
ನವದೆಹಲಿ(ಮಾ.24): ಮಹಿಳಾ ಕ್ರಿಕೆಟ್ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಸಂತಸ ಹೆಚ್ಚಿಸುವ ಪ್ರಸಂಗವೊಂದು ಶುಕ್ರವಾರ ನಡೆಯಿತು. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಟಿ20 ಪಂದ್ಯವನ್ನು ವೀಕ್ಷಿಸಲು 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಇಲ್ಲಿನ ಬ್ರಾಬೊರ್ನ್ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದ್ದಳು. ಕ್ರಿಕೆಟ್ ಉಡುಪು, ಕೈಯಲ್ಲಿ ಬ್ಯಾಟ್ ಹಿಡಿದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ದುರ್ಗಾ ಎನ್ನುವ 11 ವರ್ಷದ ಬಾಲಕಿ, ಇನ್ನಿಂಗ್ಸ್ ಮಧ್ಯೆ ವೀಕ್ಷಕ ವಿವರಣೆಗಾರ್ತಿಯರಾದ ಅಂಜುಂ ಚೋಪ್ರಾ, ಇಶಾ ಗುಹಾ ಹಾಗೂ ಮೆಲ್ ಜೋನ್ಸ್'ರನ್ನು ನೋಡಿದಳು.
ಅವರೊಂದಿಗೆ ಮಾತನಾಡಲು ಯತ್ನಿಸಿದ ದುರ್ಗಾಳನ್ನು ಭದ್ರತಾ ಸಿಬ್ಬಂದಿ ತಡೆದು, ಕಡ್ಡಿ ತೋರಿಸಿ ಸುಮ್ಮನೆ ಕೂರುವಂತೆ ಬೆದರಿಸಿದಾಗ, ಬೇಸರಗೊಂಡ ಬಾಲಕಿಯನ್ನು ಕಂಡ ವ್ಯಕ್ತಿಯೊಬ್ಬ ಟ್ವೀಟರ್ ಮುಖಾಂತರ ಈ ವಿಷಯವನ್ನು ವೀಕ್ಷಕ ವಿವರಣೆಗಾರ್ತಿಯರಿಗೆ ಮುಟ್ಟಿಸಿದಾಗ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಗ್ಯಾಲರಿಗೆ ಬಂದ ಅಂಜುಂ ಹಾಗೂ ಇಶಾ, ಆಕೆಯನ್ನು ಮಾತನಾಡಿಸಿ ಫೋಟೋ ತೆಗೆಸಿಕೊಂಡರು. ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಸಮಾರಂಭಕ್ಕೆ ತೆರಳುವ ಮುನ್ನ ದುರ್ಗಾ ಬಳಿ ಓಡಿಬಂದ ಮೆಲ್ ಜೋನ್ಸ್ ಆಕೆಯನ್ನು ಮುದ್ದಾಡಿ, ಕ್ರಿಕೆಟ್'ನಲ್ಲಿ ಮುಂದುವರಿಯುವಂತೆ ಪ್ರೇರೇಪಿಸಿದರು.
ನಂತರ ಮಾತನಾಡಿದ ಮೆಲ್ ಜೋನ್ಸ್, ‘ಜೂಲನ್ ಗೋಸ್ವಾಮಿ 1997ರ ಮಹಿಳಾ ವಿಶ್ವಕಪ್ ಫೈನಲ್ ನೋಡಲು ಈಡನ್ ಗಾರ್ಡನ್ಸ್'ಗೆ ಬರದಿದ್ದರೆ, ಆಕೆ ಕ್ರಿಕೆಟರ್ ಆಗಬೇಕು ಎಂದು ನಿರ್ಧರಿಸಲು ಸಾಧ್ಯವಾಗುತ್ತಿರಲಿಲ್ಲವೇನೋ. ಅದೇ ರೀತಿ ದುರ್ಗಾ ಸಹ. ನನ್ನ ಕಣ್ಣಿಗೆ ಆಕೆ ಮುಂದೊಂದು ದಿನ, ಮಿಥಾಲಿ ರಾಜ್ ಇಲ್ಲವೇ ಜೂಲನ್ ರೀತಿ ದೊಡ್ಡ ಕ್ರಿಕೆಟ್ ಆಟಗಾರ್ತಿಯಾಗಿ ಬೆಳೆಯುತ್ತಾಳೆ ಎನಿಸುತ್ತಿದೆ’ ಎಂದರು.
ಟ್ವೀಟರ್‌ನಲ್ಲಿ ಭಾರೀ ಟ್ರೆಂಡ್ ಆದ ಬಳಿಕ, ಅಂ.ರಾ.ಕ್ರಿಕೆಟ್ ಸಮಿತಿ ಮಾಜಿ ಕ್ರಿಕೆಟ್ ಆಟಗಾರ್ತಿಯರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿತು. ಜತೆಗೆ ತನ್ನ ಅಧಿಕೃತ ವೆಬ್'ಸೈಟ್ ಈ ಪ್ರಸಂಗದ ಕುರಿತು ಸುದ್ದಿ ಪ್ರಕಟಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.