
ಟೋಕಿಯೋ: ಹಾಲಿ ವಿಶ್ವ ಚಾಂಪಿಯನ್, 2 ಬಾರಿ ಒಲಿಂಪಿಕ್ ಪದಕ ವಿಜೇತ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದ್ದಾರೆ. ಅವರ ಜೊತೆಗೆ ಭಾರತದ ಮತ್ತೋರ್ವ ಸ್ಪರ್ಧಿಸಚಿನ್ ಯಾದವ್ ಕೂಡಾ ಫೈನಲ್ ಗೇರಿದ್ದಾರೆ.
ಬುಧವಾರ ಜಾವೆಲಿನ್ ಥ್ರೋ ಅರ್ಹತಾ ಸುತ್ತು ನಡೆಯಿತು. 'ಎ' ಗುಂಪಿನಲ್ಲಿ 19, 'ಬಿ' ಗುಂಪಿನಲ್ಲಿ 18 ಸ್ಪರ್ಧಿಗಳಿದ್ದರು. ಫೈನಲ್‌ಗೇರಬೇಕಿದ್ದರೆ ಅರ್ಹತಾ ಮಾನದಂಡ 84.50 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಬೇಕಿತ್ತು ಅಥವಾ ಎರಡೂ ಗುಂಪು ಸೇರಿ ಅಗ್ರ -12ರಲ್ಲಿ ಸ್ಥಾನ ಪಡೆಯಬೇಕಿತ್ತು.'ಎ' ಗುಂಪಿನಲ್ಲಿದ್ದ ನೀರಜ್ ತಮ್ಮ ಮೊದಲ ಪ್ರಯತ್ನದಲ್ಲೇ 84.85 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಫೈನಲ್ ಪ್ರವೇಶಿಸಿದರು. ಅವರು ತಮ್ಮ ಗುಂಪಿನಲ್ಲಿ 3ನೇ, ಒಟ್ಟಾರೆ 6ನೇ ಸ್ಥಾನಿಯಾದರು.
ಸಚಿನ್ ಯಾದವ್ (83.67)ಅರ್ಹತಾ ಮಾನದಂಡ ತಲುಪದಿದ್ದರೂ, ಒಟ್ಟಾರೆ10ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಆದರೆ 'ಬಿ' ಗುಂಪಿನಲ್ಲಿದ್ದ ಭಾರತದ ಇನ್ನಿಬ್ಬರು ಸ್ಪರ್ಧಿಗಳಾದ ರೋಹಿತ್ ಯಾದವ್(77.81 ಮೀ.) ಹಾಗೂ ಯಶ್ವಿತ್ ಸಿಂಗ್ (77.51 ಮೀ.) ಕ್ರಮವಾಗಿ 28 ಹಾಗೂ 30ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು, ಫೈನಲ್‌ಗೇರಲು ವಿಫಲರಾದರು.
ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಹಲವು ಪ್ರಮುಖ ಆಟಗಾರರು ಫೈನಲ್ ಪ್ರವೇಶಿಸಿದ್ದಾರೆ. 2 ಬಾರಿ ವಿಶ್ವ ಚಾಂಪಿಯನ್, ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್(89.53 ಮೀ.) ಅಗ್ರ ಸ್ಥಾನಿಯಾದರೆ, ಜರ್ಮನಿಯ ಜೂಲಿಯನ್ ವೆಬೆರ್ (87.21 ಮೀ.) 2ನೇ, ಕೀನ್ಯಾದ ಜೂಲಿಯಸ್ ಯೆಗೊ(85.96 ಮೀ.) 3ನೇ, ಪೋಲೆಂಡ್‌ನ ಡೇವಿಡ್ ವೆಗ್ನರ್ (85.67 ಮೀ.) 4ನೇ ಹಾಗೂ ಹಾಲಿ ಒಲಿಂಪಿಕ್ಸ್ ಚಾಂಪಿಯನ್, ಪಾಕಿಸ್ತಾನದ ಅರ್ಶದ್‌ದೀಂ(85.28 ಮೀ.) 5ನೇ ಸ್ಥಾನಿಯಾಗಿ ಫೈನಲ್‌ಗೇರಿದರು. ಚೆಕ್ ಗಣರಾಜ್ಯದ ಜಾಕುಬ್ ವೆಡ್ಲೆಚ್ (84.11 ಮೀ.), ಶ್ರೀಲಂಕಾದ ರುಮೇಶ್ (82.80 ಮೀ.) ಕೂಡಾ ಫೈನಲ್ ತಲುಪಿದರು.
