ಭಾರತವಿಲ್ಲದಿದ್ದರೆ ಏನು, ಬೇರೆ ದೇಶದ ಪರ ಆಡುತ್ತೇನೆ ಎಂದ ಭಾರತೀಯ ಕ್ರಿಕೆಟಿಗ

By Suvarna Web DeskFirst Published Oct 21, 2017, 11:12 AM IST
Highlights

ಕೇರಳ ಹೈಕೋರ್ಟ್ ಆಜೀವ ನಿಷೇಧದ ತೀರ್ಪನ್ನು ಎತ್ತಿಹಿಡಿದ ಬಳಿಕ ವೇಗದ ಬೌಲರ್ ಶ್ರೀಶಾಂತ್ ತಾವು ಬೇರೆ ದೇಶದ ಪರ ಕ್ರಿಕೆಟ್ ಆಡಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಕೇರಳ ಹೈಕೋರ್ಟ್ ಆಜೀವ ನಿಷೇಧದ ತೀರ್ಪನ್ನು ಎತ್ತಿಹಿಡಿದ ಬಳಿಕ ವೇಗದ ಬೌಲರ್ ಶ್ರೀಶಾಂತ್ ತಾವು ಬೇರೆ ದೇಶದ ಪರ ಕ್ರಿಕೆಟ್ ಆಡಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ‘ಕನ್ನಡಪ್ರಭ’ ಸೋದರ ಸಂಸ್ಥೆ ‘ಏಷ್ಯಾನೆಟ್ ನ್ಯೂಸ್’ಗೆ ನೀಡಿರುವ ಸಂದರ್ಶನದಲ್ಲಿ ಶ್ರೀಶಾಂತ್ ‘ನನಗೀಗ 34 ವರ್ಷ ವಯಸ್ಸು. ನನ್ನಲ್ಲಿ ಇನ್ನೂ 5-6 ವರ್ಷ ಆಟ ಬಾಕಿ ಇದೆ. ನನ್ನ ಮೇಲೆ ನಿಷೇಧ ಹೇರಿರುವುದು ಬಿಸಿಸಿಐ. ಐಸಿಸಿ ಅಲ್ಲ. ಭಾರತವಲ್ಲದಿದ್ದರೆ ಏನಂತೆ, ಬೇರೆ ದೇಶದ ಪರ ನಾನು ಆಡಬಹುದು’ ಎಂದು ಹೇಳಿದ್ದಾರೆ.

‘ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ನಾನು ಇನ್ನಷ್ಟು ವರ್ಷಗಳ ಕಾಲ ಕ್ರಿಕೆಟ್‌'ನಲ್ಲಿ ಮುಂದುವರಿಯಲು ಇಚ್ಛಿಸುತ್ತೇನೆ. ಬಿಸಿಸಿಐ ಒಂದು ಖಾಸಗಿ ಸಂಸ್ಥೆ. ನಾವಷ್ಟೇ ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಹೇಳಿಕೊಂಡು ಹೆಮ್ಮೆ ಪಡುತ್ತೇವೆ’ ಎಂದು ಶ್ರೀಶಾಂತ್ ಹೇಳಿದ್ದಾರೆ. ಆಜೀವ ನಿಷೇಧ ಮರು ಜಾರಿಯಾದ ಬಳಿಕ ಶ್ರೀಶಾಂತ್ ಟ್ವಿಟರ್‌'ನಲ್ಲಿ ತೀರ್ಪನ್ನು ಖಂಡಿಸಿದ್ದರು.

ಶ್ರೀಶಾಂತ್ ಆಸೆಗೆ ಬಿಸಿಸಿಐ ತಣ್ಣೀರು:

ಶ್ರೀಶಾಂತ್ ಬೇರೊಂದು ದೇಶದ ಪರ ಕ್ರಿಕೆಟ್ ಆಡಲು ಇಚ್ಛಿಸುತ್ತಿರುವುದಾಗಿ ಹೇಳಿಕೊಂಡ ಕೆಲವೇ ಗಂಟೆಗಳಲ್ಲಿ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ, ಕೇರಳ ವೇಗಿಯ ಆಸೆಗೆ ತಣ್ಣೀರೆರೆಚಿದರು. ‘ಮೊದಲಿಗೆ ಶ್ರೀಶಾಂತ್ ಯಾವ ಆಧಾರದ ಮೇಲೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಬಿಸಿಸಿಐ ಅವರನ್ನು ನಿಷೇಧಗೊಳಿಸಿದೆ ಎಂದ ಮೇಲೆ ಐಸಿಸಿಯ ಯಾವುದೇ ಪೂರ್ಣಾವಧಿ ಸದಸ್ಯ ರಾಷ್ಟ್ರ ಇಲ್ಲವೇ ಸಹಾಯಕ ಸದಸ್ಯ ರಾಷ್ಟ್ರಗಳ ಪರ ಅವರು ಆಡಲು ಸಾಧ್ಯವಿಲ್ಲ. ಹೀಗಾಗಿ ಶ್ರೀಶಾಂತ್ ಹೇಳಿಕೆಯಲ್ಲಿ ಯಾವುದೇ ತಿರುಳಿಲ್ಲ. ಒಂದೊಮ್ಮೆ ಅವರನ್ನು ನಿಷೇಧಿಸಿಲ್ಲ ಎಂದಾದರೂ, ಆಯ್ಕೆಗಾರರು ಆಯ್ಕೆ ಮಾಡದೆ ಭಾರತ ತಂಡದೊಳಗೆ ಅವರು ಕಾಲಿಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರಕರಣ ಏನು?:

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶ್ರೀಶಾಂತ್‌'ರನ್ನು ಬಿಸಿಸಿಐ ಆಜೀವ ನಿಷೇಧಕ್ಕೆ ಗುರಿಪಡಿಸಿತ್ತು. ಬಳಿಕ ಕೇರಳ ಹೈಕೋರ್ಟ್‌'ನ ಏಕಸದಸ್ಯ ಪೀಠ ಅವರ ವಿರುದ್ಧದ ನಿಷೇಧವನ್ನು ತೆರವು ಗೊಳಿಸಿತ್ತು. ಬಳಿಕ ಈ ತೀರ್ಪುನ್ನು ಪ್ರಶ್ನಿಸಿ ಬಿಸಿಸಿಐ ನ್ಯಾಯಾಲಯದಲ್ಲಿ ಮರು ಅರ್ಜಿ ಸಲ್ಲಿಸಿತ್ತು. ಕೇರಳ ಹೈಕೋರ್ಟ್‌'ನ ದ್ವಿಸದಸ್ಯ ಪೀಠ ಬಿಸಿಸಿಐ ಅರ್ಜಿ ಪರಿಶೀಲಿಸಿದ ಬಳಿಕ, ಆಜೀವ ನಿಷೇಧವನ್ನು ಮರು ಜಾರಿಗೊಳಿಸಿತ್ತು.

click me!