ಯೂಸೂಫ್'ಗೆ ಮತ್ತೊಂದು ಸಂಕಷ್ಟ; 4 ವರ್ಷ ಬ್ಯಾನ್ ಆಗ್ತಾರಾ ಪಠಾಣ್..?

By Suvarna Web DeskFirst Published Jan 11, 2018, 9:49 AM IST
Highlights

2015ರ ವಾಡಾದ ಡೋಪಿಂಗ್ ಕೋಡ್ ಪ್ರಕಾರ, ಮೊದಲ ಬಾರಿ ಆರೋಪ ಸಾಬೀತಾದರೆ ಕ್ರೀಡಾಪಟು ಯಾವುದೇ ಮುಲಾಜಿಲ್ಲದೆ 4 ವರ್ಷ ಅಮಾನತುಗೊಳ್ಳಲಿದ್ದಾರೆ.

ನವದೆಹಲಿ(ಜ.11): ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ಆಲ್ರೌಂಡರ್ ಯೂಸೂಫ್ ಪಠಾಣ್‌'ಗೆ ಸದ್ಯಕ್ಕೆ ಮೋಕ್ಷಾ ಪ್ರಾಪ್ತಿಯಾಗುವ ಲಕ್ಷಣ ತೋರುತ್ತಿಲ್ಲ. ಬಿಸಿಸಿಐ ಅವರಿಗೆ ವಿಧಿಸಿರುವ ಶಿಕ್ಷೆ ಜ.14ಕ್ಕೆ ಪೂರ್ಣಗೊಳ್ಳಬಹುದು, ಆದರೆ ಶಿಷ್ಟಾಚಾರ ಪ್ರಕಾರ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂದು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಬಾಂಬ್ ಸಿಡಿಸಿದೆ.

ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಯೂಸೂಫ್ ಅವರನ್ನು ಬಿಸಿಸಿಐ 5 ತಿಂಗಳು ಅಮಾನತುಗೊಳಿಸಿದ್ದು, 2017ರ ಆ.15ರಿಂದಲೇ ಪೂರ್ವಾನ್ವಯವಾಗುವಂತೆ ಶಿಕ್ಷೆ ಜಾರಿಯಾಗಲಿದೆ ಎಂದಿತ್ತು. ಇದರ ಅನ್ವಯ ಜ.14ಕ್ಕೆ ಶಿಕ್ಷೆ ಪೂರ್ಣಗೊಳ್ಳಲಿದೆ. ಯೂಸೂಫ್‌'ಗೆ ವಿಧಿಸಿರುವ ಶಿಕ್ಷೆ ಅವಧಿ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ವಾಡಾ ಅಧಿಕಾರಿಗಳು, ‘ಯೂಸುಫ್ ಪ್ರಕರಣ ಇನ್ನು ಇತ್ಯರ್ಥವಾಗಿಲ್ಲ. ಆದಕಾರಣ ಈ ಕುರಿತು ಏನನ್ನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

2015ರ ವಾಡಾದ ಡೋಪಿಂಗ್ ಕೋಡ್ ಪ್ರಕಾರ, ಮೊದಲ ಬಾರಿ ಆರೋಪ ಸಾಬೀತಾದರೆ ಕ್ರೀಡಾಪಟು ಯಾವುದೇ ಮುಲಾಜಿಲ್ಲದೆ 4 ವರ್ಷ ಅಮಾನತುಗೊಳ್ಳಲಿದ್ದಾರೆ. ‘ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಯೂಸುಫ್ ಅನುತ್ತೀರ್ಣರಾಗಿದ್ದಾರೆ. ಅವರ ಮೂತ್ರದ ಮಾದರಿಯಲ್ಲಿ ನಿಷೇಧಿತ ‘ಟೆರ್ಬುಟಲೈನ್’ ಎಂಬ ಅಂಶ ಪತ್ತೆಯಾಗಿದೆ’ ಎಂದು ಬಿಸಿಸಿಐ ಹೇಳಿತ್ತು. ಉದ್ದೇಶಪೂರ್ವಕವಾಗಿ ಇದನ್ನು ಸೇವಿಸಿರಲಿಲ್ಲ ಎಂದು ಯೂಸುಫ್ ಹೇಳಿದ್ದರು.

click me!