5000 ಪೇದೆ, 450 ಎಸ್‌ಐ ನೇಮಕ ಶೀಘ್ರ: ಸಚಿವ ಆರಗ ಜ್ಞಾನೇಂದ್ರ

By Kannadaprabha NewsFirst Published Aug 5, 2022, 1:30 AM IST
Highlights

ಪರೀಕ್ಷೆ ಹೇಗಿರಬೇಕು ಅಂತ ತೋರಿಸಿಕೊಡ್ತೀವಿ: ಗೃಹ ಸಚಿವ ಆರಗ

ಬೆಂಗಳೂರು(ಆ.05):  ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟುಬಲಪಡಿಸಲು ಶೀಘ್ರದಲ್ಲಿ ಐದು ಸಾವಿರ ಪೊಲೀಸ್‌ ಕಾನ್‌ಸ್ಟೇಬಲ್‌ ಹಾಗೂ 450 ಪೊಲೀಸ್‌ ಸಬ್‌ ಇನ್‌ಸ್ಟೆಕ್ಟರ್‌ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೇಮಕಾತಿ ಸಂಬಂಧ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಪರೀಕ್ಷೆಗಳನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಡುತ್ತೇವೆ ಎಂದರು. ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟ545 ಹುದ್ದೆಗಳಿಗೆ ತನಿಖೆ ಮುಗಿದ ನಂತರ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು. ವಯೋಮಿತಿ ಸಡಿಲಿಕೆ ನೀಡಲಾಗುವುದು. ಹಾಗಾಗಿ ಯಾರೂ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದರು. ಅಕ್ರಮದಲ್ಲಿ ಭಾಗಿಯಾದವರಿಗೆ ಮರುಪರೀಕ್ಷೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಎಫ್‌ಎಸ್‌ಎಲ್‌ ವಿವಿ:

ಅಪರಾಧ ಪ್ರಕರಣಗಳ ಸಂಬಂಧ ಎಫ್‌ಎಸ್‌ಎಲ್‌ (ವಿಧಿವಿಜ್ಞಾನ ಪ್ರಯೋಗಾಲಯ) ವಿವಿ ಸ್ಥಾಪಿಸುವ ಉದ್ದೇಶವಿದೆ. ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದ್ದು, ವಿವಿ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು.

ಜು.25ಕ್ಕೆ ‘ನಮ್ಮ ಕ್ಲಿನಿಕ್‌’ಗೆ BBMP ನೇರ ನೇಮಕಾತಿ

2 ತಿಂಗಳಲ್ಲಿ ಜಾಮರ್‌ ಅಳವಡಿಕೆ:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್‌ ಬಳಕೆ ತಡೆಯಲು ಎರಡು ತಿಂಗಳಲ್ಲಿ ಮೊಬೈಲ್‌ ಜಾಮರ್‌ ಅಳವಡಿಸುವ ಪ್ರಕ್ರಿಯೆ ಪೂರ್ಣವಾಗಲಿದೆ. ಅಕ್ರಮ ತಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಜೈಲಿನ 15 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. 30 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಹೊಸ ಸಿಬ್ಬಂದಿಗಳನ್ನು ಜೈಲಿಗೆ ವರ್ಗಾವಣೆ ಮಾಡುವ ಮೂಲಕ ಜೈಲಿನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಮಳೆ ಅವಾಂತರ:

ರಾಜ್ಯದಲ್ಲಿ ಮಳೆಯಿಂದ ಆಗಿರುವ ತೊಂದರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ತೊಂದರೆಗೆ ಒಳಗಾದ ಕಡೆ ದಿನದ 24 ಗಂಟೆಗಳ ಕಾಲ ಸಿದ್ಧವಿರುವಂತೆ ಅಗ್ನಿಶಾಮಕ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿ ಯಾವುದೇ ತೊಂದರೆ ಕಂಡು ಬಂದರೂ ತಕ್ಷಣ ನಿಭಾಯಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಬೃಹತ್‌ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಜನರ ಪ್ರಾಣ ರಕ್ಷಣೆಗೆ ಫಿನ್‌ಲೆಂಡ್‌ನಿಂದ 35 ಕೋಟಿ ರು. ವೆಚ್ಚದಲ್ಲಿ ಲ್ಯಾಡರ್‌ ಮಿಷನ್‌ ತರಿಸಲಾಗುತ್ತಿದ್ದು, ಶೀಘ್ರದಲ್ಲಿ ಬೆಂಗಳೂರಿಗೆ ಬರಲಿದೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
 

click me!