ದೈತ್ಯ ಸಂಹಾರಿಯಾಗಿ ಗುರುತಿಸಿಕೊಂಡಿರುವ ಐರ್ಲೆಂಡ್ ವಿರುದ್ಧ ಗೆದ್ದರೆ, ಭಾರತ ವಿಶ್ವಕಪ್ ಉಪಾಂತ್ಯಕ್ಕೆ 2 ಬಾರಿ ಪ್ರವೇಶಿಸಿದಂತೆ ಆಗುತ್ತದೆ. 1974ರ ವಿಶ್ವಕಪ್‌ನಲ್ಲಿ ಭಾರತ ಸೆಮೀಸ್'ಗೇರಿ, 4ನೇ ಸ್ಥಾನ ಪಡೆದಿತ್ತು. ಇದು ತಂಡದ ಈವರೆಗಿನ ಶ್ರೇಷ್ಠ ಸಾಧನೆಯಾಗಿದೆ.
ಲಂಡನ್[ಆ.02]: ಲಯಕ್ಕೆ ಮರಳಿರುವ ಭಾರತ ತಂಡ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಮೇಲೆ ಕಣ್ಣಿಟ್ಟಿದೆ. ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣಸಲಿದ್ದು, 44 ವರ್ಷಗಳಲ್ಲಿ ಮೊದಲ ಬಾರಿಗೆ ಸೆಮೀಸ್ ಗೇರುವ ಗುರಿ ಹೊಂದಿದೆ. ಇಟಲಿ ವಿರುದ್ಧ ಮಂಗಳವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪ್ಲೇ-ಆಫ್‌ನಲ್ಲಿ 3-0 ಗೆಲುವು ಸಾಧಿಸುವ ಮೂಲಕ, ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು.
ದೈತ್ಯ ಸಂಹಾರಿಯಾಗಿ ಗುರುತಿಸಿಕೊಂಡಿರುವ ಐರ್ಲೆಂಡ್ ವಿರುದ್ಧ ಗೆದ್ದರೆ, ಭಾರತ ವಿಶ್ವಕಪ್ ಉಪಾಂತ್ಯಕ್ಕೆ 2 ಬಾರಿ ಪ್ರವೇಶಿಸಿದಂತೆ ಆಗುತ್ತದೆ. 1974ರ ವಿಶ್ವಕಪ್‌ನಲ್ಲಿ ಭಾರತ ಸೆಮೀಸ್ ಗೇರಿ, 4ನೇ ಸ್ಥಾನ ಪಡೆದಿತ್ತು. ಇದು ತಂಡದ ಈವರೆಗಿನ ಶ್ರೇಷ್ಠ ಸಾಧನೆಯಾಗಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ, ಐರ್ಲೆಂಡ್ ವಿರುದ್ಧ 0-1 ಗೋಲಿನಿಂದ ಸೋಲುಂಡು, ಆಘಾತಕ್ಕೊಳಗಾಗಿತ್ತು. ಪಂದ್ಯದಲ್ಲಿ 7 ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕರೂ ಒಂದರಲ್ಲೂ ಗೋಲು ಗಳಿಸಿರಲಿಲ್ಲ. ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ.
ಮತ್ತೊಂದೆಡೆ ಭಾರತ, ಅಮೆರಿಕ ವಿರುದ್ಧ ಗೆದ್ದ ಐರ್ಲೆಂಡ್ ಆತಿಥೇಯ ಇಂಗ್ಲೆಂಡ್ ವಿರುದ್ಧ 0-1ರಲ್ಲಿ ಸೋಲುಂಡಿತು. ಆದರೂ, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಇಟಲಿ ವಿರುದ್ಧ ಭಾರತ ಉತ್ತಮ ಪ್ರದರ್ಶನ ತೋರಿದರೂ, ಐರ್ಲೆಂಡ್ ಮಣಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಐರಿಷ್ ಪಡೆ ವಿರುದ್ಧ ಕಳೆದ 2 ಮುಖಾಮುಖಿಯಲ್ಲಿ ಭಾರತ ಸೋತಿದ್ದು, ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಗುರಿ ಹೊಂದಿದೆ.