ಮಹಿಳಾ ಟಿ20 ವಿಶ್ವಕಪ್: ನಾಳೆ ಭಾರತ-ಇಂಗ್ಲೆಂಡ್ ಸೆಮೀಸ್ ಹೋರಾಟ!

By Web DeskFirst Published Nov 22, 2018, 10:42 AM IST
Highlights

2017ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್ ಸೋಲು ಅನುಭವಿಸಿದ್ದ ಭಾರತ, ಇದೀಗ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಹೀಗಾಗಿ ಟಿ20 ಸೆಮಿಫೈನಲ್ ಹೋರಾಟ ಭಾರಿ ಕುತೂಹಲ ಕೆರಳಿಸಿದೆ.

ನಾರ್ತ್‌ಸೌಂಡ್(ನ.22): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಹಂತಕ್ಕೆ ಇನ್ನೊಂದು ಹೆಜ್ಜೆ ಬಾಕಿ ಇದೆ. ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ
ಭಾರತ ಮಹಿಳಾ ತಂಡ ಮತ್ತೊಂದು ಮಹತ್ವದ ಗೆಲುವಿನ ನಿರೀಕ್ಷೆಯಲ್ಲಿದ್ದು, ಫೈನಲ್ ಕದ ತಟ್ಟಲು ಹೋರಾಟ ನಡೆಸಲಿದೆ. ಭಾರತೀಯ ಕಾಲಾಮಾನ ಪ್ರಕಾರ ಶುಕ್ರವಾರ(ನ.23) ಬೆಳಗ್ಗೆ 5.30 ಕ್ಕೆ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಮೂಲಕ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರಿನ ಸೋಲಿನ ಸೇಡನ್ನು ಈ ಪಂದ್ಯದಲ್ಲಿ ತೀರಿಸಲು ಭಾರತ ಮಹಿಳಾ ತಂಡ ಕಾಯುತ್ತಿದೆ. 

2017ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ, ಇಂಗ್ಲೆಂಡ್ ಎದುರು 9 ರನ್‌ಗಳಿಂದ ಸೋಲನುಭವಿಸುವ ಮೂಲಕ ವಿಶ್ವಕಪ್ ಚಾಂಪಿಯನ್ ಪಟ್ಟದಿಂದ ವಂಚಿತವಾಗಿತ್ತು. ಆದರೆ ಈ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಲೆಕ್ಕಾಚಾರದಲ್ಲಿದ್ದು ಹಿಂದೆ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಲಿದೆ. 

ಭಾರತ, ಲೀಗ್‌ನ ನಾಲ್ಕೂ ಪಂದ್ಯಗಳನ್ನು ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಆಡಿತ್ತು. ಆಡಿರುವ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಭಾರತ, ಸದ್ಯ ಸೆಮಿಫೈನಲ್ ಪಂದ್ಯವನ್ನು ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಆಡಬೇಕಿದೆ. ಹರ್ಮನ್‌ಪ್ರೀತ್ ಕೌರ್ ಪಡೆ, ಲೀಗ್ ಹಂತದಲ್ಲಿ ಬಲಿಷ್ಠ ತಂಡಗಳಾದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಕ್ರಮವಾಗಿ 34 ಮತ್ತು 48 ರನ್‌ಗಳಿಂದ ಸೋಲಿಸಿದ್ದು, ಇಂಗ್ಲೆಂಡ್ ತಂಡವನ್ನು ಪರಾಭವಗೊಳಿ ಸುವ ವಿಶ್ವಾಸದಲ್ಲಿದೆ.

ವಿಶ್ರಾಂತಿಯಲ್ಲಿದ್ದ ಭಾರತ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್, ತಂಡಕ್ಕೆ ಮರಳಲಿದ್ದು ಬ್ಯಾಟಿಂಗ್ ಮತ್ತಷ್ಟು ಬಲಗೊಳ್ಳಲಿದೆ. ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅಮೋಘ ಫಾರ್ಮ್‌ನಲ್ಲಿದ್ದು, ಮತ್ತಷ್ಟು ರನ್ ಹರಿಸುವ ವಿಶ್ವಾಸದಲ್ಲಿದ್ದಾರೆ. ಆದರೆ ರಾಜ್ಯದ ಮೂಲದ ಜೆಮಿಮಾ ರೋಡ್ರಿಗಾಸ್ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಪರಿಣಾಮ ಬೀರಿದ್ದಾರೆ. 

ಸ್ಪಿನ್ನರ್ ಗಳಾದ ಪೂನಂ ಯಾದವ್(8), ರಾಧಾ ಯಾದವ್(7) ರ್ನಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಿದ್ದು, ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ದೀಪ್ತಿ ಶರ್ಮಾ ಮತ್ತು ದಯಾಳನ್ ಹೇಮಲತಾ ಇನ್ನಷ್ಟು ಸುಧಾರಿತ ಪ್ರದರ್ಶನ ನೀಡುವ ಅಗತ್ಯವಿದೆ. ಆದರೆ ವೇಗಿಗಳಾದ ಅರುಧಂತಿ ರೆಡ್ಡಿ ಮತ್ತು ಮಾನ್ಸಿ
ಜೋಶಿ ಕೂಡ ಸ್ಪಿನ್ನರ್‌ಗಳಿಗೆ ಸಾಥ್ ನೀಡುವ ಅಗತ್ಯವಿದೆ.

ಇತ್ತ ಇಂಗ್ಲೆಂಡ್ ಕೂಡ ಭಾರತ ತಂಡವನ್ನು ಮಣಿಸಲು ತಂತ್ರ ರೂಪಿಸುತ್ತಿದ್ದ, ಹೆಚ್ಚಾಗಿ ವೇಗಿಗಳನ್ನು ನೆಚ್ಚಿಕೊಂಡಿದೆ. ವೇಗಿ ಅನ್ಯಾ ಶ್ರಬ್ಸೋಲ್(7) ಮತ್ತು ನೇಟಲಿ ಶೀವರ್(4) ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಆ್ಯಮಿ ಜೋನ್ಸ್, ಡ್ಯಾನಿ ವ್ಯಾಟ್ ಮತ್ತು ಹೀದರ್ ನೈಟ್ ಮತ್ತಷ್ಟು ರನ್ ಹರಿಸುವ ವಿಶ್ವಾಸದಲ್ಲಿದ್ದಾರೆ.
 

click me!