ಯುವಕರ ಐಕಾನ್ ಕಬಡ್ಡಿ ಪಟು ಬೆಂಗಳೂರು ಬುಲ್ಸ್ ತಂಡದ ಪವನ್!

By Web DeskFirst Published Nov 19, 2018, 9:39 AM IST
Highlights

ಬೆಂಗಳೂರು ಬುಲ್ಸ್ ತಂಡ ಸ್ಟಾರ್ ರೈಡರ್ ಆಗಿ ಮಿಂಚುತ್ತಿರುವ ಪವನ್ ಶೆರಾವತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಪವನ್ ಯಶೋಗಾಥೆ ಇಲ್ಲಿದೆ.
 

ಅಹಮ್ಮದಾಬಾದ್(ನ.19): ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ತಾರಾ ರೈಡರ್ ಆಗಿ ಮಿಂಚುತ್ತಿರುವ ಪವನ್ ಶೆರಾವತ್ ಬಾಲ್ಯದಲ್ಲೆ ಕಬಡ್ಡಿ ಪ್ರಿಯರಾಗಿದ್ದರು. ಶಾಲಾ ದೈಹಿಕ ಶಿಕ್ಷಕರೊಬ್ಬರ ಪ್ರೇರಣೆಯಿಂದ ಕಬಡ್ಡಿಯನ್ನು ಆಯ್ದುಕೊಂಡ ಪವನ್, ಇಂದು ಪ್ರೊಕಬಡ್ಡಿಯಲ್ಲಿ ಯುವ ಐಕಾನ್ ಆಗಿ ರೂಪುಗೊಂಡಿದ್ದಾರೆ. ದೆಹಲಿ ಮೂಲದ ಆಟಗಾರನಾಗಿರುವ ಪವನ್, ರೈಲ್ವೇಸ್ ತಂಡ ಆಟಗಾರರಾಗಿದ್ದು, ಸದ್ಯ ಬೆಂಗಳೂರು ಬುಲ್ಸ್ ತಂಡದ ರೈಡರ್ ಮೆಷಿನ್ ಆಗಿ ಮಿಂಚುತ್ತಿದ್ದಾರೆ.

ಪವನ್‌ರದ್ದು ರೈತ ಕುಟುಂಬ: ಪವನ್ ಸಾಧಾರಣ ರೈತ ಕುಟುಂಬದಲ್ಲಿ ಬೆಳೆದವರು. ತಂದೆ, ಪಿತ್ರಾರ್ಜಿತವಾಗಿ ಬಂದಿದ್ದ ಸ್ವಲ್ಪ ಪ್ರಮಾಣದ ಗದ್ದೆಯಲ್ಲಿಯೇ ಕೃಷಿ ಮಾಡಿ
ಜೀವನ ಸಾಗಿಸುತ್ತಿದ್ದರು. ಜೀವನ ನಿರ್ವಹಣೆಗೆ ಆಧಾರವಾಗಿದ್ದ ಕೃಷಿ ಭೂಮಿಯನ್ನೂ ಸರ್ಕಾರ ವಿವಿಧ ನೆಪವೊಡ್ಡಿ ಕಿತ್ತುಕೊಂಡಿತು. ಇದರಿಂದಾಗಿ ಜೀವನ ನಿರ್ವಹಣೆಗೆ ಅಪ್ಪ ಈಗಲೂ ಸಣ್ಣ ಪುಟ್ಟ ಕೆಲಸ ಮಾಡುತ್ತಾರೆ. ಶಾಲಾ ದೈಹಿಕ ಶಿಕ್ಷಕರು, ಕಬಡ್ಡಿಯ ಕೃಷಿ ಕಲಿಸುವ ಮೂಲಕ ಪವನ್ ಆಟವನ್ನು ಅಭಿವೃದ್ಧಿಗೊಳಿಸಿದರು. 

