ಟೀಂ ಇಂಡಿಯಾ ಗೆದ್ರೆ ಕ್ವಾ.ಫೈನಲ್ ಆಸೆ ಜೀವಂತ!

By Suvarna NewsFirst Published Jul 29, 2018, 12:40 PM IST
Highlights

ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಇಂದು ಅಗ್ನಿಪರೀಕ್ಷೆ ಎದುರಿಸಲಿದೆ. ಯುಎಸ್ಎ ವಿರುದ್ಧ ನಡೆಯಲಿರುವ ಇಂದಿನ ಹೋರಾಟದ ಗೆಲುವು ಭಾರತೀಯ ಮಹಿಳಾ ತಂಡಕ್ಕೆ ಯಾಕೆ ಮುಖ್ಯ. ಇಲ್ಲಿದೆ ಸಂಪೂರ್ಣ ಮಾಹಿತಿ.

ಲಂಡನ್(ಜು.29): ಹಾಕಿ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ರೇಸ್‌ನಲ್ಲಿ ಉಳಿದುಕೊಳ್ಳಬೇಕಾದರೆ ಭಾರತ ಮಹಿಳಾ ತಂಡ ಭಾನುವಾರ ಯುಎಸ್‌ಎ ವಿರುದ್ಧ ಗೆಲುವು ಸಾಧಿಸಲೇಬೇಕಿದೆ. ‘ಬಿ’ ಗುಂಪಿನ ಅಂತಿಮ ಪಂದ್ಯ ಇದಾಗಿದ್ದು, ತಂಡ ಒಂದೊಮ್ಮೆ ಸೋಲುಂಡರೆ ಟೂರ್ನಿಯಿಂದ ಹೊರಬೀಳಲಿದೆ.

ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ್ದ ರಾಣಿ ರಾಂಪಾಲ್ ಪಡೆ 2ನೇ ಪಂದ್ಯದಲ್ಲಿ ವಿಶ್ವ ನಂ.16ನೇ ಸ್ಥಾನದಲ್ಲಿರುವ ಐರ್ಲೆಂಡ್ ವಿರುದ್ಧ ಆಘಾತ ಆನುಭವಿಸಿತ್ತು. ಪಂದ್ಯದಲ್ಲಿ 7 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದ ಭಾರತ ಒಂದರಲ್ಲೂ ಗೋಲು ಗಳಿಸದೆ ನಿರಾಸೆ ಮೂಡಿಸಿತ್ತು. ಅದೇ ತಪ್ಪನ್ನು ಮತ್ತೊಮ್ಮೆ ಎಸೆಗಿದರೆ ತಂಡ ನಾಕೌಟ್ ಕನಸನ್ನು ಮರೆಯಬೇಕಾಗುತ್ತದೆ.

ಭಾರತ ಒಂದು ಡ್ರಾ ಹಾಗೂ ಒಂದು ಸೋಲಿನೊಂದಿಗೆ 1 ಅಂಕ ಸಂಪಾದಿಸಿದೆ. ಯುಎಸ್‌ಎ ಸಹ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿ, ಐರ್ಲೆಂಡ್ ವಿರುದ್ಧ ಸೋತಿತ್ತು. ಆದರೆ ಗೋಲು ವ್ಯತ್ಯಾಸದ ಆಧಾರದ ಮೇಲೆ ಭಾರತ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ನಾಕೌಟ್ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯಬೇಕಿದ್ದರೆ ಕೊನೆ ಪಕ್ಷ ಭಾನುವಾರದ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳಬೇಕಿದೆ. 

ತಂಡದ ಫಾರ್ವರ್ಡ್ ಪಡೆ ತನ್ನ ಆಟವನ್ನು ಚುರುಕುಗೊಳಿಸಬೇಕಿದೆ. ರಕ್ಷಣಾ ಪಡೆ ಸದೃಢವಾಗಿದ್ದು, ಲಯ ಕಾಪಾಡಿಕೊಳ್ಳಬೇಕಿದೆ. ನಾಯಕಿ ರಾಣಿ ರಾಂಪಾಲ್ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ತಂಡದ ಆತಂಕ ಹೆಚ್ಚಿಸಿದೆ. ತಂಡದ ಪ್ರದರ್ಶನ ಹೆಮ್ಮೆ ತರದಿದ್ದರೂ, ಸಮಾಧಾನಕರವಾಗಿದೆ ಎಂದು ಕೋಚ್ ಸೋರ್ಡ್ ಮರಿನೆ ಹೇಳಿದ್ದಾರೆ. 

‘ಇಂಗ್ಲೆಂಡ್ ವಿರುದ್ಧ 10 ಬಾರಿಯಷ್ಟೇ ಸರ್ಕಲ್ ಪ್ರವೇಶ ಮಾಡಿದ್ದೆವು. ಆದರೆ ಐರ್ಲೆಂಡ್ ವಿರುದ್ಧ ಆ ಸಂಖ್ಯೆ 27ಕ್ಕೇರಿತು. ಇಂಗ್ಲೆಂಡ್ 38 ಬಾರಿ ನಮ್ಮ ವೃತ್ತದೊಳಗೆ ಪ್ರವೇಶಿಸಿತ್ತು. ಐರ್ಲೆಂಡ್ ಕೇವಲ 10 ಬಾರಿ ಸರ್ಕಲ್ ಪ್ರವೇಶಿಸಿ ಗೋಲು ಗಳಿಸಲು ಯತ್ನ ನಡೆಸಿತು. ಹೀಗಾಗಿ, ಮೊದಲ ಪಂದ್ಯಕ್ಕಿಂತ 2ನೇ ಪಂದ್ಯದಲ್ಲಿ ನಮ್ಮ ಪ್ರದರ್ಶನ ಸುಧಾರಿಸಿತು. ಯುಎಸ್‌ಎ ವಿರುದ್ಧ ತಂಡ ಗೆಲ್ಲಲಿದೆ ಎನ್ನುವ ನಂಬಿಕೆ ಇದೆ’ ಎಂದು ಮರಿನೆ ಹೇಳಿದ್ದಾರೆ. 

ಪಂದ್ಯ ಆರಂಭ: ರಾತ್ರಿ 9.30 ಕ್ಕೆ, ನೇರ ಪ್ರಸಾರ:
ಸ್ಟಾರ್ ಸ್ಪೋರ್ಟ್ಸ್ 2

click me!