
ನವದೆಹಲಿ(ಮೇ.09): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ನೇಮಿಸಿರುವ ತ್ರಿಸದಸ್ಯರ ತಾತ್ಕಾಲಿಕ ಸಮಿತಿಗೆ ಎಲ್ಲಾ ದಾಖಲೆಗಳನ್ನು, ಹಣಕಾಸು ಪತ್ರಗಳನ್ನು ಹಸ್ತಾಂತರಿಸಲು ಸೂಚಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕಿರುವ ಮೊದಲ ಜಯ ಎಂದು ಪ್ರತಿಭಟನಾ ನಿರತ ಕುಸ್ತಿಪಟು ಸಂತಸ ವ್ಯಕ್ತಪಡಿಸಿದ್ದಾರೆ. ಭಾನುವಾರಕ್ಕೆ ಕುಸ್ತಿಪಟುಗಳ ಪ್ರತಿಭಟನೆ 22 ದಿನ ಪೂರೈಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಜರಂಗ್ ಪೂನಿಯಾ, ‘ನ್ಯಾಯಕ್ಕಾಗಿ ಹೋರಾಡುತ್ತಿರುವ ನಮಗೆ ಸಿಕ್ಕಿರುವ ಮೊದಲ ಜಯವಿದು. ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ಬೇಡಿಕೆ ಈಡೇರುವ ವರೆಗೂ ಪ್ರತಿಭಟನೆ ಮುಂದುವರಿಸಲಿದ್ದೇವೆ’ ಎಂದರು.
ಇದೇ ವೇಳೆ ಆಡಳಿತ ಪಕ್ಷದ ಮಹಿಳಾ ಸಂಸದೆಯರು ತಮ್ಮನ್ನು ಭೇಟಿಯಾಗಿಲ್ಲ ಎಂದು ವಿನೇಶ್ ಫೋಗಾಟ್ ಬೇಸರ ವ್ಯಕ್ತಪಡಿಸಿದ್ದಾರೆ. ‘ದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಸಂಸದೆಯರು ಮಾತನಾಡುತ್ತಾರೆ. ನಾವೂ ಅವರ ಮಕ್ಕಳಿದ್ದಂತೆ. ನಮ್ಮನ್ನೇಕೆ ಅವರು ಬೆಂಬಲಿಸುತ್ತಿಲ್ಲ’ ಎಂದು ಪ್ರಶ್ನಿಸಿದ ವಿನೇಶ್, ಸೋಮವಾರ ಸಂಸದೆಯರಿಗೆ ತಮ್ಮನ್ನು ಬೆಂಬಲಿಸುವಂತೆ ಪತ್ರ ಬರೆಯುವುದಾಗಿ ತಿಳಿಸಿದರು.
ಸುದೀರ್‌ಮನ್ ಕಪ್: ಭಾರತಕ್ಕೆ 1-4 ಸೋಲು!
ಸುಝೋ(ಚೀನಾ): ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡ ಕಳಪೆ ಆರಂಭ ಪಡೆದಿದೆ. ಭಾನುವಾರ ನಡೆದ ‘ಸಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತ, ಚೈನೀಸ್ ತೈಪೆ ವಿರುದ್ಧ 1-4ರ ಅಂತರದಲ್ಲಿ ಸೋಲುಂಡಿತು. ಈ ಸೋಲು ತಂಡದ ಕ್ವಾರ್ಟರ್ ಫೈನಲ್ ಹಾದಿಗೆ ಮುಳ್ಳಾಗುವ ಸಾಧ್ಯತೆ ಇದೆ. ಮಿಶ್ರ ಡಬಲ್ಸ್‌ನಲ್ಲಿ ತನಿಶಾ-ಸಾಯಿ ಪ್ರತೀಕ್, ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿಸೋಲುಂಡರು. 0-4ರಿಂದ ಹಿಂದಿದ್ದ ಭಾರತ ವೈಟ್‌ವಾಶ್ ಭೀತಿಯಲ್ಲಿತ್ತು. ಆದರೆ ಮಹಿಳಾ ಡಬಲ್ಸ್ ಮುಖಾಮುಖಿಯಲ್ಲಿ ಗಾಯತ್ರಿ ಹಾಗೂ ತ್ರೀಸಾ ಜಯಗಳಿಸಿ ಮಾನ ಉಳಿಸಿದರು. ಸೋಮವಾರ 2ನೇ ಪಂದ್ಯದಲ್ಲಿ ಭಾರತ ಬಲಿಷ್ಠ ಮಲೇಷ್ಯಾ ಸವಾಲು ಎದುರಿಸಲಿದೆ.
ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂನಲ್ಲೇ ಕುಳಿತು, ಮೊಬೈಲ್‌ನಲ್ಲಿ ಮ್ಯಾಚ್ ವೀಕ್ಷಿಸಿದ ವ್ಯಕ್ತಿ!
ಇಂದಿನಿಂದ ರಾಂಚಿಯಲ್ಲಿ ಫೆಡ್ ಕಪ್ ಅಥ್ಲೆಟಿಕ್ಸ್
ರಾಂಚಿ: 26ನೇ ರಾಷ್ಟ್ರೀಯ ಫೆಡ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮೇ 15ರಿಂದ 18ರ ವರೆಗೂ ಇಲ್ಲಿನ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ತಾರಾ ಅಥ್ಲೀಟ್‌ಗಳಾದ ಮನು ಡಿ.ಪಿ., ಪ್ರಿಯಾ ಮೋಹನ್ ಸೇರಿ ಕರ್ನಾಟಕದ 28 ಮಂದಿ ಸ್ಪರ್ಧಿಸಲಿದ್ದಾರೆ. ಮನು ಜಾವೆಲಿನ್ ಥ್ರೋನಲ್ಲಿ ಸ್ಪರ್ಧಿಸಲಿದ್ದು, ಪ್ರಿಯಾ 400 ಮೀ. ಓಟದಲ್ಲಿ ಪದಕ ಗೆಲ್ಲುವ ನೆಚ್ಚಿನ ಓಟಗಾರ್ತಿ ಎನಿಸಿದ್ದಾರೆ. 800 ಮೀ. ಓಟದಲ್ಲಿ ವಿಜಯಕುಮಾರಿ, 100 ಹಾಗೂ 200 ಮೀ. ಓಟದಲ್ಲಿ ದಾನೇಶ್ವರಿ, ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿಪದಕ ಗೆಲ್ಲುವ ನಿರೀಕ್ಷೆ ಇದೆ. ಈ ಕ್ರೀಡಾಕೂಟವು ಜು.12-16ರ ವರೆಗೂ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತಾ ಟೂರ್ನಿ ಎನಿಸಿದೆ. ಜೊತೆಗೆ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಗೇಮ್ಸ್ ಅರ್ಹತೆಗೆ ಬೇಕಿರುವ ಗುರಿಯನ್ನೂ ತಲುಪಲು ಅಥ್ಲೀಟ್‌ಗಳಿಗೆ ಅವಕಾಶವಿದೆ.
ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಒಟ್ಟು 4 ಪದಕ
ಬಾಕು: ಇಲ್ಲಿ ಭಾನುವಾರ ಮುಕ್ತಾಯಗೊಂಡ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಒಟ್ಟು 4 ಪದಕಗಳೊಂದಿಗೆ ಹಿಂದಿರುಗಿದೆ. ಕೂಟದ ಅಂತಿಮ ದಿನವಾದ ಭಾನುವಾರ ಪುರುಷರ ರಾರಯಪಿಡ್ ಫೈಯರ್ ಪಿಸ್ತೂಲ್ ಹಾಗೂ ಮಹಿಳೆಯರ ರೈಫಲ್ 3-ಪೊಸಿಷನ್ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲು ಭಾರತ ವಿಫಲವಾಯಿತು. ಕೂಟದಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಜಯಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.