ವಿಂಬಲ್ಡನ್‌ 2018: 3ನೇ ಸುತ್ತು ಪ್ರವೇಶಿಸಿದ ರಾಫೆಲ್ ನಡಾಲ್-ಜೋಕೋವಿಚ್

First Published Jul 6, 2018, 9:54 AM IST
Highlights

ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂನಲ್ಲಿ ರಾಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿರುವ ನಡಾಲ್ ಹಾಗೂ ಜೋಕೋವಿಚ್ ಪ್ರದದರ್ಶನ ಹೇಗಿತ್ತು? ಇಲ್ಲಿದೆ ವಿವರ

ಲಂಡನ್‌(ಜು.06): ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ಆರಂಭಿಕ ಹಂತದಲ್ಲೇ ರೋಚಕ ಘಟ್ಟ ತಲುಪಿದೆ. ದಿಗ್ಗಜ ಹೋರಾಟ ಅಭಿಮಾನಿಗಳ ಸಂಭ್ರಮವನ್ನ ಇಮ್ಮಡಿಗೊಳಿಸಿದೆ.  ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂನಲ್ಲಿ ನೆಚ್ಚಿನ ಆಟಗಾರರ ಗೆಲುವಿನ ಓಟ ಮುಂದುವರಿದಿದೆ. 

ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ಚಾಂಪಿಯನ್ನರಾದ ರಾಫೆಲ್‌ ನಡಾಲ್‌ ಹಾಗೂ ನೋವಾಕ್‌ ಜೋಕೋವಿಚ್‌ 3ನೇ ಸುತ್ತಿಗೆ ಪ್ರವೇಶ ಪಡೆದರೆ, ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಸಿಮೋನಾ ಹಾಲೆಪ್‌ 2ನೇ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ಮುನ್ನಡೆದರು.

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1, ಸ್ಪೇನ್‌ನ ನಡಾಲ್‌ಗೆ ಕಜಕಸ್ತಾನದ ಮಿಕೈಲ್‌ ಕುಕುಶ್ಕಿನ್‌ ಎದುರಾಗಿದ್ದರು. 6-4, 6-3, 6-4 ನೇರ ಸೆಟ್‌ಗಳಲ್ಲಿ ಎದುರಾಳಿಗೆ ಸೋಲುಣಿಸಿದ ನಡಾಲ್‌, ಪ್ರಾಬಲ್ಯ ಮೆರೆದರು. ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ 12ನೇ ಶ್ರೇಯಾಂಕಿತ ಆಟಗಾರ ಸರ್ಬಿಯಾದ ಜೋಕೋವಿಚ್‌, ಅರ್ಜೆಂಟೀನಾದ ಜೆಬಲೋಸ್‌ ವಿರುದ್ಧ ಸೆಣಸಿದರು. 6-1, 6-2, 6-3 ಸೆಟ್‌ಗಳಲ್ಲಿ ಪಂದ್ಯ ಜೋಕೋ ಪಾಲಾಯಿತು.

ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ಚೀನಾದ ಜೆಂಗ್‌ ಸಾಯ್ಸಾಸ್‌ ವಿರುದ್ಧ 7-5, 6-0 ಸೆಟ್‌ಗಳಲ್ಲಿ ಹಾಲೆಪ್‌ ನಿರಾಯಾಸವಾಗಿ ಗೆಲುವು ಪಡೆದರು. ಹಾಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿರುವ ಹಾಲೆಪ್‌, ಚೊಚ್ಚಲ ವಿಂಬಲ್ಡನ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಶರಣ್‌ ಜೋಡಿಗೆ ಜಯ: ಪುರುಷರ ಡಬಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ದಿವಿಜ್‌ ಶರಣ್‌ ಹಾಗೂ ನ್ಯೂಜಿಲೆಂಡ್‌ನ ಆರ್ಟೆಮ್‌ ಸಿಟಾಕ್‌ ಜೋಡಿ, ಟ್ಯುನೀಷಿಯಾದ ಮಲೆಕ್‌ ಜಜಿರಿ ಹಾಗೂ ಮೊಲ್ಡೋವಾದ ರಾಡು ಆಲ್ಬೋಟ್‌ ವಿರುದ್ಧ 7-6,6-7,6-3,6-2 ಸೆಟ್‌ಗಳಲ್ಲಿ ಗೆದ್ದು, 2ನೇ ಸುತ್ತಿಗೇರಿತು.
 

click me!