ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಸುವರ್ಣನ್ಯೂಸ್.ಕಾಂ ವಿಶ್ವಕಪ್ ಪ್ಲಾಶ್’ಬ್ಯಾಕ್ ನೆನಪುಗಳನ್ನು ಕ್ರೀಡಾಭಿಮಾನಿಗಳ ಮುಂದಿಡುತ್ತಿದೆ. ಈ ದಿನ 1987ರ ವಿಶ್ವಕಪ್ ಪ್ಲಾಶ್’ಬ್ಯಾಕ್ ನಿಮ್ಮ ಮುಂದೆ...
ಅತಿಹೆಚ್ಚು ಬಾರಿ ಏಕದಿನ ವಿಶ್ವಕಪ್ ಗೆದ್ದಿರುವ ಆಸ್ಪ್ರೇಲಿಯಾ ತಂಡ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿದಿದ್ದು 1987ರಲ್ಲಿ. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಟೂರ್ನಿಗೆ ಆತಿಥ್ಯ ವಹಿಸಿದ್ದವು. 8 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಒಟ್ಟು 27 ಪಂದ್ಯಗಳು ನಡೆದವು.
ಭಾರತದ 14, ಪಾಕಿಸ್ತಾನದ 7 ಕ್ರೀಡಾಂಗಣಗಳು ಆತಿಥ್ಯ ನೀಡಿದ್ದವು. ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ 60 ಓವರ್‌ಗಳ ಇನ್ನಿಂಗ್ಸ್ ಬದಲು 50 ಓವರ್ ಇನ್ನಿಂಗ್ಸ್ ಪರಿಚಯಿಸಲಾಯಿತು. ಭಾರತ, ಪಾಕಿಸ್ತಾನ, ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್ ಸೆಮಿಫೈನಲ್ ತಲುಪಿದವು.
ಪಾಕ್ ವಿರುದ್ಧ ಆಸೀಸ್, ಭಾರತ ವಿರುದ್ಧ ಇಂಗ್ಲೆಂಡ್ ಸೆಮೀಸ್‌ನಲ್ಲಿ ಗೆದ್ದು ಫೈನಲ್‌ಗೇರಿದವು. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಪ್ರೇಲಿಯಾ 7 ರನ್ ರೋಚಕ ಗೆಲುವು ಸಾಧಿಸಿ ಟ್ರೋಫಿ ಜಯಿಸಿತು. ಇಲ್ಲಿಂದ ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಭೇಟೆ ಆರಂಭವಾಯಿತು.
ಚಾಂಪಿಯನ್: ಆಸ್ಪ್ರೇಲಿಯಾ
ರನ್ನರ್-ಅಪ್: ಇಂಗ್ಲೆಂಡ್
ಭಾರತದ ಸಾಧನೆ: ಸೆಮಿಫೈನಲ್