ವಿಶ್ವಾಸದ ಚಿಲುಮೆ: ಕಾಲು ಹೋದರೇನಂತೆ, ವ್ಹೀಲ್’ಚೇರ್’ನಲ್ಲೇ ಸ್ಪರ್ಧಿಸುವೆ

By Web DeskFirst Published Sep 5, 2018, 12:58 PM IST
Highlights

ಗರಿಮಾ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಗಳಲ್ಲಿ ಪದಕ ಗೆಲ್ಲುವ ಕನಸು ಕಂಡವರು. ಆದರೆ ಅವರ ಜೀವನದಲ್ಲಿ ನಡೆದ ಒಂದು ಅಪಘಾತ ಸಾಧನೆಯ ಕನಸುಗಳನ್ನು ನುಚ್ಚುನೂರು ಮಾಡಿತು. ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಗರಿಮಾ, ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಅಪಘಾತ ಬಳಿಕವೂ ಅತ್ಯಂತ ಲವಲವಿಕೆಯಿಂದಲೇ ಇದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಮತ್ತೆ ವ್ಹೀಲ್‌ಚೇರ್‌ನಿಂದ ತಮ್ಮ ಸಾಧನೆಯ ಓಟ ಮುಂದುವರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದು,‘ಕನ್ನಡಪ್ರಭ’ದೊಂದಿಗೆ ಮನದಾಳ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು[ಸೆ.05]: ಅಪಘಾತದಲ್ಲಿ ಕಾಲು ಹೋದರೇನಂತೆ, ನಾನು ಛಲ ಬಿಡುವುದಿಲ್ಲ. ಚಿಕಿತ್ಸೆ ಬಳಿಕ ಮತ್ತೆ ವ್ಹೀಲ್‌ಚೇರ್ ಮೂಲಕ ನನ್ನ ಓಟ ಆರಂಭಿಸುತ್ತೇನೆ’ ಇವು ಕಾರು ಅಪಘಾತದಲ್ಲಿ ಕಾಲು ಕಳೆದುಕೊಂಡ ಮ್ಯಾರಥಾನ್ ಓಟಗಾರ್ತಿ ಗರಿಮಾ ಜೋಶಿಯ ಆತ್ಮವಿಶ್ವಾಸದ ನುಡಿಗಳು.

ಗರಿಮಾ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಗಳಲ್ಲಿ ಪದಕ ಗೆಲ್ಲುವ ಕನಸು ಕಂಡವರು. ಆದರೆ ಅವರ ಜೀವನದಲ್ಲಿ ನಡೆದ ಒಂದು ಅಪಘಾತ ಸಾಧನೆಯ ಕನಸುಗಳನ್ನು ನುಚ್ಚುನೂರು ಮಾಡಿತು. ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಗರಿಮಾ, ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಅಪಘಾತ ಬಳಿಕವೂ ಅತ್ಯಂತ ಲವಲವಿಕೆಯಿಂದಲೇ ಇದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಮತ್ತೆ ವ್ಹೀಲ್‌ಚೇರ್‌ನಿಂದ ತಮ್ಮ ಸಾಧನೆಯ ಓಟ ಮುಂದುವರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದು,‘ಕನ್ನಡಪ್ರಭ’ದೊಂದಿಗೆ ಮನದಾಳ ಬಿಚ್ಚಿಟ್ಟಿದ್ದಾರೆ.

ಗರಿಮಾ ಮೂಲತಃ ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ರಾಣಿಖೇತ್ ಗ್ರಾಮದವರು. ಸದ್ಯ ಬಿಎ ಪ್ರಥಮ ವರ್ಷ ಓದುತ್ತಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಗಳಲ್ಲಿ ಪಾಲ್ಗೊಂಡು ಹಲವು ಪದಕಗಳನ್ನು ಗೆದ್ದಿದ್ದಾರೆ. ಗರಿಮಾ, ತಂದೆ ಪೂರ್ಣಚಂದ್ರ ಜೋಶಿ ಖಾಸಗಿ ವಾಹನದ ಚಾಲಕರಾಗಿದ್ದು, ತಾಯಿ ಆಶಾ ಜೋಶಿ ಗೃಹಿಣಿ. ಜೋಶಿ ವಾಹನ ಚಾಲನೆಯಿಂದ ಬರುವ ಸ್ವಲ್ಪ ಆದಾಯದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಗರಿಮಾಗೆ ಸಂಭವಿಸಿದ ಅಪಘಾತದ ಆಘಾತದಿಂದ ಕುಟುಂಬ ಇನ್ನೂ ಹೊರಬಂದಿಲ್ಲ.

