
ಗಯಾನ[ನ.17]: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ತಂಡ ಇಂದು ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲಿ 3ರಲ್ಲೂ ಗೆಲುವು ಸಾಧಿಸಿರುವ ಭಾರತ 6 ಅಂಕಗಳಿಸಿ 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ತಂಡ ಜಯಿಸಿದರೆ, ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಸಾಮಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿತ್ತು. 3ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 52ರನ್‌ಗಳ ಅಂತರದಲ್ಲಿ ಗೆದ್ದು ಸೆಮೀಸ್ ಸ್ಥಾನ ಭದ್ರಪಡಿಸಿಕೊಂಡಿತ್ತು.
ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಕಿವೀಸ್ ವಿರುದ್ಧ ಅಮೋಘ ಶತಕ ಸಿಡಿಸಿದ್ದರು. ಐರ್ಲೆಂಡ್ ವಿರುದ್ಧ ಮಿಥಾಲಿ ರಾಜ್ ಅರ್ಧಶತಕ ಬಾರಿಸಿದ್ದರು. ಇದೀಗ ಅದೇ ಕ್ರೀಡಾಂಗಣದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮುಖಾಮುಖಿಯಾಗಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಾನಾಡಿರುವ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಹೆಚ್ಚಿನ ರನ್ ರೇಟ್ ಹೊಂದಿರುವ ಆಸೀಸ್ ‘ಬಿ’ ಗುಂಪಿನಲ್ಲಿ ನಂ.1 ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧ 52 ರನ್, ಐರ್ಲೆಂಡ್ ವಿರುದ್ಧ 9 ವಿಕೆಟ್ ಮತ್ತು ನ್ಯೂಜಿಲೆಂಡ್ ಎದುರು 33 ರನ್‌ಗಳ ಅಂತರದಲ್ಲಿ ಗೆದ್ದು ಪ್ರಬಲ ತಂಡವಾಗಿ ಹೊರಹೊಮ್ಮಿದೆ.
ಗುಂಪು ಹಂತದಲ್ಲಿ ಉಭಯ ತಂಡಗಳು ಉತ್ತಮ ಹೋರಾಟ ನಡೆಸಿವೆ. ಹೀಗಾಗಿ 2 ತಂಡಗಳಿಗೆ ಮುಂದಿನ ಹಾದಿ ಕಠಿಣವಾಗಿದೆ. ಭಾರತ ತಂಡ ಬ್ಯಾಟಿಂಗ್’ನಲ್ಲಿ ಸ್ವಲ್ಪ ಮೈಮರೆತರೂ ಸೋಲು
ಎದುರಾಗಬಹುದು. ಅದರಲ್ಲೂ ಫೈನಲ್ ಸ್ಥಾನ ಕೈಗೆಟುಕುವ ಸನಿಹದಲ್ಲಿದ್ದಾಗ ಭಾರತ, ಸಂಪೂರ್ಣ ಪರಿಶ್ರಮ ವಹಿಸಿ ಪಂದ್ಯ ಗೆಲ್ಲಲು ಎದುರು ನೋಡುತ್ತಿದೆ. ‘ಬಿ’ ಗುಂಪಿನಲ್ಲಿ 2 ತಂಡಗಳಿಗೆ ಅಂತಿಮ ಪಂದ್ಯ ಇದಾಗಿರುವುದರಿಂದ ಗೆಲುವಿಗಾಗಿ ರೋಚಕ ಕಾದಾಟ ನಡೆಯುವ ನಿರೀಕ್ಷೆ ಇದೆ. ಈ ಪಂದ್ಯದಲ್ಲಿ ಜಯಿಸುವ ತಂಡ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಲಿದ್ದು, ಮುಂದಿನ ಹಾದಿಯನ್ನು ನಿರ್ಧರಿಸುವ ಸಾಧ್ಯತೆ ದಟ್ಟವಾಗಿದೆ.
ಭಾರತಕ್ಕೆ ಮೊದಲ 3 ಪಂದ್ಯಗಳಲ್ಲಿ ತಂಡದ ತಾರಾ ಹಾಗೂ ಅನುಭವಿ ಆಟಗಾರ್ತಿಯರು ನೆರವಾಗಿದ್ದಾರೆ. ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಡಿದರೆ, ಪಾಕಿಸ್ತಾನ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್ ಆಕರ್ಷಕ ಅರ್ಧಶತಕ ಭಾರತದ ಗೆಲುವಿಗೆ ನೆರವಾಗಿತ್ತು. ಇಬ್ಬರು ದಿಗ್ಗಜ ಆಟಗಾರ್ತಿಯರ ಜತೆ ಮುಂಬೈನ 18 ವರ್ಷದ ಜೆಮಿಮಾ ರೋಡ್ರಿಗಾಸ್ ಸಹ ಮಿಂಚುತ್ತಿದ್ದಾರೆ. ಆದರೆ ಸ್ಮತಿ ಮಂಧನಾ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ. ಆಲ್ರೌಂಡರ್ ದೀಪ್ತಿ ಶರ್ಮಾಗಿನ್ನೂ ಸರಿಯಾಗಿ ಬ್ಯಾಟಿಂಗ್ ಅವಕಾಶ ದೊರೆತಿಲ್ಲ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ದಯಾಳನ್ ಹೇಮಲತಾ ಹಾಗೂ ಪೂನಮ್ ಯಾದವ್ ಭಾರತದ ಟ್ರಂಪ್ ಕಾರ್ಡ್‌ಗಳೆನಿಸಿದ್ದಾರೆ. ಇನ್ನೂ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಆಲಿಸಾ ಹೀಲಿ, 8 ಇನಿಂಗ್ಸ್‌ಗಳಲ್ಲಿ 6 ಅರ್ಧಶತಕ ಸಿಡಿಸಿದ್ದಾರೆ. ಮೆಗನ್ ಸ್ಚಟ್, ಎಲೈಸೆ ಪೆರ್ರಿ ಭಾರತದ ಆಟಗಾರ್ತಿಯರನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.