ಬುಲ್ಸ್ ತಂಡದಲ್ಲಿ ಪವನ್ ಮಿಂಚು: ಬೆಂಗಳೂರು ಬುಲ್ಸ್‌ನಲ್ಲಿ ಪ್ರೊ ಕಬಡ್ಡಿ ಆಟಗಾರನಾಗಿ ಉತ್ತಮ ಅನುಭವ ಹೊಂದಿರುವ ಪವನ್ ಅವರನ್ನು, ಈ ಆವೃತ್ತಿಯಲ್ಲಿ ಬುಲ್ಸ್ ಸರಿಯಾಗಿಯೇ ಬಳಸಿಕೊಳ್ಳುತ್ತಿದೆ. ಮೊದಲ ಆವೃತ್ತಿಯಲ್ಲೇ ಬುಲ್ಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದರೂ ಕಣಕ್ಕಿಳಿಯಲು ಅವಕಾಶ ದೊರತಿದ್ದು 3ನೇ ಆವೃತ್ತಿಯಲ್ಲಿ. ಆದರೆ ಒಮ್ಮೆ ಸಿಕ್ಕ ಅವಕಾಶವನ್ನು ಪವನ್ ವ್ಯರ್ಥ ಗೊಳಿಸಲಿಲ್ಲ. ಮೂರನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಬುಲ್ಸ್ ಪವನ್‌ರನ್ನು 4ನೇ
ಆವೃತ್ತಿಗೆ ರಿಟೈನ್ ಮಾಡಿಕೊಂಡಿತು. 5ನೇ ಆವೃತ್ತಿಯಲ್ಲಿ ಗುಜರಾತ್ ತಂಡಕ್ಕೆ ಆಯ್ಕೆಯಾಗಿದ್ದರು.

ಪ್ರಯೋಗಕ್ಕೆ ಹೆಚ್ಚಿನ ಒತ್ತು: ಬುಲ್ಸ್ ತಂಡದಲ್ಲಿ ರೈಡರ್ ಆಗಿರುವವರು ಪ್ರತಿ ಬಾರಿ ರೈಡರ್ ಆಗಲೇಬೇಕು ಅಂತೇನಿಲ್ಲ. ಎಲ್ಲ ಪೋಸಿಷನ್ ನಲ್ಲಿಯೂ ಆಟಗಾರರು ಪಕ್ವಗೊಳ್ಳುವ ಉದ್ದೇಶದಿಂದ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಪವನ್‌ರನ್ನು ರೈಟ್ ಕಾರ್ನರ್‌ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿತ್ತು. ಒಂದು ತಂಡದಲ್ಲಿ ರೈಟ್ ಕಾರ್ನರ್ ಅತ್ಯಂತ ಮಹತ್ವದ ಸ್ಥಾನವಾಗಿದೆ. ಆ ಜಾಗದಲ್ಲಿ ಪವನ್‌ಗೆ ಆಡಲು ಬುಲ್ಸ್ ಅವಕಾಶ ನೀಡಿತ್ತು. ಬುಲ್ಸ್‌ನ ತಾರಾ ರೈಡರ್‌ಗಳೆನಿಸಿರುವ ರೋಹಿತ್ ಮತ್ತು ಕಾಶಿಲಿಂಗ್ ಕೂಡ ಡಿಫೆಡಿಂಗ್‌ನಲ್ಲಿ ಮಿಂಚುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. 

ಬುಲ್ಸ್ ತಂಡ ರೈಡರ್‌ನ್ನು ರೈಡಿಂಗ್‌ನಲ್ಲಿ ಮಾತ್ರ ಅವಕಾಶ ನೀಡದೆ, ಡಿಫೆಡಿಂಗ್‌ಗೂ ಪ್ರೋತ್ಸಾಹ ನೀಡುತ್ತಿರುವುದರಿಂದ ತಂಡ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಿದೆ. ಬುಲ್ಸ್ ತಂಡದಲ್ಲಿ ರೋಹಿತ್, ಕಾಶಿಲಿಂಗ್ ಅವರಂತಹ ತಾರಾ ರೈಡರ್‌ಗಳಿದ್ದಾರೆ. ರೋಹಿತ್ ಮತ್ತು ಕಾಶಿ ಇಬ್ಬರೂ ನನಗೆ ಸಲಹೆ ನೀಡುತ್ತಲೇ, ನನ್ನ ಸಣ್ಣ-ಪುಟ್ಟ ತಪ್ಪುಗಳನ್ನು ತಿದ್ದುತ್ತಾರೆ. ಎಲ್ಲ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವುದಕ್ಕೆ ಸಾಧ್ಯವಿಲ್ಲ. ಆದರೆ ವೈಫಲ್ಯ ಅನುಭವಿಸಿದ ಸಂದರ್ಭದಲ್ಲಿ ಕೋಚ್ ರಣಧೀರ್
ಸಿಂಗ್, ಬಿ.ಸಿ.ರಮೇಶ್ ಮತ್ತು ನಾಯಕ ರೋಹಿತ್ ನನಗೆ ಧೈರ್ಯ ತುಂಬುತ್ತಾರೆ.

