ಲೈಂಗಿಕ ಕಿರುಕುಳ ಆರೋಒ ಎದರಿಸುತ್ತಿರುವ ಬ್ರಿಜ್‌ಭೂಷಣ್ ಶರಣ್ ಸಿಂಗ್
ಸಾಕ್ಷ್ಯಾಧಾರ ಲಭ್ಯವಾಗಿಲ್ಲ, 15 ದಿನದಲ್ಲಿ ಕೋರ್ಟ್‌ಗೆ ಡೆಲ್ಲಿ ಪೊಲೀಸ್ ಅಂತಿಮ ವರದಿ
ಬ್ರಿಜ್‌ಭೂಷಣ್‌ಗೆ ಕ್ಲೀನ್‌ಚಿಟ್ ನೀಡುವ ಸಾಧ್ಯತೆ
ನವದೆಹಲಿ(ಜೂ.01): ದೇಶದ ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಸೇರಿದಂತೆ ಕೆಲ ಗಂಭೀರ ಆರೋಪಗಳಿಗೆ ತುತ್ತಾಗಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ಗೆ ಶೀಘ್ರವೇ ದೆಹಲಿ ಪೊಲೀಸರು ಕ್ಲೀನ್ ಚಿಟ್ ನೀಡಲಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದು, ‘ಇನ್ನೂ ತನಿಖೆ ಮುಗಿದಿಲ್ಲ. ಕ್ಲೀನ್ ಚಿಟ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು’ ಎಂದಿದ್ದಾರೆ. ಆದರೂ ಈ ವರೆಗಿನ ತನಿಖೆಯಲ್ಲಿ ಬ್ರಿಜ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
undefined
ಬ್ರಿಜ್‌ಭೂಷಣ್ ವಿರುದ್ಧ 4 ತಿಂಗಳ ಹಿಂದೆಯೇ ಗಂಭೀರ ಆರೋಪಗಳನ್ನು ಹೊರಿಸಿದ್ದ ಕುಸ್ತಿಪಟುಗಳು, ಏ.23ರಿಂದ ಜಂತರ್ಮಂತರ್ನಲ್ಲಿ ಧರಣಿ ಆರಂಭಿಸಿ ಹೋರಾಟ ತೀವ್ರಗೊಳಿಸಿದ್ದರು. ಈ ನಡುವೆ ತಿಂಗಳ ಹಿಂದೆಯೇ ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೋ ಸೇರಿದಂತೆ 2 ಎಫ್ಐಆರ್ ದಾಖಲಿಸಿ ದೆಹಲಿ ಪೊಲೀಸರು ವಿಚಾರಣೆ ಆರಂಭಿಸಿದ್ದರು. ದೂರು ನೀಡಿದ್ದ ಅಪ್ರಾಪ್ತೆಯರ ಹೇಳಿಕೆಗಳನ್ನೂ ದಾಖಲಿಸಲಾಗಿತ್ತು. ಆದರೆ ಈ ವರೆಗಿನ ತನಿಖೆಯಲ್ಲಿ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ, ತನಿಖೆ ಮುಕ್ತಾಯಗೊಳಿಸಿ 15 ದಿನಗಳೊಳಗೆ ಕೋರ್ಚ್‌ಗೆ ಅಂತಿಮ ವರದಿ ಸಲ್ಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಕುಸ್ತಿಪಟುಗಳ ಬೇಡಿಕೆ ಈಡೇರದಿದ್ದರೆ ದೆಹಲಿಗೆ ಹಾಲು ತರಕಾರಿ ಪೂರೈಗೆ ಸ್ಥಗಿತ, ನರೇಶ್ ಟಿಕಾಯತ್ ಘೋಷಣೆ!
ವಿನೇಶ್, ಭಜರಂಗ್ ಮನೆಗೆ
ಏ.23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಾದ ವಿನೇಶ್ ಫೋಗಾಟ್ ಹಾಗೂ ಭಜರಂಗ್ ಪೂನಿಯಾ, ಮಂಗಳವಾರ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹರಿದ್ವಾರಕ್ಕೆ ತೆರಳಿದ್ದರು. ಪದಕಗಳನ್ನು ಎಸೆಯದೆ ದೆಹಲಿಗೆ ವಾಪಸಾಗಿದ್ದ ಈ ಇಬ್ಬರು ಬುಧವಾರ ಹರ್ಯಾಣದಲ್ಲಿರುವ ತಮ್ಮ ಮನೆಗಳಿಗೆ ಮರಳಿದರು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತೊಬ್ಬ ಕುಸ್ತಿಪಟು ಸಾಕ್ಷಿ ಮಲಿಕ್ ಇನ್ನೂ ದೆಹಲಿಯಲ್ಲೇ ಇರುವುದಾಗಿ ತಿಳಿದುಬಂದಿದೆ.
ದುಡುಕಬೇಡಿ, ಕಾಯಿರಿ: ಕ್ರೀಡಾ ಸಚಿವ ಠಾಕೂರ್
ಪ್ರಕರಣದ ಬಗ್ಗೆ ಮೌನ ಮುರಿದಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ‘ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದುವರೆಗೂ ಕ್ರೀಡೆ ಹಾಗೂ ಕ್ರೀಡಾಳುಗಳಿಗೆ ತೊಂದರೆಯಾಗುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ’ ಎಂದು ಕುಸ್ತಿಪಟುಗಳಿಗೆ ಮನವಿ ಮಾಡಿದ್ದಾರೆ. ‘ಪೊಲೀಸರ ತನಿಖೆಯಲ್ಲಿ ನಂಬಿಕೆ ಇಡಿ, ನಾವೂ ನಿಮ್ಮ ಜೊತೆಗಿದ್ದೇವೆ. ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ನೀಡುತ್ತೇವೆ. ಕ್ರೀಡೆಗಾಗಿ ಸರ್ಕಾರ ಸಾಕಷ್ಟುಶ್ರಮ ವಹಿಸುತ್ತಿದೆ’ ಎಂದಿದ್ದಾರೆ.
ಆರೋಪ ಸಾಬೀತಾದರೆ ನೇಣಿಗೆ: ಬ್ರಿಜ್ ಸವಾಲು
ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಿರುವ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್, ಒಂದೇ ಒಂದು ಆರೋಪ ಸಾಬೀತಾದರೂ ಸ್ವತಃ ತಾವೇ ನೇಣಿಗೇರುವುದಾಗಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ. ಈ ಬಗ್ಗೆ ಸಾರ್ವಜನಿಕ ಕಾರ‍್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಕುಸ್ತಿಪಟುಗಳು ಹೋರಾಟ ಆರಂಭಿಸಿ 4 ತಿಂಗಳಾಯಿತು. ಆದರೆ ಆರೋಪ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಅವರಲ್ಲಿ ಸಾಕ್ಷ್ಯಾಧಾರಗಳಿದ್ದರೆ ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ. ನಾನು ಯಾವುದೇ ಶಿಕ್ಷೆಗೂ ಸಿದ್ಧ. ಅದನ್ನು ಬಿಟ್ಟು ಗಂಗಾ ನದಿಗೆ ಪದಕ ಎಸೆಯುವುದರಿಂದ ನನ್ನ ವಿರುದ್ಧದ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.