ಅಭ್ಯಾಸ ನಡೆಸುತ್ತಿದ್ದಾಗ ಗುದ್ದಿದ ಕಾರು: ಉಡುಪಿಯಲ್ಲಿ ಮಾಚ್'ನರ್ಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಗರಿಮಾ, ಉಡುಪಿ ಸಮೀಪವಿರುವ ಕಾರ್ಗಲ್ ಬಳಿ ಅಭ್ಯಾಸ ನಡೆಸುತ್ತಿದ್ದರು. ಅಭ್ಯಾಸ ನಡೆಸುತ್ತಿರುವ ವೇಳೆ ಹಿಂದಿನಿಂದ ಬಂದ ಕಾರೊಂದು ಗರಿಮಾಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಅವಘಡದಲ್ಲಿ ಗರಿಮಾ ಬೆನ್ನು ಮೂಳೆ ಮುರಿತಕ್ಕೊಳಗಾಯಿತು. ಕಾಲುಗಳಿಗೆ ಗಂಭೀರವಾದ ಪೆಟ್ಟು ಬಿತ್ತು. ಬಳಿಕ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಅಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದರಿಂದ ಗರಿಮಾಗೆ ಗಾಲಿಕುರ್ಚಿ ಕಾಯಂ ಆಯಿತು. ಈಗ ಗರಿಮಾ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗರಿಮಾ ಕನಿಷ್ಠ ಮೂರು ವರ್ಷಗಳಾದರೂ ವ್ಹೀಲ್‌ಚೇರ್ ಮೇಲೆ ಕುಳಿತೇ ಓಡಾಡಬೇಕಿದೆ. ಮೂರು ವರ್ಷಗಳ ಬಳಿಕ ಗರಿಮಾ ನಡೆದಾಡಲು ಸಾಧ್ಯವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಚಿಕಿತ್ಸೆಗೆ ಸರ್ಕಾರದ ನೆರವು: ಗರಿಮಾ ಜೋಶಿ ಚಿಕಿತ್ಸೆಗಾಗಿ ಅವರ ಕುಟುಂಬ ಹಣ ಜೋಡಿಸಲು ಕಷ್ಟಪಡುತ್ತಿದ್ದ ವೇಳೆಯಲ್ಲಿ ಕುಟುಂಬದ ನೆರವಿಗೆ ಉತ್ತರಾಖಂಡ ಸರ್ಕಾರ ಧಾವಿಸಿದೆ. ಗರಿಮಾ ಚಿಕಿತ್ಸೆಗೆ ಸದ್ಯ ಪ್ರತಿ ತಿಂಗಳು ₹ 5 ಲಕ್ಷದವರೆಗೂ ಖರ್ಚಾಗುತ್ತಿದೆ. ಗರಿಮಾ ಅವರ ಅಪಘಾತದ ವಿಷಯ ತಿಳಿದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸರ್ಕಾರವೇ ಭರಿಸುತ್ತದೆ ಎಂಬ ಭರವಸೆ ನೀಡಿದ್ದಾರೆ. ಅಲ್ಲದೆ ಆ.21ರಂದು ಬೆಂಗಳೂರಿಗೆ ಆಗಮಿಸಿ ಗರಿಮಾ ಆರೋಗ್ಯ ವಿಚಾರಿಸಿ, ಆತ್ಮವಿಶ್ವಾಸ ತುಂಬಿದ್ದಾರೆ.

ಸ್ವಲ್ಪ ಯಮಾರಿದ್ರೂ ಯಮಪಾಲು: ಮ್ಯಾರಥಾನ್ ಅಥ್ಲೀಟ್'ಗಳು ರಸ್ತೆಗಳಲ್ಲಿ ಅಭ್ಯಾಸ ಮಾಡುವ ವೇಳೆ ಟ್ರಾಫಿಕ್ ಕುರಿತು ಅತ್ಯಂತ ಎಚ್ಚರ ವಹಿಸಬೇಕು. ಮೈಯೆಲ್ಲ ಕಣ್ಣಾಗಿದ್ದುಕೊಂಡು ಓಟದ ಅಭ್ಯಾಸ ನಡೆಸಬೇಕು. ಇಲ್ಲದಿದ್ದರೆ ಇಂತಹ ಅವಘಡಗಳು ಸಂಭವಿಸುತ್ತವೆ. ಇದರಿಂದಾಗಿ ಅಥ್ಲೀಟ್‌ಗಳ ಮುಂದಿನ ಭವಿಷ್ಯವೇ ಮುದುಡಿ ಹೋಗುತ್ತದೆ. ವಾಹನಗಳ ಕುರಿತು ಎಚ್ಚರಿಕೆ ಇರಲಿ ಎಂದು ಗರಿಮಾ ಅಥ್ಲೀಟ್‌ಗಳಿಗೆ ಕಿವಿಮಾತು ಹೇಳಿದ್ದಾರೆ.

ಗರಿಮಾ ಪದಕಗಳು: 
ರಾಜ್ಯ ಚಾಂಪಿಯನ್’ಶಿಪ್’ನಲ್ಲಿ 3000 ಮೀ. ಚಿನ್ನ
ರಾಜ್ಯ ಚಾಂಪಿಯನ್’ಶಿಪ್’ನಲ್ಲಿ 1500 ಮೀ. ಚಿನ್ನ
ರಾಜ್ಯ ಚಾಂಪಿಯನ್’ಶಿಪ್’ನಲ್ಲಿ 800 ಮೀ ಬೆಳ್ಳಿ
ಡೆಹ್ರಾಡೂನ್ 5 ಕಿ.ಮೀ. ಮ್ಯಾರಥಾನ್’ನಲ್ಲಿ ಬೆಳ್ಳಿ
ರಾಣಿಖೇತ್ 5 ಕಿ.ಮೀ. ಮ್ಯಾರಥಾನ್’ನಲ್ಲಿ ಬೆಳ್ಳಿ

ವರದಿ: ಮಲ್ಲಪ್ಪ.ಸಿ. ಪಾರೇಗಾಂವ, ಕನ್ನಡಪ್ರಭ 

click me!