ಟೀಂ ಇಂಡಿಯಾಗೆ ಮರಳಲು ಯುವಿ ಸರ್ಕಸ್; 4ನೇ ಸ್ಥಾನಕ್ಕೆ ಕಣ್ಣಿಟ್ಟ ಎಡಗೈ ಕ್ರಿಕೆಟಿಗ

By Suvarna Web DeskFirst Published Nov 10, 2017, 12:53 PM IST
Highlights

ಯುವರಾಜ್ ಸಿಂಗ್ ಕಡೇ ಬಾರಿ ಭಾರತದ ಜೆರ್ಸಿ ತೊಟ್ಟಿದ್ದು ಜೂನ್-ಜುಲೈನಲ್ಲಿ ನಡೆದಿದ್ದ ವೆಸ್ಟ್ ಇಂಡಿಸ್ ವಿರುದ್ಧದ ಸರಣಿಯಲ್ಲಿ. ಆ್ಯಂಟಿಗುವಾದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಕೊನೆಯ ಬಾರಿ ಯುವಿ 39 ರನ್ ಬಾರಿಸಿದ್ದರು.

ಬೆಂಗಳೂರು(ನ.10): ಭಾರತ ಏಕದಿನ ತಂಡದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಇನ್ನೂ ಸರಿಯಾದ ಆಯ್ಕೆ ಸಿಗದ ಕಾರಣ, ಆ ಸ್ಥಾನದ ಮೇಲೆ ಯುವರಾಜ್ ಸಿಂಗ್ ಮತ್ತೊಮ್ಮೆ ಕಣ್ಣಿಟ್ಟಿದ್ದಾರೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ಯುವರಾಜ್, ಫಿಟ್ನೆಸ್'ನತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಫಿಟ್ನೆಸ್ ಟೆಸ್ಟ್‌'ನಲ್ಲಿ ಉರ್ತ್ತೀಣರಾದರೆ ಶ್ರೀಲಂಕಾ ವಿರುದ್ಧ ಡಿಸೆಂಬರ್ 10ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಆಯ್ಕೆಗೆ ಪರಿಗಣಿಸುವುದಾಗಿ ಬಿಸಿಸಿಐ ಆಯ್ಕೆ ಸಮಿತಿ ಯುವರಾಜ್‌'ಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಒಂದು ತಿಂಗಳ ಅವಧಿಗೆ ಯುವರಾಜ್, ಎನ್'ಸಿಎನಲ್ಲಿ ಅಭ್ಯಾಸ ನಡೆಸಲಿದ್ದು, ನವೆಂಬರ್ 28ಕ್ಕೆ ಅವರ ಅಭ್ಯಾಸ ಪೂರ್ಣಗೊಳ್ಳಲಿದೆ.

ತಿಂಗಳಂತ್ಯದಲ್ಲಿ ‘ಯೋ-ಯೋ’ ಟೆಸ್ಟ್: ಶ್ರೀಲಂಕಾ ವಿರುದ್ಧ ಒನ್‌'ಡೇ ಸರಣಿಗೆ ತಂಡಕ್ಕೆ ಮರಳಲು ಎದುರು ನೋಡುತ್ತಿರುವ ಯುವಿ ಈ ತಿಂಗಳ ಕೊನೆಯಲ್ಲಿ ‘ಯೋ-ಯೋ’ ಫಿಟ್ನೆಸ್ ಟೆಸ್ಟ್‌'ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಈ ಪರೀಕ್ಷೆಯಲ್ಲಿ ಉರ್ತ್ತೀಣರಾಗುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಕಳೆದ ಬಾರಿ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ತಂಡದಿಂದ ಕೈಬಿಡಲಾಯಿತು ಎನ್ನಲಾಗಿತ್ತು.

2015ರ ವಿಶ್ವಕಪ್‌'ನಿಂದ ಈ ವರೆಗೂ ಭಾರತ, 4ನೇ ಕ್ರಮಾಂಕದಲ್ಲಿ 11 ಬ್ಯಾಟ್ಸ್‌'ಮನ್‌'ಗಳನ್ನು ಪರೀಕ್ಷಿಸಿದ್ದು ಯಾರೂ ಸಹ ನಿರೀಕ್ಷಿತ ಯಶಸ್ಸು ಕಾಣದಿರುವುದು ತಂಡದ ತಲೆನೋವು ಹೆಚ್ಚಿಸಿದೆ. ಅಚ್ಚರಿಯ ಸಂಗತಿ ಎಂದರೆ, ವಿಶ್ವಕಪ್ ಬಳಿಕ 4ನೇ ಕ್ರಮಾಂಕದಲ್ಲಿ ಯುವರಾಜ್ ಎಲ್ಲರಿಗಿಂತ ಹೆಚ್ಚು ರನ್(358) ಕಲೆಹಾಕಿದ್ದಾರೆ. ಆದರೆ ಈ ಪೈಕಿ 150 ರನ್ ಇಂಗ್ಲೆಂಡ್ ವಿರುದ್ಧ ಒಂದೇ ಇನ್ನಿಂಗ್ಸ್‌'ನಲ್ಲಿ ದಾಖಲಾಗಿತ್ತು.

ಯುವರಾಜ್ ಸಿಂಗ್ ಕಡೇ ಬಾರಿ ಭಾರತದ ಜೆರ್ಸಿ ತೊಟ್ಟಿದ್ದು ಜೂನ್-ಜುಲೈನಲ್ಲಿ ನಡೆದಿದ್ದ ವೆಸ್ಟ್ ಇಂಡಿಸ್ ವಿರುದ್ಧದ ಸರಣಿಯಲ್ಲಿ. ಆ್ಯಂಟಿಗುವಾದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಕೊನೆಯ ಬಾರಿ ಯುವಿ 39 ರನ್ ಬಾರಿಸಿದ್ದರು.

click me!