ಕುಸ್ತಿಪಟುಗಳ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಪಿ.ಟಿ. ಉಷಾ
ಹೋರಾಟಕ್ಕೆ ಬೆಂಬಲ, ಶೀಘ್ರ ನ್ಯಾಯ ಒದಗಿಸುವ ಭರವಸೆ
ಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ ಎಂದಿದ್ದ ಉಷಾ
ನವದೆಹಲಿ(ಮೇ.04): ಕುಸ್ತಿಪಟುಗಳ ಬಗ್ಗೆ ತಮ್ಮ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಬುಧವಾರ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾಗಿದ್ದು, ಭಾರತೀಯ ಕುಸ್ತಿ ಸಂಸ್ಥೆ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕುಸ್ತಿಪಟು ಭಜರಂಗ್ ಪೂನಿಯಾ, ‘ನಮಗೆ ನ್ಯಾಯ ಒದಗಿಸುವುದಾಗಿ ಉಷಾ ಭರವಸೆ ನೀಡಿದ್ದಾರೆ. ಬ್ರಿಜ್ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂಬುದನ್ನೂ ಅವರಿಗೆ ಸ್ಪಷ್ಟಪಡಿಸಿದ್ದೇವೆ’ ಎಂದಿದ್ದಾರೆ. ಇತ್ತೀಚೆಗೆ ಉಷಾ ಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ’ ಎಂದಿದ್ದರು.
ಕುಸ್ತಿಪಟುಗಳ ಪ್ರತಿಭಟನೆಯಿಂದಾಗಿ ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಕಿಡಿಕಾಡಿದ್ದಾರೆ. ‘ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳಿಗೆ ನಮ್ಮ ಬಳಿ ಬರಬೇಕಿತ್ತು. ಐಒಎನಲ್ಲಿ ಇದಕ್ಕಾಗಿಯೇ ಸಮಿತಿ ಇದೆ. ಸ್ವಲ್ಪವಾದರೂ ಶಿಸ್ತು ಇರಬೇಕು. ನಮ್ಮ ಬಳಿಗೆ ಬರುವುದನ್ನು ಬಿಟ್ಟು ರಸ್ತೆಗಿಳಿದಿದ್ದಾರೆ. ಇದು ಕ್ರೀಡೆಗೆ ಮಾರಕ. ಇಂತಹ ಪ್ರತಿಭಟನೆಗಳಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ’ ಎಂದು ಉಷಾ ಸಿಟ್ಟು ಹೊರಹಾಕಿದ್ದರು.
ಕುಸ್ತಿಪಟುಗಳಿಗೆ ಆಘಾತ
ಉಷಾ ಅವರ ಹೇಳಿಕೆಗೆ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಫೋಗಾಟ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಉಷಾ ಅವರಿಂದ ಇಂತಹ ಕಠಿಣ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಅವರು ನಮಗೆ ನೆರವು ನೀಡುತ್ತಾರೆ ಎಂದುಕೊಂಡಿದ್ದೆವು’ ಎಂದು ಭಜರಂಗ್ ಹೇಳಿದ್ದರು.
IPL 2023 ಪಂಜಾಬ್ ಕೈಹಿಡಿದ ಲಿವಿಂಗ್‌ಸ್ಟೋನ್, ಜಿತೇಶ್; ಮುಂಬೈಗೆ 215 ರನ್ ಟಾರ್ಗೆಟ್!
ವಿಚಾರಣೆ: ಇನ್ನು, ಕುಸ್ತಿಪಟುಗಳು ಮುಚ್ಚಿದ ಲಕೋಟೆಯಲ್ಲಿ ಅಫಿಡವಿತ್ ಸಲ್ಲಿಸಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಚ್‌ಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಗುರುವಾರ ಸುಪ್ರೀಂ ಕೋರ್ಚ್ನಲ್ಲಿ ವಿಚಾರಣೆ ನಡೆಯಲಿದೆ. ಇದೇ ವೇಳೆ ಕುಸ್ತಿ ಫೆಡರೇಶನ್ ಚಟುವಟಿಕೆ ಬಗ್ಗೆ ವಿಶ್ವ ಕುಸ್ತಿ ಸಂಸ್ಥೆ ಪ್ರಶ್ನೆಯು ಡಬ್ಲ್ಯುಎಫ್ಐಗೆ ನೋಟಿಸ್ ನೀಡಿದ್ದು, ಮೇ 7ರ ಚುನಾವಣೆ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದೆ.
ಕ್ರೀಡಾ ತಾರೆಗಳ ಬೆಂಬಲ
ಕುಸ್ತಿಪಟುಗಳ ಪ್ರತಿಭಟನೆಗೆ ವಿವಿಧ ಕ್ರೀಡೆಗಳ ತಾರೆಯರು ಬೆಂಬಲ ಸೂಚಿಸಿದ್ದಾರೆ. ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ, ಮಾಜಿ ಕ್ರಿಕೆಟಿಗರಾದ ಹರ್ಭಜನ್, ಸೆಹ್ವಾಗ್, ಇರ್ಫಾನ್, ಮದನ್ ಲಾಲ್, ಟೆನಿಸ್ ತಾರೆ ಸಾನಿಯ ಮಿರ್ಜಾ, ಬಾಕ್ಸರ್ ನಿಖಾತ್ ಜರೀನ್, ಹಾಕಿ ಪಟು ರಾಣಿ ರಾಂಪಾಲ್ ಸೇರಿದಂತೆ ಹಲವರು ಕುಸ್ತಿಪಟುಗಳಿಗೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದ್ದಾರೆ.