ಅಭ್ಯಾಸದ ವೇಳೆಯಲ್ಲಿ ಕೋಚ್ ನಿನ್ನ ಗೇಮ್ ನೀನು ಆಡು, ಯಾವುದನ್ನು, ಯಾರನ್ನು ಅನುಕರಣೆ ಮಾಡಬೇಡ. ರೈಡಿಂಗ್ ಮತ್ತು ಟ್ಯಾಕಲಿಂಗ್‌ನಲ್ಲಿ  ಹಿನ್ನಡೆ ಅನುಭವಿಸಿದಾಗಲೂ ಆತ್ಮಶ್ವಾಸ ತುಂಬುತ್ತಾರೆ. ಕೋಚ್‌ಗಳು ಮತ್ತು ತಂಡದ ಸಹ ಆಟಗಾರರ ಸಲಹೆಗಳು ನನ್ನ ಯಶಸ್ಸಿಗೆ ಕಾರಣವಾಗಿದೆ. ಬುಲ್ಸ್ ತಂಡದಲ್ಲಿ ಕಠಿಣ ಅಭ್ಯಾಸ ನಡೆಸಿದ್ದೇನೆ. ಇದೇ ವರ್ಷ ಫೆಡರೇಷನ್ ಕಪ್, ರಾಷ್ಟ್ರೀಯ ಟೂರ್ನಿಗಳಿವೆ. ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಭಾರತ ತಂಡದಲ್ಲಿ ಆಡುವ ಅವಕಾಶ ಲಭಿಸಲಿದೆ ಎಂಬ ವಿಶ್ವಾಸದಲ್ಲಿ ಪವನ್ ಇದ್ದಾರೆ.

3ನೇ ಆವೃತ್ತಿಯಲ್ಲಿ ಬೆಂಗಳೂರು ಚರಣದಲ್ಲಿ ಆಡಿದ್ದೆ, ಅಲ್ಲಿನ ಅಭಿಮಾನಿಗಳು ಉತ್ತಮ ಬೆಂಬಲ ನೀಡಿದ್ದರು. ತಂಡದ ಆಟಗಾರರನ್ನು ಹುರಿದುಂಬಿಸಿದ್ದರು. ಕಳೆದ ಬಾರಿ ನಾಗ್ಪುರ 2ನೇ ತವರಿನ ಚರಣವಾಗಿತ್ತು. ಈ ಆವೃತ್ತಿಯಲ್ಲಿ ಪುಣೆ ಅಭಿಮಾನಿಗಳು ಬುಲ್ಸ್ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ. ಎಲ್ಲಿಯೇ ಪಂದ್ಯವಾಡಿದರೂ ಶೇ.100 ರಷ್ಟು ಎಫರ್ಟ್ ಹಾಕಲಿದ್ದೇವೆ. ಪುಣೆ ಚರಣದಲ್ಲಿ ಬುಲ್ಸ್ ಉತ್ತಮ ಪ್ರದರ್ಶನ ತೋರುವ
ಉತ್ಸಾಹದಲ್ಲಿದೆ.

ಧನಂಜಯ ಎಸ್. ಹಕಾರಿ

click me!
Last Updated Nov 19, 2018, 9:39 AM IST
click me!