡಿ.27): ರಾಜ್ಯದಲ್ಲಿ 2012-13 ಮತ್ತು 2014-15ನೇ ಸಾಲಿನಲ್ಲಿ ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ರೀತಿ ನಡೆಯದಂತೆ ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ಬಿಜೆಪಿಯ ತುಳಸಿ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪರೀಕ್ಷಾ ತಂತ್ರಾಂಶ ಸಂಸ್ಥೆಗಳ ಬದಲಾಗಿ ಎನ್‌ಐಸಿ/ಎಸ್‌ಡಿಸಿ ಸರ್ಕಾರಿ ಸಂಸ್ಥೆಗಳ ಸಹಕಾರ ಮತ್ತು ಮಾರ್ಗದರ್ಶನಲ್ಲಿ ಅರ್ಜಿ, ಪರೀಕ್ಷೆ, ಮೌಲ್ಯಮಾಪನ, ಆಯ್ಕೆ ಪಟ್ಟಿ ತಯಾರಿಸಲು ಕ್ರಮ ವಹಿಸಲಾಗಿದೆ. ವಿಷಯ ಪರಿಣಿತರಿಂದ ಒಂದು ವಿಷಯಕ್ಕೆ ನಾಲ್ಕು ವಿಭಿನ್ನ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಅದರಲ್ಲಿ ಎರಡನ್ನು ಮುದ್ರಿಸಿ ಒಂದು ಪತ್ರಿಕೆಯನ್ನು ಬ್ಯಾಂಕ್‌ನಲ್ಲಿ, ಮತ್ತೊಂದು ಪ್ರಶ್ನೆ ಪತ್ರಿಕೆಯನ್ನು ಖಜಾನೆಯಲ್ಲಿ ಇರಿಸಲಾಗುತ್ತದೆ. ಪರೀಕ್ಷೆಯ ದಿನದಂದು ಯಾವ ಪತ್ರಿಕೆಯನ್ನು ವಿತರಿಸಬೇಕೆಂದು ನಿರ್ಧರಿಸಲಾಗುತ್ತದೆ. ಕ್ಯೂ ಆರ್‌ ಕೋಡ್‌ ಹೊಂದಿರುವ ಉತ್ತರ ಪತ್ರಿಕೆಗಳನ್ನು ಎರಡು ಬಾರಿ ಡಿಜಿಟಲ್‌ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ ಎಂದರು.

Hijab Case: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಬ್ಯಾನ್‌ ಮುಂದುವರಿಯುತ್ತೆ!

ಜಿಲ್ಲಾ ಹಂತದಲ್ಲಿ ಪರೀಕ್ಷಾ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಕ್ಯೂ ಆರ್‌ ಕೋಡ್‌ ಹೊಂದಿರುವ ಉತ್ತರ ಪತ್ರಿಕೆಗಳನ್ನು ಎರಡು ಬಾರಿ ಡಿಜಿಟಲ್‌ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಹಂತದಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಸ್ವೀಕರಿಸಿ, ಅರ್ಹ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ವಿವರಿಸಿದರು.

click me!