2023ರ ಫೈನಲ್‌ನಲ್ಲಿ ನೀರಜ್ 88.17 ಮೀಟರ್ ದೂರ ದಾಖಲಿಸಿ ಚಾಂಪಿಯನ್ ಆಗಿದ್ದರೆ, ನದೀಂ(87.82 ಮೀ.) ಬೆಳ್ಳಿ, ವೆಡ್ಲೆಚ್ (86.67 ಮೀ.) ಕಂಚು ಗೆದ್ದಿದ್ದರು.
ನೀರಜ್‌ಗೆ ಸತತ 2ನೇ ಕಿರೀಟ ಗೆಲ್ಲುವ ತವಕ
2023ರ ಚಾಂಪಿಯನ್ ನೀರಜ್ ಸತತ 2ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ. ಆದರೆ ಅವರ ಹಾದಿ ಸುಲಭದ್ದೇನಲ್ಲ. ಆ್ಯಂಡರ್‌ಸನ್ ಪೀಟರ್ಸ್, ಜೂಲಿಯನ್ ವೆಬರ್ ಸೇರಿ ಪ್ರಮುಖರು ನೀರಜ್‌ಗೆ ಕಠಿಣ ಸವಾಲು ಒಡ್ಡಲಿದ್ದಾರೆ. ಅಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್‌ರನ್ನು ಹಿಂದಿಕ್ಕಿ ಚಿನ್ನ ಗೆದ್ದಿದ್ದ ಪಾಕಿಸ್ತಾನದ ಅರ್ಶದ್ ನದೀಂ ಕೂಡಾ ಫೈನಲ್‌ನಲ್ಲಿದ್ದು, ಇವರಿಬ್ಬರ ನಡುವಿನ ಮುಖಾಮುಖಿ ಕುತೂಹಲ ಕೆರಳಿಸಿದೆ. ನೀರಜ್ ಚಿನ್ನ ಗೆದ್ದರೆ, ಸತತವಾಗಿ 2 ಬಾರಿ ವಿಶ್ವ ಚಾಂಪಿಯನ್ ಆದ 3ನೇ ಅಥೀಟ್ ಎನಿಸಿಕೊಳ್ಳಲಿದ್ದಾರೆ.
ಇಂದು ಸಂಜೆ ಫೈನಲ್
ಜಾವೆಲಿನ್ ಥ್ರೋ ಫೈನಲ್ ಗುರುವಾರ ನಡೆಯಲಿದೆ. ಭಾರತದ ಇಬ್ಬರು ಸೇರಿ ಒಟ್ಟು 12 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಭಾರತೀಯ ಕಾಲಮಾನ ಸಂಜೆ 3.53ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದೆ. ಸ್ಟಾರ್‌ಸ್ಟೋರ್ಟ್ಸ್, ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವಿದೆ.
ಟ್ರಿಪಲ್ ಜಂಪ್, 200 ಮೀ. ರೇಸಿನಲ್ಲಿ ನಿರಾಸೆ
ಭಾರತದ ಪ್ರವೀಣ್ ಚಿತ್ರವೇಲ್, ಅಬ್ದುಲ್ಲಾ ಅಬೂಬಕರ್ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದರು. ಬುಧವಾರ ನಡೆದ ಸ್ಪರ್ಧೆಯಲ್ಲಿ ಪ್ರವೀನ್ 15, ಅಬ್ದುಲ್ಲಾ 24ನೇ ಸ್ಥಾನ ಪಡೆದರು. 200 ಮೀ. ರೇಸ್‌ನಲ್ಲಿ ಅನಿಮೇಶ್ ಕುಜೂರ್ ಕೂಡಾ ಫೈನಲ್‌ಗೇರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.