
ಲಂಡನ್: ಟೆನಿಸ್‌ನ ಯುವ ಸೂಪರ್‌ಸ್ಟಾರ್, ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ಈ ಬಾರಿ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ವಿಶ್ವ ನಂ.1 ಅರೈನಾ ಸಬಲೆಂಕಾ ಕೂಡಾ ಅಂತಿಮ 8ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ 22 ವರ್ಷದ ಆಲ್ಕರಜ್ ಅವರು 14ನೇ ಶ್ರೇಯಾಂಕಿತ, ರಷ್ಯಾದ ಆ್ಯಂಡ್ರೆ ರುಬ್ಲೆವ್ ವಿರುದ್ಧ 6-7(5/7), 6-3, 6-4, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಸತತ 3ನೇ ವಿಂಬಲ್ಡನ್, ಒಟ್ಟಾರೆ 6ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಆಲ್ಕರಜ್‌ಗೆ ಅಂತಿಮ 8ರ ಘಟ್ಟದಲ್ಲಿ ಬ್ರಿಟನ್‌ನ ಕ್ಯಾಮರೂನ್ ನೋರಿ ಸವಾಲು ಎದುರಾಗಲಿದೆ. ಚೊಚ್ಚಲ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ನೋರಿ ಪ್ರಿ ಕ್ವಾರ್ಟರ್‌ನಲ್ಲಿ ಚಿಲಿ ದೇಶದ ನಿಕೋಲಸ್ ಜಾರಿ ವಿರುದ್ಧ ಗೆದ್ದರು.
ಸಬಲೆಂಕಾ ಮಿಂಚು: ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸನ್ ಸಬಲೆಂಕಾ ಪ್ರಾಬಲ್ಯ ಮುಂದುವರಿಸಿದರು. ಅವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 24ನೇ ಶ್ರೇಯಾಂಕಿತೆ, ಬೆಲ್ಜಿಯಂನ ಎಲೈಸ್ ಮೆರ್ಟನ್ಸ್ ವಿರುದ್ಧ 6-4, 7-6(7/4) ಸೆಟ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಅಮೆರಿಕದ 13ನೇ ಶ್ರೇಯಾಂಕಿತ ಅಮಂಡಾ ಅನಿಸಿಮೋವಾ ಅವರು ಚೆಕ್ ಗಣರಾಜ್ಯದ 30ನೇ ಶ್ರೇಯಾಂಕಿತ ಲಿಂಡಾ ನೊಸ್ಕೋವಾ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್‌ಗೇರಿದರು.
ಭಾರತೀಯರ ಸವಾಲು ಅಂತ್ಯ
ಈ ಬಾರಿ ವಿಂಬಲ್ಡನ್‌ನಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿತು. ಕಣದಲ್ಲಿದ್ದ ನಾಲ್ವರ ಪೈಕಿ ಯೂಕಿ ಭಾಂಭ್ರಿ ಕೂಡಾ ಸೋಲನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಜಿಯಾಂಗ್ ಕ್ಷಿನ್‌ಯು ಜೊತೆಗೂಡಿ ಕಣಕ್ಕಿಳಿದಿದ್ದ ಭಾಂಭ್ರಿ, ಭಾನುವಾರ ರಾತ್ರಿ ಪ್ರಿ ಕ್ವಾರ್ಟರ್‌ನಲ್ಲಿ ಸೋತರು. ಪುರುಷರ ಡಬಲ್ಸ್‌ನಲ್ಲಿ ಭಾಂಭ್ರಿ-ಅಮೆರಿಕದ ರಾಬರ್ಟ್ ಗ್ಯಾಲೊವೇ ಜೋಡಿಗೆ ಸೋಮವಾರ ಅಂತಿಮ 16ರ ಘಟ್ಟದಲ್ಲಿ ಸೋಲು ಎದುರಾಯಿತು.
ಮಹಿಳಾ ಚೆಸ್ ವಿಶ್ವಕಪ್: ಡ್ರಾ ಸಾಧಿಸಿದ ವಂತಿಕಾ
ಬತೂಮಿ(ಜಾರ್ಜಿಯಾ): ಭಾರತದ ಗ್ರ್ಯಾಂಡ್‌ಮಾಸ್ಟರ್ ವಂತಿಕಾ ಅಗರ್‌ವಾಲ್ ಫಿಡೆ ವಿಶ್ವ ಮಹಿಳಾ ಚೆಸ್ ಕಪ್‌ನ ಮೊದಲ ಸುತ್ತಿನಲ್ಲಿ ತುರ್ಕ್‌ಮೇನಿಸ್ತಾನದ ಲೆಲಾ ಶೋಹ್ರದೆವಾ ವಿರುದ್ಧ ಡ್ರಾ ಸಾಧಿಸಿದ್ದಾರೆ. ಪದ್ಮಿನಿ ರಾವತ್, ನಂದಿಧಾ ಮೊದಲ ಸುತ್ತು ಗೆದ್ದು 2ನೇ ಸುತ್ತಿಗೇರಿದರೆ, ಪ್ರಿಯಾಂಕ ಹಾಗೂ ಕಿರಣ್ ಮನಿಶಾ ಸೋತು ಹೊರಬಿದ್ದರು. ಉಳಿದಂತೆ ಭಾರತದ ಇತರ ಸ್ಪರ್ಧಿಗಳಾದ ಕೊನೆರು ಹಂಪಿ, ಡಿ.ಹರಿಕಾ, ಆರ್.ವೈಶಾಲಿ, ದಿವ್ಯಾ ದೇಶ್‌ಮುಖ್ ನೇರವಾಗಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಶೂಟಿಂಗ್ ವಿಶ್ವಕಪ್‌ಗೆ ಕರ್ನಾಟಕದ ದಿವ್ಯಾ ಆಯ್ಕೆ
ನವದೆಹಲಿ: ಸೆ.7ರಿಂದ 15ರ ವರೆಗೆ ಚೀನಾದಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಇದರಲ್ಲಿ ಕರ್ನಾಟಕದ ದಿವ್ಯಾ ಟಿ.ಎಸ್. ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2023ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ 2 ಬೆಳ್ಳಿ ಗೆದ್ದಿದ್ದ ದಿವ್ಯಾ ಅವರು ವಿಶ್ವಕಪ್‌ನಲ್ಲಿ ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.