ಮಹಿಳಾ ಬಾಕ್ಸಿಂಗ್: ಮೇರಿ ಕೋಮ್ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ!

By Web DeskFirst Published Nov 19, 2018, 9:49 AM IST
Highlights

ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನದ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.  ಮೇರಿ ಕೋಮ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

ನವದೆಹಲಿ(ನ.19): ಭಾರತದ ತಾರಾ ಬಾಕ್ಸರ್ ಮೇರಿ ಕೋಮ್ ಮತ್ತು ಮನೀಶಾ ಮೌನ್, ಇಲ್ಲಿ ನಡೆಯುತ್ತಿರುವ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸರಿತಾ ದೇವಿ ಪ್ರಿಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಚಿನ್ನ ಗೆಲ್ಲುವ ವಿಶ್ವಾಸದಲ್ಲಿರುವುದಾಗಿ ಪಂದ್ಯ ಮುಗಿದ ಬಳಿಕ ಮೇರಿ ಹೇಳಿದ್ದಾರೆ. 

ಭಾನುವಾರ ನಡೆದ 48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೇರಿ ಕೋಮ್, ಕಜಕಿಸ್ತಾನದ ಐಗ್ರಿಮ್ ಕೆಸೆನಾಯೆವಾ ವಿರುದ್ಧ 5-0 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿದರು.
ಒಟ್ಟಾರೆ ಇಬ್ಬರೂ ಬಾಕ್ಸರ್‌ಗಳು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕ್ವಾರ್ಟರ್‌ನಲ್ಲಿ ಮೇರಿ, ಐರ್ಲೆಂಡ್‌ನ ಕಟೀ ಟೇಲರ್ ವಿರುದ್ಧ ಸೆಣಸಲಿದ್ದಾರೆ. 35 ವರ್ಷ ವಯಸ್ಸಿನ ಮಣಿಪುರದ ಬಾಕ್ಸರ್ ಮೇರಿ, 3 ಮಕ್ಕಳ ತಾಯಿಯಾಗಿದ್ದಾರೆ. 

ಮೊದಲ ಆವೃತ್ತಿಯಲ್ಲಿ ಮೇರಿ ಬೆಳ್ಳಿ ಪದಕ ಗೆದ್ದಿದ್ದರು. ಆ ಬಳಿಕ 2002 ರಿಂದ 2010 ರವರೆಗೆ ಸತತ 5 ಚಿನ್ನದ ಪದಕವನ್ನು ಮೇರಿ ಮುಡಿಗೇರಿಸಿಕೊಂಡಿದ್ದರು. ಮೊದಲ ಬೌಟ್‌ನಲ್ಲಿ ಬೈ ಪಡೆದು ಪ್ರಿ ಕ್ವಾರ್ಟರ್ ಗೇರಿದ್ದ ಮೇರಿ, ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಉತ್ತಮ ಪಂಚ್‌ಗಳನ್ನು ಮಾಡಿದ ಮೇರಿ, ಎದುರಾಳಿ ಬಾಕ್ಸರ್‌ನ್ನು ತಬ್ಬಿಬ್ಬು ಮಾಡಿದರು. ಆರಂಭದಲ್ಲಿ ಅಂಕಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಮೇರಿ, ಎದುರಾಳಿ ಬಾಕ್ಸರ್‌ಗೆ ಯಾವುದೇ ಅಂಕಗಳಿಸಲು ಅವಕಾಶ ನೀಡದೆ ಪಂದ್ಯ ಗೆದ್ದರು. 

ಕಠಿಣ ಅಭ್ಯಾಸ ನಡೆಸಿದ್ದೇನೆ. ಫೈನಲ್‌ಗೇರಿ 6ನೇ ಚಿನ್ನ ಜಯಿಸುವ ಉತ್ಸಾಹದಲ್ಲಿ ಇರುವುದಾಗಿ ಮೇರಿ ತಿಳಿಸಿದ್ದಾರೆ. ಮತ್ತೊಂದು ಪ್ರಿ ಕ್ವಾರ್ಟರ್‌ನಲ್ಲಿ ಮನೀಶಾ
ಮೌನ್, ಕಜಕಸ್ತಾನದ ಡಿನಾ ಜೋಲ್ಮನ್ ಎದುರು ಗೆಲುವು ಪಡೆದು ಎಂಟರಘಟ್ಟ ಪ್ರವೇಶಿಸಿದರು. 54 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮನೀಶಾ, ಅವಿರೋಧ ಗೆಲುವು ಪಡೆದರು. ಎದುರಾಳಿ ಬಾಕ್ಸರ್ ಯಾವುದೇ ಪ್ರತಿರೋಧ ಒಡ್ಡದ ಕಾರಣದಿಂದ ಮನೀಶಾ ಸುಲಭ ಗೆಲುವು ಸಾಧಿಸಿದರು. 

ಸರಿತಾ ದೇವಿ ಔಟ್ : ಭಾರತದ ಮತ್ತೊಬ್ಬ ಬಾಕ್ಸರ್ ಸರಿತಾ ದೇವಿಗೆ ಮತ್ತೆ ಅನ್ಯಾಯವಾಗಿದೆ. ರೆಫ್ರಿ ತಪ್ಪು ನಿರ್ಣಯ ನೀಡಿದ್ದಾರೆ. ಆದರೂ ನಿರ್ಣಯವನ್ನು
ಒಪ್ಪಿಕೊಳ್ಳುತ್ತೇನೆ ಎಂದು ಸರಿತಾ ಹೇಳಿದ್ದಾರೆ. ಈ ಹಿಂದೆ 2014ರ ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ಸರಿತಾ ರೆಫ್ರಿ ತಪ್ಪು ನಿರ್ಣಯ ನೀಡಿ ನನ್ನನ್ನು ಸೋಲಿಸಿದ್ದಾರೆ ಎಂದು ಕಂಚಿನ ಪದಕ ವಿತರಣೆ ಸಂದರ್ಭದಲ್ಲಿ ಅತ್ತಿದ್ದರು. 

ಹೀಗಾಗಿ ಸರಿತಾ 1 ವರ್ಷ ನಿಷೇಧಕ್ಕೊಳಗಾಗಿದ್ದರು. ಈ ಬಾರಿ ರೆಫ್ರಿ ನಿರ್ಣಯಕ್ಕೆ ಯಾವುದೇ ಪ್ರತಿರೋಧ ತೋರದೆ ನಿರ್ಣಯವನ್ನು ಒಪ್ಪಿಕೊಳ್ಳುವುದಾಗಿ ಸರಿತಾ ಹೇಳಿದ್ದಾರೆ.  60  ಕೆಜಿ ವಿಭಾಗದ ಪ್ರಿ ಕ್ವಾರ್ಟರ್ ಬೌಟ್‌ನಲ್ಲಿ ಸರಿತಾ, 2016ರ ವಿಶ್ವ ಚಾಂಪಿಯನ್ ಐರ್ಲೆಂಡ್ ಬಾಕ್ಸರ್ ಕೆಲ್ಲಿ ಹ್ಯಾರಿಂಗ್ಟನ್ ವಿರುದ್ಧ 2-3 ರಿಂದ ಪರಾಭವ ಹೊಂದಿದರು

click me!