
ಆ್ಯಂಟಿಗುವಾ(ಜೂ.30): ಆರಂಭಿಕ ಬ್ಯಾಟ್ಸ್'ಮನ್'ಗಳ ವೈಫಲ್ಯದ ನಡುವೆಯೂ ಅಜಿಂಕ್ಯ ರಹಾನೆ(72) ಹಾಗೂ ಮಹೇಂದ್ರ ಸಿಂಗ್ ಧೋನಿ(78*) ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಸವಾಲಿನ ಮೊತ್ತ ಕಲೆಹಾಕಿದೆ.
ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ತಮ್ಮ ಬ್ಯಾಟಿಂಗ್ ಲಯ ಮುಂದುವರಿಸಿದ್ದು, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸತತ 3 ಪಂದ್ಯಗಳಲ್ಲಿ 50ಕ್ಕಿಂತ ಹೆಚ್ಚು ರನ್ ಕಲೆಹಾಕಿದ ಸಾಧನೆ ಮಾಡಿದರು.
ಟಾಸ್ ಗೆದ್ದ ವೆಸ್ಟ್‌ಇಂಡೀಸ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಸರಣಿಯಲ್ಲಿ ರಹಾನೆ ಜತೆ ಸತತ 2 ಪಂದ್ಯಗಳಲ್ಲಿ ಶತಕದ ಜೊತೆಯಾಟವಾಡಿ ಮಿಂಚಿದ್ದ ಶಿಖರ್ ಧವನ್ 3ನೇ ಓವರ್'ನಲ್ಲಿ ಕೇವಲ ೨ ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ಮೂಲಕ ಸತತ 6 ಪಂದ್ಯಗಳಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದ ಈ ಜೋಡಿ, ವಿಶ್ವ ದಾಖಲೆ ಸರಿಗಟ್ಟುವ ಅವಕಾಶವನ್ನು ಕೈಚೆಲ್ಲಿತು.
3ನೇ ಕ್ರಮಾಂಕದಲ್ಲಿ ಕ್ರೀಸ್'ಗಿಳಿದ ನಾಯಕ ವಿರಾಟ್ ಕೊಹ್ಲಿ 11 ರನ್ ಗಳಿಸಿದ್ದಾಗ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಕೈಲ್ ಹೋಪ್'ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಹೆಜ್ಜೆಹಾಕಿದರು. 3ನೇ ವಿಕೆಟ್'ಗೆ ರಹಾನೆಯೊಂದಿಗೆ ಜೊತೆಯಾಟದಲ್ಲಿ ಭಾಗಿಯಾದ ಹಿರಿಯ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 66 ರನ್ ಸೇರಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಯುವರಾಜ್ ರನ್ ಗಳಿಸಲು ಪರದಾಡಿದ ರೀತಿ ಅವರ ಲಯ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯೆಂಬಂತಿತ್ತು. 55 ಎಸೆತಗಳನ್ನು ಎದುರಿಸಿದ ಯುವಿ, 4 ಬೌಂಡರಿಗಳೊಂದಿಗೆ 39 ರನ್ ಗಳಿಸಿದರು. ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ ಎಸೆತದಲ್ಲಿ ಯುವರಾಜ್ ಎಲ್‌ಬಿ ಬಲೆಗೆ ಬಿದ್ದರು.
ಆದರೆ ಕೆಳಕ್ರಮಾಂಕದಲ್ಲಿ ಭರ್ಜರಿ ಆಟವಾಡಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೇದಾರ್ ಜಾಧವ್ ತಂಡದ ರನ್ ವೇಗಕ್ಕೆ ಚುರುಕು ನೀಡಿದರು. ಐದನೇ ವಿಕೆಟ್'ಗೆ ಮುರಿಯದ 91ರನ್'ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಸಫಲವಾದರು.
ಸಂಕ್ಷಿಪ್ತ ಸ್ಕೋರ್ :
ಭಾರತ 251/4
ಎಂ.ಎಸ್. ಧೋನಿ : 78*
ಅಜಿಂಕ್ಯ ರಹಾನೆ : 72
ಬೌಲಿಂಗ್:
ಮಿಗುಲ್ ಕಮಿನ್ಸ್ : 56/2
ವಿವರ ಅಪೂರ್ಣ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.